ಆಲಮಟ್ಟಿ: ಚಿಮ್ಮಲಗಿ ಪೂರ್ವ ಕಾಲುವೆಯ ನಾಗಠಾಣ ಶಾಖಾ ಕಾಲುವೆ ಹಾಗೂ ಕೋರವಾರ ಶಾಖಾ ಕಾಲುವೆಯ ಎಲ್ಲ ಕಾಮಗಾರಿ ಮುಗಿಸಿ ಕಾಲುವೆಗಳಿಗೆ ತ್ವರಿತವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಉಪ ಮುಖ್ಯ ಅಭಿಯಂತರರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಆಲಮಟ್ಟಿ ಕೃಷ್ಣಾ ಭಾಗ್ಯಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿಗೆ ಕೊಕಟನೂರ, ಮುಳಸಾವಳಗಿ, ಇಂಗಳಗಿ, ನಿವಾಳಖೇಡ, ಕಡ್ಲೆವಾಡ, ದೇವರಹಿಪ್ಪರಗಿ, ಜಾಲವಾದ, ಶರಣಸೋಮನಾಳ, ಹರನಾಳ, ಬೊಮ್ಮನಜೋಗಿ, ಬೋರಗಿ ಗ್ರಾಮಗಳ ರೈತರು ಮಂಗಳವಾರ ಬೆಳಗ್ಗೆ ಆಗಮಿಸಿ ಮುಖ್ಯ ಅಭಿಯಂತರರ ಅನುಪಸ್ಥಿತಿಯಲ್ಲಿ ಉಪ ಮುಖ್ಯ ಅಭಿಯಂತರರಾದ ಪದ್ಮಜಾ ಅವರಿಗೆ ಮುತ್ತಿಗೆ ಹಾಕಿ ಕಾಲುವೆಗಳ ಕಾಮಗಾರಿಯನ್ನು ಪೂರ್ಣಗೊಳಿಸದೇ ಅಧಿಕಾರಿಗಳ ವಿಳಂಬ ನೀತಿಯನ್ನು ಉಗ್ರವಾಗಿ ಖಂಡಿಸಿ ಪ್ರತಿಭಟಿಸಿದರು.
ಜಿಲ್ಲೆಯಲ್ಲಿಯೇ ಆಲಮಟ್ಟಿ ಜಲಾಶಯ ನಿರ್ಮಿಸಿ ಲಕ್ಷಾಂತರ ಎಕರೆ ಜಮೀನು ಹಾಗೂ 136 ಗ್ರಾಮಗಳು ಕೃಷ್ಣಾರ್ಪಣ ಮಾಡಿ ಆ ಗ್ರಾಮಗಳಲ್ಲಿ ವಾಸವಾಗಿರುವ ಕುಟುಂಬಗಳನ್ನು ಗೊತ್ತಿಲ್ಲದ ಊರಿಗೆ ಸ್ಥಳಾಂತರಿಸಿ ಇನ್ನೂ ಕೆಲವು ಪುನರ್ವಸತಿ ಕೇಂದ್ರಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಕೊಡದಿದ್ದರೂ ಕೂಡ ಯೋಜನೆಯ ಯಶಸ್ಸಿಗೆ ತ್ಯಾಗ ಮಾಡಿದ ಅಖಂಡ ವಿಜಯಪುರ ಜನತೆಯ ಹಿತ ಕಾಪಾಡಲು ವಿಫಲವಾಗಿರುವ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ ರೈತರು ಅಧಿಕಾರಿಗಳ ಬೇಜವಾಬ್ದಾರಿತನ ಎಳೆಎಳೆಯಾಗಿ ಬಿಚ್ಚಿಟ್ಟ ರೈತರು ಅಧಿಕಾರಿಗಳ ಕ್ರಮಕ್ಕೆ ಕಟುವಾಗಿ ಖಂಡಿಸಿದರು.
