Advertisement

ಕೊನೆಗೂ ಹರಿಯಿತು ಕಾಲುವೆಗೆ ನೀರು

10:19 AM Jul 28, 2019 | Naveen |

ಆಲಮಟ್ಟಿ: ಭೀಕರ ಬರಗಾಲದಿಂದ ತತ್ತರಿಸಿದ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಶನಿವಾರ ಬೆಳಗ್ಗೆಯಿಂದ ನೀರು ಬಿಟ್ಟಿದ್ದು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

Advertisement

ಕಳೆದ 7-8ವರ್ಷಗಳಿಂದ ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದಿರುವುದರಿಂದ ರೈತರು ನಿತ್ಯ ಉಳಿದ ಎಲ್ಲ ಕೆಲಸಗಳನ್ನು ಬಿಟ್ಟು ಜನ-ಜಾನುವಾರುಗಳ ಕುಡಿಯುವ ನೀರಿಗೆ ಕಿ.ಮೀ.ಗಟ್ಟಲೇ ಹೋಗಿ ನೀರು ತರುವ ಸ್ಥಿತಿ ನಿರ್ಮಾಣವಾಗಿತ್ತಾದರೂ ಈ ಭಾಗದ ಜನತೆಗೆ ನೀರಿನ ಮೂಲವೆಂದರೆ ಕೃಷ್ಣಾ ನದಿ. ಬೇಸಿಗೆಯಲ್ಲಿ ಬತ್ತಿ ಹೋಗುವುದರಿಂದ ಕೃಷ್ಣೆ ದಡದಲ್ಲಿರುವವರಿಗೂ ಕೂಡ ನೀರಿಗಾಗಿ ಜನ ಜಾನುವಾರುಗಳು ಪರದಾಡುವಂತಾಗುವದು ಹೊಸತೇನಲ್ಲ.

ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೇ ಇದ್ದರೂ ಕೂಡ ಕೃಷ್ಣೆ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ, ರತ್ನಗಿರಿ, ಕರಾಡ, ಸಾಂಗ್ಲಿ, ಸಾತಾರಾ ಜಿಲ್ಲೆಗಳು ರಾಜ್ಯದ ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಜಲಾನಯನಪ್ರದೇಶದಲ್ಲಿ ಮಳೆಯಾದ ಪರಿಣಾಮ 2019ರ ಜುಲೈ-2ಮಂಗಳವಾರ ರಾತ್ರಿಯಿಂದ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದು ಬರಲು ಆರಂಭಿಸಿ ಶನಿವಾರ ಜು. 27ರಂದು ಬಹುತೇಕ ಭರ್ತಿಯಾಗಿದೆ.

ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯವು ಸಮುದ್ರ ಮಟ್ಟದಿಂದ 488.948 ಮೀ.ಎತ್ತರದಲ್ಲಿದೆ. ಜಲಾಶಯ 1564.83 ಮೀ. ಉದ್ದ ಹೊಂದಿದೆ 531.48 ಮೀ.ಜಲಾಶಯ ಕಟ್ಟಡ ಎತ್ತರವಾಗಿದೆ. 524.256 ಮೀ.ಎತ್ತರದವರೆಗೆ ನೀರು ಸಂಗ್ರಹ ಮಾಡುವ ವಿನ್ಯಾಸ ಹೊಂದಿದ್ದರೂ ಅಂತಾರಾಜ್ಯ ವ್ಯಾಜ್ಯದಿಂದ ಆಲಮಟ್ಟಿ ಜಲಾಶಯದಲ್ಲಿ 519.6 ಮೀ. ಎತ್ತರದವರೆಗೆ ನೀರು ಸಂಗ್ರಹ ಮಾಡಿಕೊಳ್ಳಲು ಒಟ್ಟು 26 ಗೇಟು ಅಳವಡಿಸಲಾಗಿದೆ. ಅಲ್ಲದೇ ಕೆಪಿಸಿಎಲ್ ವತಿಯಿಂದ ಆಲಮಟ್ಟಿ ಜಲಾಶಯದ ಬಲಭಾಗದಲ್ಲಿ 55 ಮೆ.ವ್ಯಾ.ನ 5 ಘಟಕ ಹಾಗೂ 15 ಮೆ.ವ್ಯಾ. ಒಂದು ಘಟಕ ಸೇರಿ ಒಟ್ಟು ಆರು ಘಟಕಗಳಿಗೆ 45 ಸಾವಿರ ಕ್ಯುಸೆಕ್‌ ನೀರು ಹರಿಸುವುದರಿಂದ 290 ಮೆ.ವ್ಯಾ.ವಿದ್ಯುತ್‌ ಉತ್ಪಾದನೆಯಾಗಲಿದೆ.

