ಆಲಮಟ್ಟಿ: ಬಸವಸಾಗರ ಜಲಾಶಯ ವ್ಯಾಪ್ತಿಯ ಕುಡಿಯುವ ನೀರಿನ ಘಟಕಗಳಿಗಾಗಿ ಬೆಳಗಾವಿ ವಿಭಾಗಾಧಿಕಾರಿ ಆದೇಶದಂತೆ ಸೋಮವಾರ ಸಂಜೆ 6 ಗಂಟೆಯಿಂದ ಮಂಗಳವಾರ ಸಂಜೆ 6 ಗಂಟೆವರೆಗೆ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯದಿಂದ ಕೆಪಿಸಿಎಲ್ ಮೂಲಕವಾಗಿ ಸುಮಾರು 1ಟಿಎಂಸಿ ಅಡಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗಿದೆ.
ಸೋಮವಾರ ಸಂಜೆ 6 ಗಂಟೆಯಿಂದ ಜಲಾಶಯದಿಂದ ಸುಮಾರು 1ಟಿಎಂಸಿ ಅಡಿ ನೀರನ್ನು ಕರ್ನಾಟಕ ವಿದ್ಯುತ್ ಉತ್ಪಾದನಾ ಘಟಕ ಮೂಲಕ ಬಿಟ್ಟಿದ್ದರಿಂದ ಒಟ್ಟು 55 ಮೆ.ವ್ಯಾ.ನ 5 ಘಟಕಗಳು ಹಾಗೂ 15 ಮೆ.ವ್ಯಾ. 1ಘಟಕ ಸೇರಿ ಒಟ್ಟು 6 ಘಟಕಗಳಿಂದ 290 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಘಟಕಗಳಲ್ಲಿ ಸೋಮವಾರದಿಂದ 55 ಮೆ.ವ್ಯಾ.ನ 2 ಘಟಕಗಳಿಂದ 16.80 ಲಕ್ಷ ಯುನಿಟ್ ಉತ್ಪಾದನೆ ಮಾಡಲಾಗಿದೆ.
ಕ್ಲೋಜರ್ ಕಾಮಗಾರಿ ಅತಂತ್ರ: ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಕಾಲುವೆಗಳಲ್ಲಿರುವ ಹೂಳು ಹಾಗೂ ಕಂಟಿ ತೆರವುಗೊಳಿಸುವುದು ಹಾಗೂ ವಿಶೇಷ ದುರಸ್ತಿ ಕಾಮಗಾರಿಗಳಿಗೆ ತಾಂತ್ರಿಕ ಕಾರಣಗಳಿಂದ ಕೃಷ್ಣಾ ಭಾಗ್ಯಜಲ ನಿಗಮದ ಅಧಿಕಾರಿಗಳು ತಡವಾಗಿ ಟೆಂಡರ್‌ಗಳನ್ನು ಕರೆದಿದ್ದಾರೆ.
ಕರೆಯಲಾದ ಟೆಂಡರ್‌ಗಳನ್ನು ಪಡೆದ ಗುತ್ತಿಗೆದಾರರು ಇನ್ನೂವರೆಗೆ ಯಾವುದೇ ಕಾಮಗಾರಿಗಳನ್ನು ಆರಂಭಿಸಿಲ್ಲ. ಇದರಿಂದ ಮೊದಲೇ ಎರಡು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವುದರಿಂದ ಈ ಬಾರಿ ಕೆಲ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರೆ, ಇನ್ನೂ ಕೆಲವರು ಬಿತ್ತನೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ರೈತರಿಗೆ ಅಗತ್ಯವಾಗಿ ನೀರು ಬೇಕಾದ ಸಮಯದಲ್ಲಿ ಕಾಲುವೆಗಳ ದುರಸ್ತಿ ಹಾಗೂ ಹೂಳು ಮತ್ತು ಕಂಟಿ ತೆರವುಗೊಳಿಸಲು ಸಾಧ್ಯವೇ ಎನ್ನುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.
ಕಾಲುವೆಗಳಲ್ಲಿನ ಹೂಳು ಮತ್ತು ಕಂಟಿಗಳನ್ನು ತೆರವುಗೊಳಿಸುವುದು ವಿಶೇಷ ದುರಸ್ತಿ ಮಾಡುತ್ತ ಕುಳಿತರೆ ಜಲಾಶಯ ನೀರನ್ನೇ ನಂಬಿದ ರೈತರ ಪಾಡೇನು ಎನ್ನುವ ಪ್ರಶ್ನೆ ಕಾಡುತ್ತಿದೆ.
ಈಗಾಗಲೇ ಕಾಮಗಾರಿಗಳಿಗೆ ನಿಗದಿಪಡಿಸಿರುವ ಕಾಲಮಿತಿಯಲ್ಲಿ ಕಾಮಗಾರಿ ನಿರ್ವಹಿಸಲು ಸಾಧ್ಯವಿಲ್ಲ. ಅಲ್ಲದೇ ಕಾಲುವೆಗಳಲ್ಲಿನ ಹೂಳು ತೆರವುಗೊಳಿಸುವುದು ಕೂಡ ಅಗತ್ಯವಾಗಿದೆ. ಆದ್ದರಿಂದ ಕಾಮಗಾರಿ ನಿರ್ವಹಣಾ ದಿನಗಳನ್ನು ಕನಿಷ್ಠ 6 ತಿಂಗಳವರೆಗೆ ವಿಸ್ತರಿಸಿ ಕಾಲುವೆಗಳ ವಾರಾಬಂಧಿ ನಿಯಮಗಳಲ್ಲಿ ಕಾಮಗಾರಿ ನಿರ್ವಹಿಸುವಂತಾಗಬೇಕು ಎನ್ನುತ್ತಾರೆ ಪ್ರಗತಿಪರ ರೈತ ಶಾಂತಪ್ಪ ಮನಗೂಳಿ.