ಆಲಮಟ್ಟಿ: ರಾಕ್ ಉದ್ಯಾನದಲ್ಲಿ ಒಂದೇ ವೃತ್ತಾಕಾರದ ಸೆಕ್ಟರ್‌ನಲ್ಲಿ ಹಲವಾರು ಜೋಕಾಲಿಗಳ ಸಮುಚ್ಛಯವನ್ನು ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ ಉದ್ಘಾಟಿಸಿದರು.
ಗುರುವಾರ ಬೆಳಗ್ಗೆ ಆಲಮಟ್ಟಿ ರಾಕ್ ಉದ್ಯಾನದ ಲೇಬರ್ ಸೆಕ್ಟರ್ ಪಕ್ಕದಲ್ಲಿ ಸುಮಾರು 10.48ಲಕ್ಷ ಮೊತ್ತದ 4ಗುಂಟೆಯಲ್ಲಿ ವೃತ್ತಾಕಾರದಲ್ಲಿ ನಿರ್ಮಿಸಲಾಗಿರುವ ಜೋಕಾಲಿ ಜನರ ಆಕರ್ಷಕ ತಾಣವಾಗಲಿದೆ.
ಇಲ್ಲಿಯವರೆಗೆ ಚಿಕ್ಕ ಮಕ್ಕಳಿಗೆ ಚಿಲ್ಡ್ರನ್ ಪಾರ್ಕಿನಲ್ಲಿ ಜೋಕಾಲಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳು ಉಲ್ಲಸಿತರಾಗುತ್ತಿದ್ದರು. ಆದರೆ ದೊಡ್ಡವರು, ಹೆಚ್ಚಾಗಿ ಮಹಿಳೆಯರಲ್ಲಿ ಜೋಕಾಲಿ ಆಡುವ ಬಯಕೆ ಹೆಚ್ಚಿತ್ತು. ಆ ಬಯಕೆ ಈಡೇರಿಸುವ ಉದ್ದೇಶದಿಂದ ಈ ಜೋಕಾಲಿಗಳನ್ನು ನಿರ್ಮಿಸಲಾಗಿದೆ. ಇವುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಉಚಿತವಾಗಿ ಜೋಕಾಲಿ ಆಡಬಹುದಾಗಿದೆ ಎಂದು ಆಲಮಟ್ಟಿ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ತಿಳಿಸಿದರು.
ಜೋಕಾಲಿಗಳನ್ನು 15 ಅಡಿ ಎತ್ತರದ ಕಟ್ಟಿಗೆ ಮಾದರಿಯಲ್ಲಿ ಗೋಚರಿಸುವಂತೆ ಅಲಂಕಾರಿಕವಾಗಿ ಸಿಮೆಂಟ್ನಿಂದ ಅತಿ ಹೆಚ್ಚು ಭದ್ರತೆಯಿಂದ ಕಂಬಗಳನ್ನು ನಿರ್ಮಿಸಲಾಗಿದೆ. ವಿವಿಧ ಎತ್ತರಗಳಿಗೆ ಅನುಗುಣವಾಗಿ 13 ಜೋಕಾಲಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. 13 ಜೋಕಾಲಿಗಳು ಏಕಕಾಲಕ್ಕೆ ಜೀಕಿದರೂ ಎಲ್ಲಿಯೂ ಒಂದಕ್ಕೊಂದು ಸೇರುವುದಿಲ್ಲ. ಸಿಮೆಂಟ್ ಕಂಬಗಳಿಗೆ ಕಲಾತ್ಮಕ ಕೆಲಸ ಮಾಡಲಾಗಿದ್ದು, ಕಂಬಗಳಿಗೆ ಕಟ್ಟಿಗೆ ರೀತಿ ಕಾಣುವ ಹಾಗೆ ಪೇಟಿಂಗ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಆಲಮಟ್ಟಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ನಾಯಕ ಅಧ್ಯಕ್ಷತೆ ವಹಿಸಿದ್ದರು. ಅಣೆಕಟ್ಟು ವೃತ್ತ ಪ್ರಭಾರಿ ಅಧೀಕ್ಷಕ ಅಭಿಯಂತರ ಬಿ.ಎಸ್. ಪಾಟೀಲ, ಕಾರ್ಯಪಾಲಕ ಅಭಿಯಂತರ ಡಿ. ಬಸವರಾಜ, ಎಂ.ಎನ್.ಪದ್ಮಜಾ, ವಿಶ್ವನಾಥ ಬಡಿಗೇರ, ವಿ.ಜಿ. ಕುಲಕರ್ಣಿ, ಎಸ್.ಎಸ್.ಚಲವಾದಿ, ಎಚ್.ಸಿ. ನರೇಂದ್ರ, ಎನ್.ಕೆ. ಬಾಗಾಯತ್, ಎಸ್.ಬಿ. ಚಿತ್ತವಾಡಗಿ, ಎಸ್.ಐ. ಮಠಪತಿ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ, ಬಿ.ಎಸ್. ಚವ್ಹಾಣ ಇದ್ದರು.