ಆಲಮೇಲ: ಕೊರೊನಾ ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಆರೋಗ್ಯ ಇಲಾಖೆಯೊಂದಿಗೆ ಅನುಚಿತವಾಗಿ ವರ್ತಿಸದೆ ಸರಿಯಾದ ಮಾಹಿತಿ ನೀಡಿ ಸಹಕರಿಸಿ ಎಂದು ಪಿಎಸ್‌ಐ ನಿಂಗಪ್ಪ ಪೂಜಾರಿ ಹೇಳಿದರು.
ಸ್ಥಳೀಯ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಕೊರೊನಾ ತಡೆಗಟ್ಟುವ ಸಂಬಂಧ ಸರ್ವಧರ್ಮಿಯರ ಸಹಕಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಅತೀ ಅಪಾಯಕಾರಿ ಮಹಾಮಾರಿಯಾಗಿದ್ದು, ಅದನ್ನು ತಡೆಗಟ್ಟಲು ಸರ್ಕಾರ ಎಲ್ಲ ರೀತಿಯ ಕೆಲಸ ಮಾಡುತ್ತಿದೆ. ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಿ ಮನೆಯಲ್ಲೆ ಇರಿ. ನಿಮಗಾಗಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಾಧ್ಯಮದವರು ಹಾಗೂ ವಿವಿಧ ಇಲಾಖೆಯವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಮನೆಯಲ್ಲಿದ್ದು, ಸಹಕರಿಸಿ. ಅನವಶ್ಯಕವಾಗಿ ತಿರುಗಾಡುವರನ್ನು ಆಯಾ ಸಮುದಾಯದ ಮುಖಂಡರು ತಿಳಿ ಹೇಳಬೇಕು ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತರು ತಮ್ಮ ಆರೋಗ್ಯ ಮಾಹಿತಿಗಾಗಿ ಮನೆ ಮನೆಗೆ ಬಂದು ಮಾಹಿತಿ ಸಂಗ್ರಹಿಸುವರು. ಮುಸ್ಲಿಮರು ಎನ್ ಆರ್‌ಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಗೊಂದಲ ಸೃಷ್ಟಿಸಿಕೊಳ್ಳದಿರಲು ಮುಸ್ಲಿಂ ಸಮಾಜದ ಮುಖಂಡರು ಅವರಿಗೆ ತಿಳಿ ಹೇಳುವ ಕಾರ್ಯ ಮಾಡಬೇಕು ಎಂದರು.
ಆರೋಗ್ಯ ಇಲಾಖೆಯವರು ಮನೆಗೆ ಬಂದಾಗ ನಿಮ್ಮ ಮನೆಯಲ್ಲಿ ವಾಸಿಸುವವರ ಮಾಹಿತಿ ಹಾಗೂ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆ ಕೇಳುತ್ತಾರೆ. ಅದಕ್ಕೆ ಎಲ್ಲರು ಸರಿಯಾದ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯಕ್ಕೆ ಅನಕೂಲವಾಗಲಿದೆ ಎಂದು ಹೇಳಿದರು.
ವಿವಿಧ ಸಮಾಜದ ಮುಖಂಡರಾದ ರಮೇಶ ಬಂಟನೂರ, ಮೆಹಬೂಬ್ ಮಸಳಿ, ಶಿವಾನಂದ ಜಗತಿ, ರಿಯಾಜ್ ಬಿಳವಾರ, ರಾಜಹಮ್ಮದ್ ಬಿಳವಾರ, ದೇವಪ್ಪ ಗುಣಾರಿ, ಅಶೋಕ ಕೊಳಾರಿ, ಹಣಮಂತ ಹೂಗಾರ, ಪ್ರಭು ವಾಲೀಕಾರ, ರವಿ ಬಡದಾಳ, ಉಸ್ಮಾನಸಾಬ್ ಮೇಲಿಮನಿ ಹಾಗೂ ವ್ಯಾಪರಸ್ಥರು
ಪಾಲ್ಗೊಂಡಿದ್ದರು.