Advertisement

ಆಲಮಟ್ಟಿ ಜಲಾಶಯ ಹಿನ್ನೀರು ಹೆಚ್ಚಳ

09:27 AM Jul 16, 2019 | Team Udayavani |

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯು ತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು, ಎರಡೇ ದಿನದಲ್ಲಿ ಬಾಗಲಕೋಟೆ ನಗರದ ಸುತ್ತ ಆಲಮಟ್ಟಿ ಜಲಾಶಯದ ಹಿನ್ನೀರು ಹೆಚ್ಚಿದೆ.

Advertisement

ಎರಡು ದಿನಗಳ ಹಿಂದಷ್ಟೇ ಮುಚಖಂಡಿ ಕೆರೆ ತುಂಬುವ ಯೋಜನೆಯ ಜಾಕವೆಲ್ಗೂ ಹಿನ್ನೀರು ಬಂದಿರಲಿಲ್ಲ. ಆದರೆ, ರವಿವಾರ ರಾತ್ರಿಯೇ ಜಾಕವೆಲ್ ಸುತ್ತ ಹಿನ್ನೀರು ಆವರಿಸಿಕೊಂಡಿದೆ. ಹೀಗಾಗಿ 721 ಎಕರೆ ವಿಸ್ತಾರದ ಮುಚಖಂಡಿ ಕೆರೆ ತುಂಬುವ ಯೋಜನೆ ಆರಂಭಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಆಲಮಟ್ಟಿ ಜಲಾಶಯದಲ್ಲಿ 516 ಮೀಟರ್‌ವರೆಗೆ ನೀರು ಸಂಗ್ರಹಗೊಂಡರೆ ಮುಚಖಂಡಿ ಕೆರೆ ತುಂಬಿಸುವ ಜಾಕವೆಲ್ಗೆ ಹಿನ್ನೀರು ಬರುತ್ತದೆ. ಆಗ ಸತತ ಮೂರು ತಿಂಗಳ ಕಾಲ 250 ಎಚ್ಪಿಯ ಎರಡು ಪಂಪ್‌ಸೆಟ್ ಆರಂಭಿಸಿದರೆ ಮುಚಖಂಡಿ ಕೆರೆ ತುಂಬಿಕೊಳ್ಳಲಿದೆ ಎಂಬುದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‌ಗಳ ಲೆಕ್ಕ. ಆದರೆ, 721 ಕೆರೆ ವಿಸ್ತಾರ, ಸುಮಾರು 18 ಅಡಿಯಷ್ಟು ಆಳದಲ್ಲಿರುವ ಮುಚಖಂಡಿ ಕೆರೆಯಲ್ಲಿ ಶೇ.12 ಹೂಳು ತುಂಬಿಕೊಂಡಿದೆ. ಹೀಗಾಗಿ ಎಷ್ಟೇ ನೀರು ತುಂಬಿಸಿದರೂ ಹೂಳು ಹೀರಿಕೊಳ್ಳುತ್ತಿದ್ದು, ಕಳೆದ ಎರಡು ವರ್ಷ ಎಷ್ಟೇ ಪ್ರಯತ್ನಿಸಿದರೂ ಕೆರೆ ಪೂರ್ಣ ತುಂಬಿಸಲು ಆಗಿಲ್ಲ ಎಂಬುದು ಅಧಿಕಾರಿಗಳ ಉತ್ತರವಾಗಿದೆ.

ಮಹತ್ವದ ವೇಳೆಯೇ ಅಧಿಕಾರಿ ವರ್ಗ: ಹಿನ್ನೀರನ್ನು ವಿವಿಧ ಕೆರೆಗಳಿಗೆ ತುಂಬಿಸುವ ಸಮಯ ಈಗ ಆರಂಭಗೊಳ್ಳಬೇಕಿದೆ. ಮುಚಖಂಡಿ ಕೆರೆ, ಶಿರೂರ ಜೋಡಿ ಕೆರೆ ತುಂಬಿಸಲು ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕಿದ್ದು, ಇದೇ ವೇಳೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾಗಿದ್ದ ಶಂಭುಲಿಂಗ ಹೆರಕಲ್, ವಿಜಯಪುರದ ಮುಖ್ಯ ಇಂಜಿನಿಯರ್‌ ಕಚೇರಿಗೆ ವರ್ಗಗೊಂಡಿದ್ದಾರೆ.

