ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದಿರುವುದಕ್ಕೆ ಆಲಮಟ್ಟಿಯಲ್ಲಿರುವ ಕೃ.ಮೇ.ಯೋ ವಿಶೇಷ ಭೂಸ್ವಾಧೀನಾಧಿ ಕಾರಿಗಳ ಕಚೇರಿ ಜಪ್ತಿ ಪ್ರಕ್ರಿಯೆ ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ಗುರುವಾರ ನಡೆಯಿತು.
ಬಸವನಬಾಗೇವಾಡಿ ತಾಲೂಕಿನ ಕವಲಗಿ ಗ್ರಾಮದ ಯಲಗೂರದಪ್ಪ ಚನ್ನರುದ್ರಪ್ಪ ಈರಗಾರ ಅವರಿಗೆ ಸೇರಿದ 2 ಎಕರೆ 3 ಗುಂಟೆ ಜಮೀನನ್ನು 1999ರಲ್ಲಿಯೇ ಕೃಷ್ಣಾ ಮೇಲ್ದಂಡೆ ಯೋಜನೆಯ ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ವಶಪಡಿಸಿಕೊಂಡ ಜಮೀನಿಗೆ ಯೋಗ್ಯ ಪರಿಹಾರ ನೀಡಬೇಕೆಂದು ರೈತರು ಹಲವಾರು ಬಾರಿ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗದೇ ಇರುವುದರಿಂದ ಜಮೀನಿಗೆ ಸಮರ್ಪಕ ಪರಿಹಾರಕ್ಕಾಗಿ ಬಸವನ ಬಾಗೇವಾಡಿಯ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯವು ಆಲಮಟ್ಟಿಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಕಚೇರಿ ಜಪ್ತಿಗೆ ಆದೇಶಿಸಿತ್ತು. ಸಂತ್ರಸ್ತ ರೈತ ಪರ ವಕೀಲರು ಹಾಗೂ ನ್ಯಾಯಾಲಯದ ಬೇಲಿಪ್ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಜಪ್ತಿಗೆ ಗುರುವಾರ ಆಗಮಿಸಿದ ವೇಳೆ ಕಚೇರಿಯ ಬಹುತೇಕ ಮಹತ್ವದ ಕೊಠಡಿಗಳಿಗೆ ಬೀಗ ಹಾಕಿ ಇನ್ನುಳಿದ ಕೊಠಡಿಗಳನ್ನು ಮಾತ್ರ ತೆರೆದಿಡಲಾಗಿತ್ತು.
ಆದರೆ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ಸಾಮಗ್ರಿ, ವಾಹನ ಸೇರಿದಂತೆ ಹಲವಾರು ಸಾಮಗ್ರಿ ಜಪ್ತಿಗೆ ಬಸವನಬಾಗೇವಾಡಿ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು. ಜಪ್ತಿಗಾಗಿ ಪೀಠೊಪಕರಣವನ್ನು ಕಚೇರಿ ಆವರಣಕ್ಕೆ ತರಲಾಗಿತ್ತು. ಅಧಿಕಾರಿಗಳ ಅಸಹಕಾರ ಕಾರಣ ಜಪ್ತಿ ನಡೆಯದೇ ಮರಳಿ ಹೋಗಬೇಕಾಯಿತು. 1999ರಲ್ಲಿಯೇ ಭೂಸ್ವಾ ಧೀನಗೊಂಡಿದ್ದ ಈ ಜಮೀನಿಗೆ 20 ವರ್ಷ ಆದರೂ ಪರಿಹಾರ ನೀಡಿರಲಿಲ್ಲ. ಇದಕ್ಕಾಗಿ ರೈತ ಯಲಗೂರದಪ್ಪ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರಿಂದ ಬಸವನಬಾಗೇವಾಡಿ ಸಿವಿಲ್ ನ್ಯಾಯಾಲಯ ಈ ಪ್ರಕರಣದ ಕುರಿತಂತೆ, 2002ರಿಂದ ಇಲ್ಲಿಯವರೆಗೆ ಪರಿಹಾರ ಮೊತ್ತಕ್ಕೆ ಬಡ್ಡಿ ವಿಧಿಸಿ ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿತ್ತು.
ಆದರೂ ಆಲಮಟ್ಟಿಯ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಿದ್ದರು. ಸುಮಾರು 58 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯ ಆದೇಶ ಪಾಲನೆ ಮಾಡಿ ಪರಿಹಾರ ನೀಡುವಂತೆ ಸಾಕಷ್ಟು ಬಾರಿ ಆಲಮಟ್ಟಿ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪರಿಹಾರ ನೀಡಿರಲಿಲ್ಲ. ಅದಕ್ಕಾಗಿ ಬಸವನಬಾಗೇವಾಡಿ ಸಿವಿಲ್ ನ್ಯಾಯಾಲಯ ಆಲಮಟ್ಟಿಯ ಕಚೇರಿ ಜಪ್ತಿಗೆ ಆದೇಶಿಸಿತ್ತು.
ಅದರಂತೆ ಜಪ್ತಿಗೆ ನ್ಯಾಯಾಲಯದ ಬೇಲಿಪ್, ರೈತ ಪರ ನ್ಯಾಯವಾದಿಗಳು ಬಂದರೆ, ಅಧಿಕಾರಿಗಳು ಅಸಹಕಾರ ನೀಡಿದರೆಂದು ರೈತ ಪರ ವಕೀಲ ಎಸ್.ಎಂ. ಚಿಂಚೋಳಿ ಹೇಳಿದರು. ನಂತರ ಎಸ್‌ಎಲ್‌ಒ ಅವರು, ಇದೇ 30 ರಂದು ಈ ಬಗ್ಗೆ ನ್ಯಾಯಾಲಯಕ್ಕೆ ಪ್ರಕರಣವಿದ್ದು, ಅಲ್ಲಿ ಹಾಜರಾಗಿ ವಿವರಣೆ ನೀಡಲಾಗುವುದು. ಅಲ್ಲಿಯವರೆಗೆ ಜಪ್ತಿ ಮುಂದೂಡುವಂತೆ ಅಧಿಕಾರಿಗಳು ಮನವಿ ಮಾಡಿದರು.