ಆಲಮಟ್ಟಿ: ವಿಶ್ವದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಹೂವು ಬೆಳೆಗಾರರ ಬದುಕು ಬಾಡುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದುವೆ, ಜಾತ್ರೆ, ಉತ್ಸವ ರದ್ದುಗೊಳಿಸಿದ್ದರಿಂದ, ಪ್ರಸಿದ್ಧ ದೇಗುಲಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿದ್ದರಿಂದ ಹೂವಿಗೆ ಬೇಡಿಕೆ ಕುಸಿದಿದೆ. ಹೀಗಾಗಿ ಹೂಗಳು ಮಾರುಕಟ್ಟೆಗೆ ಸಾಗಿಸಲಾಗದೇ ಹೊಲದಲ್ಲೇ ಬಾಡಿ, ಕೊಳೆತು ಮಣ್ಣು ಪಾಲಾಗುತ್ತಿವೆ.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಊರು ಕಳೆದುಕೊಂಡಿದ್ದ ಬಹುತೇಕ ಸಂತ್ರಸ್ತರ ಕುಟುಂಬಕ್ಕೆ ಹೂವಿನ ಬೆಳೆ ಆಸರೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಗುಳಬಾಳ ಗ್ರಾಮದ ರಮೇಶ ಬಸಪ್ಪ ಹೂಗಾರ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮನೆ ಹಾಗೂ ಹೊಲಗಳನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಸರ್ಕಾರದಿಂದ ನೀಡಿದ ಪುಡಿಗಾಸು ಪರಿಹಾರ ಪಡೆದು ಇಲ್ಲಿಗೆ ಸಮೀಪದ ಯಲಗೂರದಲ್ಲಿ ರೈತರೊಬ್ಬರ ಜಮೀನು ಲಾವಣಿಗೆ ಪಡೆದು ಮತ್ತು ಒಂದು ಎಕರೆ ಜಮೀನು ಖರೀದಿಸಿದ್ದಾರೆ. ಈ ಎರಡೂ ಜಮೀನುಗಳಲ್ಲಿ ವಿವಿಧ ಬಗೆಯ ಹೂವುಗಳನ್ನು ಬೆಳೆದಿದ್ದಾರೆ. ಈ ಹೂವುಗಳನ್ನು ಪಟ್ಟಣ, ನಗರ ಪ್ರದೇಶಗಳಿಗೆ ಹೋಗಿ ಮಾರುತ್ತಿದ್ದರು.
ಹೂವಿನ ವ್ಯಾಪಾರವೇ ವಂಶಪಾರಂಪರ್ಯ ಉದ್ಯೋಗವಾಗಿದೆ. ಆದರೂ ಕಳೆದ 15 ವರ್ಷಗಳಿಂದ ಸಾಲಸೋಲ ಮಾಡಿ ಸೇವಂತಿಗೆ (ಗಲಾಟಿ) ಸಸಿಗಳನ್ನು ಖರೀದಿಸಿ ತಂದು ನಾಟಿ ಮಾಡಿ ಹೂ ಬೆಳೆಯುತ್ತಿದ್ದಾರೆ. ಹೊಲದಲ್ಲಿ ಬೆಳೆದ ಹೂವುಗಳನ್ನು ಮನೆಗೆ ತಂದು ಕುಟುಂಬದ ಸದಸ್ಯರು ಸೇರಿ ಮಾಲೆಗಳನ್ನು ಕಟ್ಟಿ ಆಲಮಟ್ಟಿ, ನಿಡಗುಂದಿಯ ವಿವಿಧ ಅಂಗಡಿಗಳಿಗೆ 5 ರೂ.ಗೆ ಒಂದರಂತೆ ಮಾರುತ್ತಾರೆ. ಹೂಮಾಲೆ ಕಟ್ಟಿ ಉಳಿಯುವ ಹೂಗಳನ್ನು ಇಲಕಲ್ಲ, ಆಲಮಟ್ಟಿ ಹಾಗೂ ನಿಡಗುಂದಿಗಳಲ್ಲಿ 50 ರೂ.ಗೆ ಕೆಜಿಯಂತೆ ಮಾರುತ್ತಾರೆ. ಆದರೆ ಈಗ ಹೂವು ಮಾರಲಾಗದೇ ಹೂ ಬೆಳೆಗಾರರ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ.
ಮಣ್ಣು ಪಾಲಾದ ಹೂ: ಲಾಕ್‌ಡೌನ್ ನಿಂದಾಗಿ ಈಗ ಹೂ ಮಾರಲಾಗುತ್ತಿಲ್ಲ. ಕೊನೆಗೆ ಗಿಡವಾದರೂ ಬದುಕಲಿ ಎಂದು ತೋಟದಲ್ಲಿಯೇ ಹೂವು ಕತ್ತರಿಸಿ ಮಣ್ಣು ಪಾಲು ಮಾಡಲಾಗುತ್ತಿದೆ. ಕಷ್ಟಪಟ್ಟು ಬೆಲೆದ ಹೂವನ್ನು ಕೈಯಾರೆ ಕತ್ತರಿಸಿ ನೆಲಕ್ಕೆಸೆಯುವಂತಾಗಿದೆ ಎಂದು ರೈತ ರಮೇಶ ಹೂಗಾರ ಅಳಲು ತೋಡಿಕೊಂಡಿದ್ದಾರೆ. ಇದೇ ಯಲಗೂರಿನ ರೈತ ಮಂಜುನಾಥ
ಕಿರಿಶ್ಯಾಳ ಅವರೂ ಕೂಡ ದುಂಡುಮಲ್ಲಿಗೆ, ಕಾಕಡಾ ಮಲ್ಲಿಗೆ ಹಾಗೂ ಸೇವಂತಿಗೆ ಹೂ ಬೆಳೆದಿದ್ದಾರೆ. ಅವರೂ ಕೂಡ ಮಾರಾಟ ಮಾಡಲಾಗದೇ ತೊಂದರೆ ಅನುಭವಿಸುವಂತಾಗಿದೆ.
ಸರ್ಕಾರ ಹೂವು ಬೆಳೆದ ರೈತರ ಬದುಕು ಹಾಳಾಗದಂತೆ ಅವರಿಗೆ ಆರ್ಥಿಕ ಸಹಾಯ ನೀಡಬೇಕು.
ಚಂದ್ರಶೇಖರ ಹೆರಕಲ್ಲ,
ಪ್ರಗತಿಪರ ಸಂಘಟನೆ ಅಧ್ಯಕ್ಷ
ರೈತರ ಜಮೀನಿಗೆ ಹೋಗಿ ಸಮೀಕ್ಷೆ ನಡೆಸಲಾಗುವುದು. ನಂತರ ಸರ್ಕಾರದ ನಿಯಮದಂತೆ ಸೂಕ್ತ ಕ್ರಮ ವಹಿಸಲಾಗುವುದು.
ಸಿ.ಬಿ.ಪಾಟೀಲ, ಸಹಾಯಕ
ನಿರ್ದೇಶಕರು ತೋಟಗಾರಿಕೆ ಇಲಾಖೆ
ಬಸವನಬಾಗೇವಾಡಿ-ಮುದ್ದೇಬಿಹಾಳ
ಶಂಕರ ಜಲ್ಲಿ