ಅಲ್ಲದೇ ಮುಚಖಂಡಿ ಕೆರೆ ತುಂಬಿಸುವ ಜಾಕವೆಲ್ಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ವಿದ್ಯುತ್‌ ವಿತರಣೆ ಕೇಂದ್ರದಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದು, ರಾತ್ರಿಯೇ ದುರಸ್ತಿಗೊಳಿಸಿ ನೀರು ತುಂಬಿಸಲು ಆರಂಭಿಸಲಾಗುವುದು ಎಂದು ಕೆಲ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕಳೆದ ವರ್ಷ ಕೆರೆಗೆ ನೀರು ತುಂಬಿಸುವ ವಿದ್ಯುತ್‌ ಪಂಪ್‌ಸೆಟ್ ಸುಟ್ಟರೆ ಅದನ್ನು ದುರಸ್ತಿಗೊಳಿಸಲು ಎರಡು ತಿಂಗಳ ಅವಧಿಯನ್ನು ಅಧಿಕಾರಿಗಳು ತೆಗೆದುಕೊಂಡಿದ್ದರು. ಪಂಪ್‌ಸೆಟ್ ದುರಸ್ತಿಗೊಳಿಸಿ, ಜಾಕವೆಲ್ಗೆ ತಂದು ಅಳವಡಿಸಿ ನೀರು ತುಂಬಿಸಲು ಆರಂಭಿಸುವ ಹೊತ್ತಿಗೆ ಹಿನ್ನೀರು ಸರಿದು ಹೋಗಿತ್ತು. ಹೀಗಾಗಿ ಮುಚಖಂಡಿ ಕೆರೆ ತುಂಬಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷವೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಟಿಸಿಯಲ್ಲಿ ಕೆಲ ಮೈನರ್‌ ರಿಪೇರಿ ಇವೆ ಎಂಬ ಸಬೂಬು ಹೇಳಿ, ಮತ್ತೆ ನಿರ್ಲಕ್ಷ್ಯ ವಹಿಸುವ ಚಾಳಿ ಮುಂದುವರೆಸಿದ್ದು, ನಿಗದಿತ ಅವಧಿಯಲ್ಲಿ ಕೆರೆ ತುಂಬಿಸಲು ಆರಂಭಿಸುತ್ತಾರಾ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

Advertisement

ಇಂದು ಆರಂಭ: ಐತಿಹಾಸಿಕ ಮುಚಖಂಡಿ ಕೆರೆ ಮತ್ತು ಶಿರೂರ ಜೋಡಿ ಕೆರೆ ತುಂಬಿಸಲು ಮಂಗಳವಾರದಿಂದಲೇ ಆರಂಭಿಸುತ್ತೇವೆ. ಮುಚಖಂಡಿ ಕೆರೆ ತುಂಬಿಸುವ ವಿದ್ಯುತ್‌ ಪರಿವರ್ತಕದಲ್ಲಿ ಸಣ್ಣ ದುರಸ್ತಿ ಕಾರ್ಯವಿದ್ದು, ಶಿರೂರ ಕೆರೆ ತುಂಬಿಸುವ ಜಾಕವೆಲ್ನಲ್ಲಿ ಫ್ಯೂಜ್‌ ಹೋಗಿದೆ. ಎರಡೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದು, ಮಂಗಳವಾರದಿಂದ ಕೆರೆಗೆ ನೀರು ಹರಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ನೂತನ ಎಇಇ ಸೋಮಶೇಖರ ಸಾವನ್‌ ಉದಯವಾಣಿಗೆ ತಿಳಿಸಿದರು.

1.11 ಲಕ್ಷ ಕ್ಯೂಸೆಕ್‌ ಒಳ ಹರಿವು: 123 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ (519.60 ಮೀಟರ್‌ ಗರಿಷ್ಠ ಮಟ್ಟ)ದ ಆಲಮಟ್ಟಿ ಜಲಾಶಯದಲ್ಲಿ ಸದ್ಯ 95.613 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಶನಿವಾರ 515.85 ಮೀಟರ್‌ಗೆ ಇದ್ದ ನೀರು ಎರಡೇ ದಿನದಲ್ಲಿ 517.85 ಮೀಟರ್‌ಗೆ ಹೆಚ್ಚಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಕೇವಲ 77.993 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿ 95.613 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಸೋಮವಾರ ಜಲಾಶಯಕ್ಕೆ 1,11,560 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ವಿದ್ಯುತ್‌ ಉತ್ಪಾದನೆ ಸಹಿತ ವಿವಿಧ ಮೂಲಗಳಿಂದ 33,128 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ.
ಮುಚಖಂಡಿ ಕೆರೆ ತುಂಬಿಸುವ ವಿದ್ಯುತ್‌ ಪರಿವರ್ತಕದಲ್ಲಿ ಸಣ್ಣ ದುರಸ್ತಿ ಕಾರ್ಯವಿದ್ದು, ಶಿರೂರ ಕೆರೆ ತುಂಬಿಸುವ ಜಾಕವೆಲ್ನಲ್ಲಿ ಫ್ಯೂಜ್‌ ಹೋಗಿದೆ. ಎರಡೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದು, ಮಂಗಳವಾರದಿಂದ ಕೆರೆಗಳಿಗೆ ನೀರು ಹರಿಸಲಾಗುವುದು.•ಸೋಮಶೇಖರ ಸಾವನ್‌,ಎಇಇ ಸಣ್ಣ ನೀರಾವರಿ ಇಲಾಖೆ
•ವಿಶೇಷ ವರದಿ
Advertisement

Udayavani is now on Telegram. Click here to join our channel and stay updated with the latest news.

Next