Advertisement

ಬರಗಾಲ ಮುಕ್ತಿಗೆ ಅರಣ್ಯ ಕೃಷಿ ಅಗತ್ಯ

12:01 PM Oct 30, 2019 | Team Udayavani |

ಶಂಕರ ಜಲ್ಲಿ
ಆಲಮಟ್ಟಿ:
ಬರಗಾಲದಿಂದ ಸತತವಾಗಿ ಹಾನಿಗೀಡಾಗುತ್ತಿರುವ ಕೃಷ್ಣಾ ನದಿ ದಡದಲ್ಲಿರುವ ಗ್ರಾಮಗಳ ರೈತರಿಗೆ ಅರಣ್ಯ ಕೃಷಿ ಮಾಡುವ ಬಗ್ಗೆ ಜಾಗೃತಿ ಮೂಡಿಸಿದರೆ ಜಲಾಶಯಗಳಿಗೆ ಹರಿದು ಬರುತ್ತಿರುವ ಹೂಳನ್ನು ತಡೆಗಟ್ಟುವುದು ಸೇರಿದಂತೆ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಜಮೀನಿಗೆ ನೀರುಣಿಸಲು ಜಲಾಶಯಗಳನ್ನು ನಿರ್ಮಾಣ ಮಾಡುತ್ತಿವೆ. ಇದರ ಭಾಗವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಸುಮಾರು 192 ಗ್ರಾಮಗಳು ಬಾಧಿ ತಗೊಂಡಿರುವುದಲ್ಲದೇ ಲಕ್ಷಾಂತರ ಎಕರೆ ಜಮೀನನ್ನು ಯೋಜನೆ ಸಫಲತೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿರುವುದರಿಂದ ಅಂದಾಜು 4 ಲಕ್ಷ ಕುಟುಂಬಗಳು ನಿರಾಶ್ರಿತ ಸಂತ್ರಸ್ತರಾಗಿ ಗೋವಾ, ಮಹಾರಾಷ್ಟ್ರ ಹಾಗೂ ರಾಜ್ಯದ ನಗರ ಪ್ರದೇಶಗಳಿಗೆ ಕೂಲಿಯನ್ನರಸಿ ಹೋಗುವಂತಾಗಿದೆ.

ಈಗಾಗಲೇ ಉತ್ತರ ಕರ್ನಾಟಕದಲ್ಲಿಯೇ ಇರುವ ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿರುವುದರಿಂದ ಹೂಳು ತೆರುವುಗೊಳಿಸಲು ಕೋಟ್ಯಂತರ ರೂ. ವ್ಯಯ ಮಾಡಿ ಹೂಳು ತೆಗೆಯಲು ಸರ್ಕಾರ ಸಿದ್ಧವಾಗಿದ್ದರೂ ಕೂಡ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತುಂಬಿರುವ ಹೂಳನ್ನು ಬೇರೆ ಕಡೆಗಳಲ್ಲಿ ಸಂಗ್ರಹ ಮಾಡುವುದಾದರೂ ಎಲ್ಲಿ?
ಅದಕ್ಕೆ ತಗಲುವ ವೆಚ್ಚವಾದರೂ ಎಷ್ಟು? ಇವುಗಳ ಮಧ್ಯ ನೂತನವಾಗಿ ಪರ್ಯಾಯ ಜಲಾಶಯ ನಿರ್ಮಿಸುವುದು ಸೂಕ್ತವೇ? ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಇದೆಲ್ಲದರ ಮಧ್ಯೆ ಉತ್ತರ ಕರ್ನಾಟಕದ ಬರಗಾಲದ ಬವಣೆಯನ್ನು ನೀಗಿಸಲು ಹಿಂದಿನ ಪ್ರಧಾನಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರು ಆಲಮಟ್ಟಿಯಲ್ಲಿ ಜಲಾಶಯ ನಿರ್ಮಾಣಕ್ಕೆ 1964 ಮೇ 22ರಂದು ಭೂಮಿಪೂಜೆ ನೆರವೇರಿಸಿದ್ದರೂ ಪೂರ್ಣಗೊಂಡಿರುವುದು ಮಾತ್ರ 2000ನೇ ಸಾಲಿನಲ್ಲಿ. ಸ್ವಾಧೀನ ಭೂಮಿಯಲ್ಲಿ ಅರಣ್ಯಕೃಷಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರು ಸಂಗ್ರಹ ಮಾಡಲು ಲಕ್ಷಾಂತರ ಎಕರೆ ಜಮೀನನ್ನು ಸರ್ಕಾರ ಸ್ವಾಧೀನ ಮಾಡಿಕೊಂಡಿದೆ.

ಅವಳಿ ಜಲಾಶಯಗಳಲ್ಲಿ ಮಾರ್ಚ್‌ನಿಂದ ಜುಲೈವರೆಗೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಮಟ್ಟ ಕುಸಿದಿರುತ್ತದೆ. ಈ ವೇಳೆಯಲ್ಲಿ ಕೆಲವು ರೈತರು ಆ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವುದು ಹೊಸದೇನೂ ಅಲ್ಲ. ವ್ಯವಸಾಯ ಮಾಡಬೇಕಾದರೆ ಸಹಜವಾಗಿ ಉಳುಮೆ ಮಾಡಿ ಬಿತ್ತನೆ ಮಾಡಬೇಕು. ಈ ವೇಳೆಯಲ್ಲಿ ಭೂಮಿಯು ಸಡಿಲವಾಗಿರುತ್ತದೆ ಅಲ್ಲದೇ ನದಿಗೆ ಬಂದು ಸೇರುವ ಹಳ್ಳ-ಕೊಳ್ಳ, ಉಪನದಿಗಳ ಮೂಲಕವಾಗಿಯೂ ಮಳೆ ಆರಂಭದ ದಿನಗಳಲ್ಲಿ ಮುಖ್ಯ ನದಿಗೆ ಹೂಳು ಹರಿದು ಬರುತ್ತದೆ. ಇದರಿಂದ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯಗಳಲ್ಲಿ ಸಹಜವಾಗಿ ಹೂಳು ತುಂಬಿಕೊಳ್ಳುತ್ತದೆ.

