ಆಲಮಟ್ಟಿ: ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಮುಳವಾಡ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ ಸೇರಿದಂತೆ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆ ಹಾಗೂ ಕೆರೆ ಬಾಂದಾರಗಳನ್ನು ತುಂಬಿಸುವಂತೆ ಆಗ್ರಹಿಸಿ ಆಲಮಟ್ಟಿ ಕೃಷ್ಣಾಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಸತ್ಯಾಗ್ರಹ ಎಂಟು ದಿನ ಪೂರೈಸಿತು.
ಅಹೋ ರಾತ್ರಿ ರೈತರೊಂದಿಗೆ ಧರಣಿ ಸ್ಥಳಕ್ಕೆ ಆಗಮಿಸಿದ ಮಸೂತಿಯ ನ್ಯಾಯವಾದಿ ಎಂ.ಎಸ್. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಬೃಹತ್ ಜಲಾಶಯ ನಿರ್ಮಿಸಿ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ರೈತರು ಹೋರಾಟ ಮಾಡುವಂತಾಗಿರುವದು ಜಿಲ್ಲೆಯ ಶಾಸಕರು ಹಾಗೂ ಸಂಸದರ ಜನಪರ ಕಾಳಜಿ ತೋರುತ್ತದೆ ಎಂದು ವ್ಯಂಗ್ಯವಾಡಿದರು.
ಜನಪ್ರತಿನಿಧಿ ಗಳಿಗೆ ರೈತರು, ಶೋಷಿತರು ನೆನಪಾಗುವದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಚುನಾವಣೆ ಮುಗಿದ ನಂತರ ಊಟವಾದ ನಂತರ ಬಾಳೆ ಎಲೆಯನ್ನು ಬೀಸಾಕುವಂತೆ ಜನರನ್ನು ಬೀಸಾಕುತ್ತಾರೆ. ಜಲಾಶಯ ನಿರ್ಮಾಣಕ್ಕೆ ಲಕ್ಷಾಂತರ ಎಕರೆ ಜಮೀನು, ನೂರಾರು ಗ್ರಾಮಗಳು ಮುಳುಗಡೆಯಾಗಿ ಅಲ್ಲಿನ ನಿವಾಸಿಗಳು ಸಂತ್ರಸ್ತರಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಾಗಿರುವದೇ ಸಾಕ್ಷಿಯಾಗಿದೆ ಎಂದು ಹೇಳಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಈಗಾಗಲೇ ರೈತರ ಹೋರಾಟಕ್ಕೆ ಸ್ಪಂದಿ ಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಕೊಡದ ರಾಜ್ಯಸರ್ಕಾರ ಹಾಗೂ ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರನ್ನು ಕತ್ತೆಗಳಿಗೆ ಹೋಲಿಕೆ ಮಾಡಿ ಕತ್ತೆಗಳ ಮೆರವಣಿಗೆ ಮಾಡಿದ್ದಾಯಿತು. ಇದಕ್ಕೆ ಸ್ಪಂದಿ ಸಿ ಸಂಸದರು ರೈಲ್ವೆ ಇಲಾಖೆ ಮೇಲೆ ಒತ್ತಡ ಹೇರಿ ಅಥವಾ ನಮ್ಮ ನೆರೆಯ ಜಿಲ್ಲೆಯವರಾದ ರೈಲ್ವೆ ರಾಜ್ಯ ಸಚಿವರ ಮೂಲಕವಾಗಿಯಾಗಲಿ ರೈಲ್ವೆ ಹಳಿ ದಾಟಿಸುವ ಕೆಲಸಕ್ಕೆ ವೇಗನೀಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಡಿಸಿಎಂ ಗೋವಿಂದ ಕಾರಜೋಳ ಅವರು ಶಾಸ್ತ್ರಿ ಜಲಾಶಯ ಮುಂಭಾಗಕ್ಕೆ ನೀರು ಹರಿಸದೇ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಬ್ಬರ ಪ್ರತಿಕೃತಿಗಳನ್ನು ಜ. 30ರಂದು ಮಧ್ಯಾಹ್ನ 12ಕ್ಕೆ ದಹನ ಮಾಡಿ ಮೃತ ವ್ಯಕ್ತಿಗೆ ಕುಟುಂಬದವರು ಸಲ್ಲಿಸುವ ಎಲ್ಲ ವಿಧಾನಗಳನ್ನು ನಡೆಸಲಾಗುವದು ಎಂದರು.
ಇದಕ್ಕೂ ಸ್ಪಂ ದಿಸದಿದ್ದರೆ ಎತ್ತಿನ ಗಾಡಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಎತ್ತಿನ ಚಕ್ಕಡಿ ನಿಲ್ಲಿಸಿ ರಸ್ತೆ ತಡೆ ನಡೆಸಲಾಗುತ್ತದೆ. ಮುಂದೆ ಆಗುವ ಎಲ್ಲ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ನೀರಿಗಾಗಿ ನೆಲೆಯನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಅಖಂಡ ವಿಜಯಪುರ ಜಿಲ್ಲೆಗೆ ಕುಡಿಯುವ ನೀರು ದೊರಕಿಸಲು ಜಿಲ್ಲೆಯ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿತ್ತು. ಜಿಲ್ಲೆಯ ಬರಗಾಲ ನಿವಾರಣೆಗಾಗಿ ಜಿಲ್ಲೆಯಲ್ಲಿ ಜಲಾಶಯ ನಿರ್ಮಿಸಿದ್ದರೂ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ ಎನ್ನುವ ಸಂಗತಿ ಯಾವ ಜನಪ್ರತಿನಿಧಿ ಗೂ ಶೋಭೆಯಲ್ಲ ಎಂದು ಹೇಳಿದರು.
ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಸಿ.ಬಿ. ತಳವಾರ, ಮುತ್ತು ಸಾಲಳ್ಳಿ, ಪ್ರಕಾಶ ಗರಸಂಗಿ, ಶ್ರೀಶೈಲ ಚಿಮ್ಮಲಗಿ, ಬಲಭೀಮಪ್ಪ ಬಂಡಿವಡ್ಡರ, ಅಶೋಕ ಮಟ್ಯಾಳ, ಮುದಕಪ್ಪ ಬ್ಯಾಲ್ಯಾಳ, ಐ.ಬಿ. ಅಂಬಲಿ, ಲಕ್ಷ್ಮಣ ಆಸಂಗಿ, ಸದಾಶಿವ ಬರಟಗಿ, ಕೃಷ್ಣಪ್ಪ ಬಮ್ಮರೆಡ್ಡಿ ಮೊದಲಾದವರಿದ್ದರು.