Advertisement

ಕಾಮಗಾರಿ ಪರಿಶೀಲನೆಗೆ ಆಗ್ರಹ

12:58 PM Jul 27, 2019 | Naveen |

ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳ ಕೊನೆ ಹಂತದವರೆಗೂ ನೀರು ಹರಿಸಿ ರೈತರ ಜಮೀನಿಗೆ ನೀರು ಕೊಡಬೇಕು ಹಾಗೂ ಶಾಶ್ವತ ಯೋಜನೆಯಾಗಿರುವ ಯುಕೆಪಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಕೆಬಿಜೆಎನ್ನೆಲ್ಡಿ ಉಪ ಮುಖ್ಯ ಅಭಿಯಂತರರಾದ ಎಂ.ಎನ್‌. ಪದ್ಮಜಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ರಾಜ್ಯ ಘಟಕದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಬರಗಾಲ ನಿವಾರಣೆಗಾಗಿಯೇ ಆಲಮಟ್ಟಿಯಲ್ಲಿ ಬೃಹತ್‌ ಜಲಾಶಯ ನಿರ್ಮಿಸಲಾಗಿದೆ. ಇದರ ಸದುಪಯೋಗವಾಗಬೇಕಾದರೆ ಎಲ್ಲ ಕಾಲುವೆಗಳಿಗೂ ನೀರು ಹರಿಸಿ ರೈತರ ಬದುಕು ಹಸನಾಗಿಸಬೇಕು ಎಂದರು.

ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿ ಎಲ್ಲ ಕಾಲುವೆಗಳ ಮೂಲಕ ಬಬಲೇಶ್ವರ ತಾಲೂಕಿನ ಕೊನೆ ಭಾಗವಾದ ಅರ್ಜುಣಗಿ ಹಾಗೂ ಹೆಬ್ಟಾಳಟ್ಟಿ ಗ್ರಾಮದವರೆಗೂ ನೀರು ಹರಿಸಬೇಕು. ಅಲ್ಲದೇ ಉಳಿದ ಎಲ್ಲ ಕಾಲುವೆಗಳಿಗೂ ನೀರು ಹರಿಸಬೇಕು ಮತ್ತು

ಇದೇ ಕಾಲುವೆ ಮೊದಲ ಭಾಗದಲ್ಲಿ ಜನ ಪಂಪ್‌ಸೆಟ್ ಮೂಲಕ ನೀರನ್ನು ಎತ್ತಿ ಜಮೀನಿಗೆ ಒಯ್ಯುತ್ತಿದ್ದಾರೆ, ಇದನ್ನು ತಡೆಗಟ್ಟಿ ಕೊನೆ ಭಾಗದವರೆಗೂ ನೀರು ಹರಿಸಬೇಕು ಎಂದರು.

ಮು.ಏ.ನೀ. ಯೋಜನೆ ಮೂರನೇ ಹಂತದ ಕೆರೆಗಳನ್ನು ಇದೇ ಮುಂಗಾರು ಹಂಗಾಮಿನಲ್ಲಿಯೇ ಭರ್ತಿ ಮಾಡಬೇಕು, ಇದರಿಂದ ಜಿಲ್ಲೆಯ ಸುಮಾರು 70ಕ್ಕೂ ಅಧಿಕ ಕೆರೆಗಳಿಗೆ ನೀರು ಹರಿದು ಅಂತರ್ಜಲ ಹೆಚ್ಚಲಿದೆ ಎಂದು ಹೇಳಿದರು.

Advertisement

ಕೃಷ್ಣಾ ಮೇಲ್ದಂಡೆ ಯೋಜನೆ ಶಾಶ್ವತ ಯೋಜನೆಯಾಗಿದ್ದು ಇದರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಮಗಾರಿಗಳನ್ನು ಗುಣಮಟ್ಟದಿಂದ ನಡೆಯಬೇಕು. ಅಲ್ಲದೇ ಕೃ.ಭಾ.ಜ.ನಿ.ನಿ ಅಧಿಕಾರಿಗಳು ತಯಾರಿಸಿದ ಅಂದಾಜು ಪತ್ರಿಕೆ ಅರ್ಧ ದರ ಅಂದರೆ ಶೇ.50ರಷ್ಟು ಕಡಿಮೆ ದರದಲ್ಲಿ ಕಾಮಗಾರಿಗಳನ್ನು ಗುತ್ತಿಗೆದಾರರು ಪಡೆಯುತ್ತಿದ್ದಾರೆ. ಇದರಿಂದ ಗುಣಮಟ್ಟದ ಕಾಮಗಾರಿ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕಾಲುವೆ ಹೂಳು ತೆಗೆಯುವ ಕ್ಲೋಸರ್‌ ಕಾಮಗಾರಿಯಲ್ಲಿ ಬಹುತೇಕ ಗುತ್ತಿಗೆದಾರರು ಪ್ರತಿ ಕಾಮಗಾರಿಯನ್ನು ಮೂಲ ಬೆಲೆಗಿಂತ ಶೇ. 40ರಿಂದ ಶೇ. 50 ಕಡಿಮೆ ಮೊತ್ತಕ್ಕೆ ನಮೂದಿಸಿ ಕೆಲಸ ಪಡೆದಿದ್ದಾರೆ. ಮೂಲ ಮೊತ್ತಕ್ಕಿಂತ ಅತಿ ಕಡಿಮೆ ಮೊತ್ತಕ್ಕೆ ಪಡೆದ ಕಾಮಗಾರಿ ಎಷ್ಟು ಗುಣಮಟ್ಟದಿಂದ ನಡೆಯುತ್ತದೆ ಎಂದು ಪ್ರಶ್ನಿಸಿದ ಅವರು, ಅಭಿಯಂತರರು ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ಹೊನಕೇರಪ್ಪ ತೆಲಗಿ, ಕೃಷ್ಣಪ್ಪ ಬಮರೆಡ್ಡಿ, ಸಿದ್ದಪ್ಪ ನಡಕಟ್ಟಿ, ಸಿದ್ದಪ್ಪ ಕಲಬೀಳಗಿ, ಮಲ್ಲಪ್ಪ ಕೆಂಪವಾಡ, ಸಿದ್ರಾಯ ಜಂಗಮಶೆಟ್ಟಿ, ಆನಂದ ಕುಚನೂರ, ಧರೇಶ ಕಮತ, ಮೈಬೂಬ್‌ ಮುಜಾವರ, ಲಕ್ಷ್ಮಣ ಹರನಾಳ, ಸಿದ್ರಾಮ ಬ್ಯಾಕೋಡ, ರೇವಣಪ್ಪ ಬ್ಯಾಕೋಡ, ಸಂಗಪ್ಪ ಮುಂಡಗನೂರ, ಶ್ರೀಶೈಲ ತವಸೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next