Advertisement

ಇದರಿಂದ ಸಾವಿರಾರು ವರ್ಷಗಳ ಕಾಲ ಬದುಕಿ ರೈತರ ಜಮೀನಿಗೆ ನೀರುಣಿಸಬೇಕಾದ ಜಲಾಶಯಗಳು ಕೇವಲ 60-70 ವರ್ಷಗಳಲ್ಲಿ ಸಂಪೂರ್ಣವಾಗಿ ಹೂಳು ತುಂಬುತ್ತದೆ. ಬಾಂದಾರ ನಿರ್ಮಾಣ: ಹಳ್ಳ-ಕೊಳ್ಳಗಳಿಗೆ ಬಾಂದಾರ ಹಾಗೂ ಚೆಕ್‌ ಡ್ಯಾಮಗಳನ್ನು ನಿರ್ಮಿಸಿ ಅದರಲ್ಲಿ ಸಂಗ್ರಹವಾಗುವ ನೀರಿನಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಜಮೀನುಗಳಲ್ಲಿರುವ ಬಾವಿ ಹಾಗೂ ಕೊಳವೆ ಬಾವಿಗಳಿಗೆ ನೀರು ಬರುತ್ತದೆ. ಇನ್ನು ಅದರಲ್ಲಿ ಸಂಗ್ರಹವಾಗುವ ಹೂಳು ಅಂದರೆ ಫಲವತ್ತಾದ ಮಣ್ಣನ್ನು ಸಂಬಂಧಿ ಸಿದ ಗ್ರಾಪಂ, ಪಪಂ, ಪುರಸಭೆ ಹೀಗೆ ಸ್ಥಳೀಯ ಆಡಳಿತಗಳು ಕಡಿಮೆ ದರದಲ್ಲಿ ರೈತರಿಗೆ ನೀಡಿದರೆ ಇತ್ತ ಹೂಳು ತೆರವಾಗುತ್ತದೆ ಸರ್ಕಾರಕ್ಕೆ ಆದಾಯವೂ ಬರುತ್ತದೆಯಲ್ಲದೇ ರೈತರು ಉತ್ತಮ ಫಸಲು ಪಡೆಯಲು ಸಹಕಾರಿಯಾಗುತ್ತದೆ.

ಆದ್ದರಿಂದ ಸ್ವಾಧಿಧೀನ ಪಡಿಸಿಕೊಂಡಿರುವ ಜಮೀನು ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಅರಣ್ಯಕೃಷಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ನದಿ ದಡಗಳಲ್ಲಿ ಮಣ್ಣು ಹರಿದು ಬಾರದಂತೆ ವಿವಿಧ ಬಗೆಯ ಗಿಡಗಳನ್ನು ನೆಡುವುದರಿಂದ ಉತ್ತಮ ಫಸಲು ದೊರೆಯಲಿದ್ದು ಇದರಿಂದ ರೈತರಿಗೆ ಅನುಕೂಲವಾಗಲಿದೆ.

ರಾಜ್ಯದಲ್ಲಿ ಕೃಷ್ಣಾ ನದಿ 1300 ಕಿ.ಮೀ. ಹರಿದಿದೆ ಹಾಗೂ ಆಲಮಟ್ಟಿ ಜಲಾಶಯದ ಹಿನ್ನೀರು 927 ಕಿ.ಮೀ. ವ್ಯಾಪಿಸಿದೆ. ಇದರಿಂದ ನದಿ ದಂಡೆ ಹಾಗೂ ನಾಲಾಗಳ ಪಕ್ಕದಲ್ಲಿ ಅರಣ್ಯ ಕೃಷಿ ಮಾಡುವುದರಿಂದ ಹೂಳು ಬರುವುದಿಲ್ಲ ಮತ್ತು ಪ್ರವಾಹಗಳನ್ನೂ ತಡೆಗಟ್ಟಬಹುದಾಗಿದೆ. ಇದೆಲ್ಲದರ ಬಗ್ಗೆ ಜಾಗೃತಿ ಮೂಡಿಸಲು ನಿಗಮದಿಂದ ನದಿ ದಡದಲ್ಲಿ ಸುಮಾರು ಅರ್ಧ ಕಿ.ಮೀ.ವರೆಗೆ ಅರಣ್ಯ ಬೆಳೆಸುವ ಕಾರ್ಯ ನಡೆದಿದೆ. ರೈತರಿಗೆ ಅತಿ ಕಡಿಮೆ ದರದಲ್ಲಿ ಸಸ್ಯಗಳನ್ನು ವಿತರಿಸಲಾಗುತ್ತಿದೆ. ಒಟ್ಟಾರೆ ಗಿಡಮರಗಳನ್ನು ಬೆಳೆಸಿದ ಪ್ರದೇಶದಲ್ಲಿ ನೆಲ ಕಾಣದಂತಾದರೆ ಮಳೆಯೂ ಸುರಿಯುತ್ತದೆ ಮತ್ತು ಪ್ರವಾಹ, ಹೂಳು ಬರುವುದಿಲ್ಲ ಎನ್ನುತ್ತಾರೆ ಆಲಮಟ್ಟಿ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ.

Advertisement

Udayavani is now on Telegram. Click here to join our channel and stay updated with the latest news.

Next