ಆಲಮಟ್ಟಿ: ಪ್ರತಿ ವರ್ಷವೂ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡುವುದರಿಂದ ನಾರಾಯಣಪುರದ ಬಸವಸಾಗರದ ಹಿನ್ನೀರು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸುಮಾರು 20ಕ್ಕೂ ಅಧಿಕ ಗ್ರಾಮಗಳ ರೈತರ ಜಮೀನುಗಳಲ್ಲಿ ನೀರು ಪ್ರವೇಶಿಸುವುದರಿಂದ ರೈತರು ಆತಂಕದಲ್ಲಿ ಬದುಕುವಂತಾಗಿದೆ.
ಮಹಾರಾಷ್ಟ್ರದ ವೇದಗಂಗಾ, ದೂಧಗಂಗಾ, ಕೋಯ್ನಾ, ವಾರಣಾ, ಮಹಾಬಳೇಶ್ವರ, ನವಜಾ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅಲ್ಲದೇ ರಾಜ್ಯದ ಮಲಪ್ರಭಾ ಹಾಗೂ ಘಟಪ್ರಭಾ ನದಿ ಸೇರಿದಂತೆ ಕೃಷ್ಣೆ ಉಪ ನದಿಗಳು ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿರುವುದರಿಂದ ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗಿದೆ. ಇದರಿಂದ ಕೃಷ್ಣೆ ತಟದಲ್ಲಿರುವ ಗ್ರಾಮಗಳಿಗೆ ಹಾಗೂ ಜಲಾಶಯದ ಭದ್ರತೆ ದೃಷ್ಟಿಯನ್ನಿಟ್ಟುಕೊಂಡು ಪ್ರವಾಹ ನಿಯಂತ್ರಣಕ್ಕಾಗಿ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಿಂದ ವ್ಯಾಪಕ ನೀರನ್ನು ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳು ಎಲ್ಲ 26 ಗೇಟುಗಳು, 6 ಕೆಪಿಸಿಎಲ್ನ ಆಲಮಟ್ಟಿ ಜಲವಿದ್ಯುದಾಗಾರದಿಂದ ನದಿ ಪಾತ್ರಕ್ಕೆ ಕಳೆದ ನಾಲ್ಕು ದಿನಗಳಿಂದ 2 ಲಕ್ಷಕ್ಕೂ ಅಧಿಕ ನೀರನ್ನು ಬಿಡಲಾಗುತ್ತಿದೆ. ಕಾರಣ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಜಮೀನುಗಳಿಗೆ ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರು ಬುಧವಾರ ಸಂಜೆಯಿಂದ ನುಗ್ಗಿದೆ.
ಬಸವಸಾಗರದ ಹಿನ್ನೀರಿನಿಂದ ಬಾಗಲಕೋಟೆ ಜಿಲ್ಲೆಯ ಡೊಮನಾಳ, ನಾಗಸಂಪಗಿ, ನಾಯನೇಗಲಿ, ನಾಗರಾಳ, ಸುತಗುಂಡಾರ, ಹೊಸೂರ, ಮನಹಳ್ಳಿ, ಮ್ಯಾಗೇರಿ, ಚಿಕ್ಕಮ್ಯಾಗೇರಿ ಸೇರಿದಂತೆ ಸುಮಾರು 10 ಗ್ರಾಮಗಳಲ್ಲಿ ರೈತರಿಂದ ಯುಕೆಪಿ ವಶಪಡಿಸಿಕೊಂಡಿರುವ ಜಮೀನಿನಲ್ಲಿ ಮತ್ತು ಸಾಧ್ವಿಧೀನ ಮಾಡಿಕೊಳ್ಳದೇ ಇರುವ ಜಮೀನಿನಲ್ಲಿಯೂ ನೀರು ನುಗ್ಗಿದ್ದರ ಪರಿಣಾಮ ಬೆಳೆಯಲ್ಲಿ ಮೊಸಳೆಗಳು ಸೇರಿ ವಿಷಜಂತುಗಳ ಆಕ್ರಮಣವಾಗಿದೆ.