ರಾಷ್ಟ್ರೀಯ ಜಲ ನೀತಿಯನ್ವಯ ಯಾವುದೇ ನದಿ ನೀರು ಹೊರಗೆ ಬಿಡಬೇಕಾದ ಸಂದರ್ಭದಲ್ಲಿ ಮುನ್ಸೂಚನೆ ನೀಡುವುದು ಕಡ್ಡಾಯವಿದ್ದರೂ ಮಹಾರಾಷ್ಟ್ರ ಇದ್ಯಾವುದನ್ನು ಲೆಕ್ಕಿಸದೆ ಏಕ ಕಾಲಕ್ಕೆ ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುತ್ತಿದೆ. ಇದೆಲ್ಲವನ್ನು ಗಮನದಲ್ಲಿರಿಸಿಕೊಂಡ ಯುಕೆಪಿಯ ತಾಂತ್ರಿಕ ತಜ್ಞರು ಜಲಾಶಯದ ಭದ್ರತೆಗಾಗಿ ಏಕ ಕಾಲಕ್ಕೆ ಜಲಾಶಯದಿಂದ 10 ಲಕ್ಷ 95 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲು ವಿನ್ಯಾಸಗೊಳಿಸಲಾಗಿದೆ.

Advertisement

ಗರಿಷ್ಠ 519.6 ಮೀ. ಎತ್ತರದ ಜಲಾಶಯದಲ್ಲಿ ಗರಿಷ್ಠ 123.081 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಶನಿವಾರ 519.34 ಮೀ. ಎತ್ತರದಲ್ಲಿ 118.558 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು 25,450 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಮುಂಜಾಗೃತಾ ಕ್ರಮವಾಗಿ 25 ಸಾವಿರ ಕ್ಯುಸೆಕ್‌ ನೀರನ್ನು ಕೆಪಿಸಿಎಲ್ ಮೂಲಕ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹರಿಸಲಾಗುತ್ತಿದೆ. ಇನ್ನು 450 ಕ್ಯುಸೆಕ್‌ ನೀರನ್ನು ಆಲಮಟ್ಟಿ ಎಡದಂಡೆ ಶಾಖಾ ಕಾಲುವೆ, ಚಿಮ್ಮಲಗಿ ಏತ ನೀರಾವರಿ ಯೋಜನೆ, ಆಲಮಟ್ಟಿ ಬಲದಂಡೆ ಕಾಲುವೆ, ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-1ಮತ್ತು ಡಿಸಿ-2ಕಾಲುವೆಗಳಿಗೆ, ಮುಳವಾಡ ಏತ ನೀರಾವರಿ ಯೋಜನೆಯ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳು ಸೇರಿದಂತೆ ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲ ಕುಡಿಯುವ ನೀರಿನ ಘಟಕಗಳಿಗೆ ಮತ್ತು ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದೆ ಎಂದು ಕೃಷ್ಣಾ ಭಾಗ್ಯಜಲ ನಿಗಮದ ಮೂಲಗಳು ತಿಳಿಸಿವೆ.

ಕಾಲುವೆಗೆ ನೀರು: ಯುಕೆಪಿ ನೀರಾವರಿ ಸಲಹಾ ಸಮಿತಿ ಸಭೆ ಜು. 20ರಂದು ಬೆಂಗಳೂರನಲ್ಲಿ ನಡೆದು ಬಸವಸಾಗರ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ಜು. 21ರಂದು ನೀರು ಹರಿಸಲು, ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ಜು. 27ರಂದು ನೀರು ಹರಿಸಲು ತೀರ್ಮಾನಿಸಲಾಗಿತ್ತು. ಅದರನ್ವಯ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಆರಂಭಿಸಲಾಯಿತು.

ಮೊದಲೇ ಬರದ ನಾಡೆಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಖಂಡ ವಿಜಯಪುರ ಜಿಲ್ಲೆಗೆ ಬರದ ನಾಡು ಎಂಬ ಹಣೆಪಟ್ಟಿ ಅಳಿಸಲು ಜಿಲ್ಲೆಯ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತಂದು ಅವಳಿ ಜಲಾಶಯಗಳ ವ್ಯಾಪ್ತಿಯಲ್ಲಿ ನೀರಿನ ಬಳಕೆಯಲ್ಲಿ ಸಾಕಷ್ಟು ವ್ಯಾತ್ಯಾಸವಿದೆ. ಆದ್ದರಿಂದ ನೀರು ಮರು ಹಂಚಿಕೆ ಮಾಡಿ ಬರಗಾಲದಿಂದ ಬಸವಳಿದಿರುವ ಜಿಲ್ಲೆಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next