ಆಲಮಟ್ಟಿ: ರಾಜ್ಯ ಸರ್ಕಾರದ ಮಹತ್ವಾಂಕ್ಷಿ ನೀರಾವರಿ ಯೋಜನೆಗಳಲ್ಲೊಂದಾಗಿರುವ ಕೃ. ಮೇ.ಯೋ. ವ್ಯಾಪ್ತಿಯ ಮುಳವಾಡ ಏತ ನೀರಾವರಿ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಜಿಲ್ಲೆಯ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ರವಿವಾರ ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ವಿಜಯಪುರ ಶಾಖಾ ಕಾಲುವೆಯ ಕೂಡಗಿ ಬಳಿ ರೈಲ್ವೆ ಹಳಿ ದಾಟಿಸುವ ಕಾಮಗಾರಿ ಸ್ಥಳಕ್ಕೆ ರೈತರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು. ಕೂಡಗಿ ಬಳಿ ರೈಲ್ವೆ ಹಳಿ ದಾಟಿಸುವ (ಕೆಳ ಸೇತುವೆ) ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಈಗ ರಾಜ್ಯದವರೇ ಆಗಿರುವ ರೈಲ್ವೆ ಖಾತೆ ರಾಜ್ಯ ಸಚಿವರು ನಮ್ಮವರೇ ಹಾಗೂ ಜಿಲ್ಲೆಯ ಸಂಸದರು ಕಳೆದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರೂ ಕೂಡ ರೈತರ ಬವಣೆ ನೀಗಿಸಲಾಗಿಲ್ಲ ಎಂದು ಆರೋಪಿಸಿದರು.
ಜನಪ್ರತಿನಿ ಧಿಗಳಾದವರು ಜನರ ಕಷ್ಟ-ಸುಖಗಳನ್ನು ಕೇಳದಿದ್ದರೆ ತಾವು ಮಾಡುವುದಾದರೂ ಏನು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ರೈತರು ಜಿಲ್ಲೆಯ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಗುತ್ತಿಗೆ ಪಡೆದ ಗುತ್ತಿಗೆದಾರರು ನಿಧಾನವೇ ಪ್ರಧಾನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳಾದವರು ಅಧಿಕಾರಿಗಳಿಂದ
ಕೆಲಸ ಪಡೆಯಬೇಕು. ಅದನ್ನು ಬಿಟ್ಟು ಅವರು ಹೇಳಿದಂತೆಯೇ ತಲೆ ಅಲ್ಲಾಡಿಸುವಂತಾಧರೆ ಹೇಗೆ ಎಂದು ಪ್ರಶ್ನಿಸಿದರು.
ನಮ್ಮ ನೆರೆಯ ರಾಜ್ಯಗಳಲ್ಲಿ ರೈಲ್ವೆ ಹಳಿ ದಾಟಿಸುವ ಕಾಮಗಾರಿಗಳು ಕೇವಲ ಐದು ದಿನಗಳಲ್ಲಿ ಮುಕ್ತಾಯ ಆಗುವುದಾದರೆ ನಮ್ಮಲ್ಲಿ ಏಕೆ ಆಗುತ್ತಿಲ್ಲ, ದೇಶವು ಸಾಕಷ್ಟು ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಹೊಣೆ ಹೊರುವವರೇ ತಮ್ಮ ಹೊಣೆಯನ್ನು ಮರೆತರೇ ಆಗುವುದಾದರೂ ಹೇಗೆ ಎಂದು ಕುಟುಕಿದರು.
ನಮ್ಮವರೇ ರೈಲ್ವೆ ರಾಜ್ಯ ಸಚಿವರಿದ್ದು ಅವರೊಂದಿಗಾದರೂ ನಮ್ಮ ಸಂಸದರು ಚರ್ಚಿಸಿ ಜಿಲ್ಲೆಯ ಜನರಿಗೆ ಆಗುತ್ತಿರುವ ಅನ್ಯಾಯ ಹೋಗಲಾಡಿಸಿ ನ್ಯಾಯ ಕೊಡಿಸಬೇಕಾಗಿರುವದು ಅವರ ಜವಾಬ್ದಾರಿ. ಈಗ ಸಾಗುತ್ತಿರುವ ಕಾಮಗಾರಿ ಕಂಡರೇ ಜಿಲ್ಲೆಯ ಜನರಿಗೆ ಸಂಬಂಧಿಸಿದ ರೈಲ್ವೆ ಅಧಿಕಾರಿಗಳು ಹಾಗೂ ಸಂಸದರು ಮೋಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಆದ್ದರಿಂದ ಜಿಲ್ಲೆಯ ಜನಪ್ರತಿನಿಧಿಗಳು ರೈಲ್ವೆ ಮಂತ್ರಿ ಹಾಗೂ ರೈಲ್ವೆ ಅಧಿಕಾರಿಗಳ ಮೇಲೆ ಒತ್ತಡ ತಂದು ಅತಿ ಶೀಘ್ರವಾಗಿ ಕಾಮಗಾರಿ ಮುಗಿಸಬೇಕು ಎಂದರು.