ಇನ್ನು ವಿಜಯಪುರ ಜಿಲ್ಲೆಯ ಮುದೂರ, ಕಾಳಗಿ, ಬಳಬಟ್ಟಿ, ಮಸೂತಿ, ಯಲ್ಲಮ್ಮನಬೂದಿಹಾಳ, ವಡವಡಗಿ, ಕಾಶಿನಕುಂಟಿ, ಯಲಗೂರ ಗ್ರಾಮದ ಚಿದಾನಂದ ಶಿರೂರ, ಸಿದ್ದಪ್ಪ ಚನ್ನಿಗಾವಿ, ಸೋಮು ಚನ್ನಿಗಾವಿ, ಮಲ್ಲಮ್ಮ ಪಾಟೀಲ, ಯಲಗೂರದಪ್ಪ ಬಿರಾದಾರ, ಸಗರಪ್ಪ ಬಿರಾದಾರ ಹಾಗೂ ಅರಳದಿನ್ನಿಯ ಸುರೇಶ ಕೊಳ್ಳಾರ ಅವರಿಗೆ ಸೇರಿದ ಕಬ್ಬು ಸಂಪೂರ್ಣ ಜಲಾವೃತಗೊಂಡಿದೆಯಲ್ಲದೇ ಯಲಗೂರದಪ್ಪ ಟುಬಾಕಿ, ಶೇಖಪ್ಪ ಟುಬಾಕಿ, ಯಲಗೂರದಪ್ಪ ಕೊಳ್ಳಾರ, ಅಯ್ಯಪ್ಪ ಚನಗೊಂಡ, ಸಣ್ಣಪ್ಪ ಸೀತಿಮನಿ ಸೇರಿದಂತೆ ಹಲವಾರು ರೈತರ ಜಮೀನು ಜಲಾವೃತಗೊಂಡಿದೆ.
ಇದರಿಂದ ಅವಳಿ ಜಿಲ್ಲೆಯ ನೂರಾರು ಎಕರೆ ಜಮೀನುಗಳಲ್ಲಿ ಬಸವ ಸಾಗರದ ಹಿನ್ನೀರು ನುಗ್ಗುವುದರಿಂದ ರೈತರು ಬಿತ್ತನೆ ಮಾಡಿದ ತೊಗರಿ, ಮೆಕ್ಕೆಜೋಳ, ಸಜ್ಜೆ, ಕಬ್ಬು ಬೆಳೆಗಳಲ್ಲಿ ನೀರು ನಿಂತು ಹಿಂದೆ ಸರಿದರೂ ಕೂಡ ಅದರ ತೇವಾಂಶ ಆರಲು ಕನಿಷ್ಠ 15-20 ದಿನಗಳಾದರೂ ಬೇಕು. ಇದರಿಂದ ತೊಗರಿ, ಸಜ್ಜೆ, ಮೆಕ್ಕೆಜೋಳ ಬೆಳೆಗಳು ಕೊಳೆತು ರೈತರಿಗೆ ಬೆಳೆ ಹಾನಿಯಾಗುವುದು ಪ್ರತಿ ವರ್ಷವೂ ನಡೆದುಕೊಂಡೇ ಬಂದಿದೆ.
ಕೃಷ್ಣೆ ದಡದಲ್ಲಿರುವ ಈ ಜಮೀನುಗಳಿಗೆ ಪ್ರತಿ ವರ್ಷವೂ ಮಹಾಪೂರ ಬಂದಾಗ ಭೂಮಿ ಜಲಾವೃತಗೊಳ್ಳುವ ಈ ಸಮಸ್ಯೆ ಉದ್ಭವಿಸುತ್ತದೆ, ಹೀಗಾಗಿ ಈ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮದ ಯಲಗೂರದಪ್ಪ ಕೊಳ್ಳಾರ, ಅಯ್ಯಪ್ಪ ಚನಗೊಂಡ ಉದಯವಾಣಿಗೆ ತಿಳಿಸಿದರು.
ಅರಳದಿನ್ನಿ ಗ್ರಾಮಕ್ಕೆ ಭೇಟಿ ನೀಡಲಾಗಿದ್ದು ಕಬ್ಬು ಬೆಳೆಗೆ ಅಂಥ ಹಾನಿ ಕಾಣುವುದಿಲ್ಲ. ಆದರೆ ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ ಬೆಳೆಗಳಿಗೆ ನಿಯಮಾನುಸಾರ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.
•
ಪಿ.ಜಿ. ಪವಾರ,
ನಿಡಗುಂದಿ ತಹಶೀಲ್ದಾರ್