ಆಲಮಟ್ಟಿ: ಲಾಲ ಬಹಾದ್ದೂರಶಾಸ್ತ್ರಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಂದ ಮುಂಗಾರು ಹಾಗೂ ಹಿಂಗಾರು ಹಂಗಾಮು ಅವಧಿಗೆ ರೈತರ ಜಮೀನಿಗೆ ನೀರು ಹರಿಸಬೇಕು ಹಾಗೂ ನೂತನವಾಗಿ ನಿರ್ಮಿಸುತ್ತಿರುವ ಎಲ್ಲ ಕಾಲುವೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ರೈತರು ಮನವಿ ಸಲ್ಲಿಸಿದರು.
ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಮುಖ್ಯ ಅಭಿಯಂತರ್ ಮೂಲಕ ಕೃಷ್ಣಾಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯವನ್ನು ವಿಜಯಪುರ ಜಿಲ್ಲೆಯಲ್ಲಿಯೇ ನಿರ್ಮಿಸಿದ್ದರೂ ಕೂಡ ಅವಳಿ ಜಿಲ್ಲೆಗಳ ರೈತರ ಜಮೀನಿಗೆ ಕಳೆದ ಬಾರಿ ಎರಡೂ ಅವಧಿಗೆ ನೀರು ಕೊಡದೇ ಕೇಳಲು ಬಂದ ರೈತರಿಗೆ ಜಲಾಶಯ ತೋರಿಸಿ ಬೇಸಿಗೆ ಅವಧಿಯಲ್ಲಿ ಆಂಧ್ರಕ್ಕೆ ನೀರು ಹರಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆಗಳಲ್ಲಿನ ಹೂಳು ಹಾಗೂ ಗಿಡಕಂಟಿಗಳನ್ನು ತೆರವುಗೊಳಿಸುವ ಕ್ಲೋಜರ್ ಕಾಮಗಾರಿ ಹಾಗೂ ಅಲ್ಲಲ್ಲಿ ಒಡೆದಿರುವ ಕಾಲುವೆಗಳ ದುರಸ್ತಿ ನೆಪ ಹೇಳಿ ಕಳೆದ ವರ್ಷದ ಹಿಂಗಾರು ಹಂಗಾಮಿಗೆ ರೈತರಿಗೆ ನೀರು ಕೊಟ್ಟಿರಲಿಲ್ಲ. ಆ ಅವಧಿಯಲ್ಲಾಗಲಿ ಇಲ್ಲವೇ ಬೇಸಿಗೆಯಲ್ಲಾಗಲಿ ಟೆಂಡರ್ ಕರೆಯಬೇಕಾಗಿದ್ದ ಇಲಾಖೆಯು ಮಳೆಗಾಲದ ಆರಂಭದಲ್ಲಿ ಟೆಂಡರ್ ಕರೆದಿರುವುದರಿಂದ ಗುತ್ತಿಗೆ ಪಡೆದವರು ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡದೇ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕಾಲುವೆಗಳಲ್ಲಿನ ಹೂಳು ತೆಗೆಯುವ ಹಾಗೂ ಗಿಡಕಂಟಿಗಳನ್ನು ತೆರವುಗೊಳಿಸದೇ ತಮ್ಮ ಮನಸ್ಸಿಗೆ ಬಂದಂತೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಈ ಬಾರಿಯಾದರೂ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದರು.
ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಮುದ್ದೇಬಿಹಾಳ ತಾಲೂಕಿನಲ್ಲಿ ಬರುವ ಕಾಲುವೆಗಳ ಸಮೀಪದಲ್ಲಿಯೇ ರೈತರ ಜಮೀನಿದ್ದರೂ ಕೂಡ ಆ ಜಮೀನುಗಳಿಗೆ ನೀರನ್ನು ಕೊಡದೇ ಅಂಥ ರೈತರಿಗೆ ಕರ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಕಾಳುವೆ ನೀರನ್ನು ಪಡೆಯದೇ ನಿಗಮಕ್ಕೆ ಕರ ನೀಡುವುದು ಎಷ್ಟು ಸರಿ?. ಆದ್ದರಿಂದ ಅಧಿಕಾರಿಗಳು ಎಲ್ಲ ಕಾಲುವೆಗಳಿಗೆ ಸಂಚರಿಸಿ ನೀರಾವರಿಯಿಂದ ವಂಚಿತಗೊಂಡಿರುವ ಸಾವಿರಾರು ಎಕರೆ ಜಮೀನಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪಮುಖ್ಯ ಅಭಿಯಂತರರು, ಕಾಲುವೆಗಳ ದುರಸ್ತಿ, ಹೂಳು ಮತ್ತು ಕಂಟಿ ತೆರವುಗೊಳಿಸಿದ್ದನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿಯೇ ಗುತ್ತಿಗೆದಾರರಿಗೆ ಹಣ ನೀಡಲಾಗುವುದು. ರೈತರ ಜಮೀನಿಗೆ ಎರಡೂ ಅವಧಿಗೆ ನೀರು ಹರಿಸುವ ಕುರಿತು ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದು ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನೀರು ಹರಿಸಲಾಗುತ್ತದೆ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಎರಡೂ ಹಂಗಾಮಿಗೆ ಕಡ್ಡಾಯವಾಗಿ ನೀರು ಹರಿಸಲೇಬೇಕು. ಈ ಕುರಿತು ಲಿಖೀತವಾಗಿ ಬರೆದು ಕೊಡಬೇಕು ಎಂದು ಕೆಲ ಗಂಟೆಗಳ ಕಾಲ ಕಚೇರಿ ಎದುರು ಧರಣಿ ನಡೆಸಿದರು.
ನಂತರ ಪಿಎಸೈ ಎಸ್.ವೈ. ನಾಯ್ಕೋಡಿ ಹಾಗೂ ಎಎಲ್ಬಿಸಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡೊಳ್ಳಿಯವರು ಮಧ್ಯಪ್ರವೇಶಿಸಿ ಈಗ ಆಗಸ್ಟ್‌ವರೆಗೆ ನೀರು ಹರಿಸಲಾಗುತ್ತದೆ. ಈ ಕುರಿತು ಮತ್ತೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ಆ ವೇಳೆ ಮಾಹಿತಿ ಕೊಡಲಾಗುವುದು ಎಂದು ರೈತರನ್ನು ಸಮಾಧಾನಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷ್ತ್ರಣಗೌಡ ಬಿರಾದಾರ, ಜಿಲ್ಲಾಧ್ಯಕ್ಷ ಎಸ್.ಎಸ್. ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಬಾಗೇವಾಡಿ, ವೈ.ಎಸ್. ಬಿರಾದಾರ, ಹುಲಿಗೆಪ್ಪಗೌಡ ಬಿರಾದಾರ, ಅಯ್ಯಪ್ಪ ಕೊಳೂರ, ರಾಮಣ್ಣ ಮುದ್ನಾಳ ಮೊದಲಾದವರಿದ್ದರು.