ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿಗೆ 2019 ಡಿಸೆಂಬರ್ 1ರಿಂದ 2020ರ ಮಾರ್ಚ್ 20ರ ವರೆಗೆ ವಾರಾಬಂದಿ ಪದ್ಧತಿ ಅನುಸರಿಸಿ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ರವಿವಾರ ಸಂಜೆ ಆಲಮಟ್ಟಿ ಕೃಷ್ಣಾಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 2020ರ ವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳ ಕೊನೆಯ ಅಂಚಿನವರೆಗೆ ನೀರು ಹರಿಸಲು ಪೊಲೀಸರ ನೆರವಿನೊಂದಿಗೆ ದಿನದ 24 ಗಂಟೆಗಳ ಕಾಲ ಗಸ್ತು ಮಾಡಿ ಕಾಲುವೆಗಳ ಮೇಲ್ಭಾಗದಲ್ಲಿ ನೀರೆತ್ತುವ ಪಂಪ್‌ಸೆಟ್ ಹಾಗೂ ಡೀಸೆಲ್ ಎಂಜಿನ್‌ಗಳನ್ನು ವಶಪಡಿಸಿಕೊಂಡು ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಲುವೆಗಳಿಗೆ ಹಾನಿ, ಕಾಲುವೆಗಳ ಗೇಟುಗಳಿಗೆ ಹಾನಿ, ಎಸ್ಕೇಪ್ ಗೇಟುಗಳನ್ನೆತ್ತಿ ಹಳ್ಳಕ್ಕೆ ನೀರು ಬಿಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನು 4 ಜಿಲ್ಲೆಗಳ ಪೊಲೀಸ್ ವರಿಷ್ಠಾ ಧಿಕಾರಿಗಳಿಗೆ ಇಲಾಖೆ ವತಿಯಿಂದ ಪತ್ರ ಬರೆದು ಪೊಲೀಸರ ನೆರವು ಪಡೆದು ಎಲ್ಲ ಕಾಲುವೆಗಳ ಕೊನೆಯಂಚಿನ ರೈತರ ಜಮೀನಿಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ನ.17ರಂದು ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯಗಳಲ್ಲಿ ಸೇರಿ ಒಟ್ಟು 122.795 ಟಿಎಂಸಿ ಅಡಿ ನೀರು ಬಳಸಿಕೊಳ್ಳಬಹುದಾಗಿದ್ದು, ಇದರಲ್ಲಿ 14ದಿನ ಚಾಲು ಹಾಗೂ 8 ದಿನ ಬಂದ್ ಪದ್ಧತಿ ಅನುಸರಿಸಲಾಗುವುದು. ಈಗ ಇನ್ನೂ 5 ಸಾವಿರ ಕ್ಯೂಸೆಕನಷ್ಟು ನೀರು ಒಳಹರಿವಿದೆ, ಲಭ್ಯವಿರುವ ನೀರಿನಲ್ಲಿ ನ.21ರ ವರೆಗೆ ಕಾಲುವೆಗಳಿಗೆ ನೀರು ಹರಿಸಿ ನಂತರ ಹತ್ತು ದಿನಗಳ ಕಾಲ ನೀರು ಸ್ಥಗಿತಗೊಳಿಸಿ
ಮಾರ್ಚ್ 20ರ ವರೆಗೆ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲಾಗುವುದು ಎಂದರು.
2019ರ ನ.21ರಿಂದ 2020ರ ಜೂನ್ ಅಂತ್ಯದವರೆಗೆ ಫಲಾನುಭವಿ ಜಿಲ್ಲೆಗಳಿಗೆ ಕುಡಿಯುವ ನೀರು, ಭಾಷ್ಪೀಭವನ, ಕೈಗಾರಿಕೆ, ಕೆರೆ ಹಾಗೂ ಬಾಂದಾರ ತುಂಬಲು ಹಾಗೂ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗದಂತೆ ಒಟ್ಟು ಎರಡೂ ಜಲಾಶಯಗಳಲ್ಲಿ 38.80 ಟಿಎಂಸಿ ಅಡಿ ನೀರು ಸಂಗ್ರಹಿಸಿಕೊಂಡು ಉಳಿದ 79.20 ಟಿಎಂಸಿ ಅಡಿ ನೀರು ರೈತರ ಜಮೀನಿಗೆ ಉಣಿಸಲು ಕ್ರಮವಹಿಸುವಂತೆ ತಿಳಿಸಲಾಗಿದೆ ಎಂದರು.
ಸಿಎಂ ನೇತೃತ್ವದಲ್ಲಿ ಸಭೆ: ಅಖಂಡ ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೊಳಪಡಿಸಲು ಹಾಗೂ ಕಚೇರಿಗಳ ಸ್ಥಳಾಂತರ, ಕಾಲುವೆಗಳ ಸಮಸ್ಯೆ, ಸಿಬ್ಬಂದಿ, ಕೆರೆ, ಬಾಂದಾರ ತುಂಬುವುದು ಸೇರಿದಂತೆ ಅವಳಿ ಜಿಲ್ಲೆಗಳ ಸಮಸ್ಯೆ ನಿವಾರಣೆಗೆ 2020ರ ಜನವರಿ ತಿಂಗಳಲ್ಲಿ ಸಭೆ ನಡೆಸಲಾಗುವುದು. ರೈತರಲ್ಲಿ ನೀರು ಬಳಸಿಕೊಳ್ಳುವ ಬಗ್ಗೆ ಜಾಗೃತಿಯೂ ಅತೀ ಅವಶ್ಯವಿದೆ ಇದರಿಂದ ನೀರು ಪೋಲಾಗುವುದನ್ನು ತಡೆಗಟ್ಟಲು ಸಾಧ್ಯ ಎಂದರು. ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಇದ್ದರು.