ಬಳಗಾನೂರಿನ ಕ.ಸ.ನಂ.171/3ರ ಬಿರಾದಾರ ಎನ್ನುವ ರೈತರ ಜಮೀನಿನಲ್ಲಿ ಹಾಗೂ ಯಾಳವಾರ ಗ್ರಾಮದ ಹತ್ತಿರ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಾಗಠಾಣ ಶಾಖಾ ಕಾಲುವೆ ಮತ್ತು ಕೋರವಾರ ಶಾಖಾ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಕೆಲ ಗಂಟೆಗಳ ಕಾಲ ಮುಖ್ಯ ಅಭಿಯಂತರರ ಕಚೇರಿಯ ಸಭಾ ಭವನದಲ್ಲಿ ಆಲಮಟ್ಟಿ ಎಡದಂಡೆ ಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರನ್ನು ಹಾಗೂ ಉಪ ಮುಖ್ಯ ಅಭಿಯಂತರರ ಕೊಠಡಿಯಲ್ಲಿ ಉಪ ಮುಖ್ಯ ಅಭಿಯಂತರರನ್ನು ಏಕ ಕಾಲಕ್ಕೆ ಮುತ್ತಿಗೆ ಹಾಕಿದ ರೈತರು ಇನ್ನುಳಿದವರು ಯಾರೂ ಒಳ ಪ್ರವೇಶಿಸದಂತೆ ಇನ್ನು ಒಳಗಿದ್ದವರು ಹೊರ ಬರದಂತೆ ಮುಖ್ಯ ದ್ವಾರದಲ್ಲಿ ಕುಳಿತು ಪ್ರತಿಭಟಿಸಿದರು.
ಇದನ್ನು ತಿಳಿದ ಆಲಮಟ್ಟಿ ಪೊಲೀಸ್ ಠಾಣೆ ಪಿಎಸೈ ಎಸ್.ವೈ. ನಾಯ್ಕೋಡಿ ಸಿಬ್ಬಂದಿಯೊಂದಿಗೆ ಕಚೇರಿಗೆ ಧಾವಿಸಿದರು. ನಂತರ ಕಾರ್ಯಪಾಲಕ ಅಭಿಯಂತರರು ರೈತರಿಗೆ ಕಾಮಗಾರಿ ವಿಳಂಬಕ್ಕೆ ಆಗಿರುವ ತೊಂದರೆಗಳ ನಿವಾರಣೆಗೆ ಈ ಹಿಂದೆ ರೈತರು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಕಾಮಗಾರಿಯಾಗದ ಸ್ಥಳಕ್ಕೆ ಹೋಗಿ ಅಲ್ಲಿ ಆಗಿದ್ದ ಬೆಳವಣಿಗೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.
ಪೊಲೀಸ್ ಅಧಿಕಾರಿಗಳು ಕೆಲ ಪೊಲೀಸರು ಹಾಗೂ ಒಂದು ಡಿಎಆರ್ ವಾಹನದೊಂದಿಗೆ ಆಗಮಿಸಿದ್ದರೂ ರೈತರು ತಮಗಾಗಿರುವ ಹಾನಿ ಬಗ್ಗೆ ವಿವರಿಸುವಾಗ ಪೊಲೀಸ್ ಅಧಿಕಾರಿಗಳ ಮತ್ತು ಪೊಲೀಸರ ಮಧ್ಯ ಮಾತಿನ ಚಕಮಕಿ ನಡೆಯಿತು.
ಕೊನೆಗೆ ಮಂಗಳವಾರ ಸಾಯಂಕಾಲ ಆಗಮಿಸಿದ ಮುಖ್ಯ ಅಭಿಯಂತರರು ರೈತರನ್ನು ತಮ್ಮ ಕೊಠಡಿಗೆ ಆಹ್ವಾನಿಸಿ ಅವರ ಸಮ್ಮುಖದಲ್ಲಿಯೇ ಬುಧವಾರದಿಂದ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಸಂಬಂಧಿಸಿದ ಗುತ್ತಿಗೆದಾರರಿಗೆ ಆದೇಶಿಸಿದರು. ಇದಕ್ಕೊಪ್ಪಿದ ರೈತರ ಮುಖಂಡರು ಕಾಮಗಾರಿ ಬುಧವಾರದಿಂದ ಆರಂಭವಾಗದಿದ್ದರೆ ಆ. 5ರಂದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ. ಆ ವೇಳೆಯಲ್ಲಿ ಆಗುವ ಎಲ್ಲ ಅನಾಹುತಗಳಿಗೆ ಸರ್ಕಾರವೇ ಕಾರಣವಾಗುತ್ತದೆ. ಆದ್ದರಿಂದ ಅದಕ್ಕೆ ಆಸ್ಪದ ನೀಡಬಾರದು ರೈತ ಮುಖಂಡರು ನಯವಾಗಿಯೇ ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಅಣ್ಣಪ್ಪ ಮೆಳ್ಳಿಗೇರಿ, ಬಸನಗೌಡ ಬಿರಾದಾರ, ಎಸ್.ಕೆ. ಪೂಜಾರಿ, ಈರಣ್ಣ ಮಠಪತಿ, ಶಿವು ಹುಗ್ಗೆನ್ನವರ, ರಾಮನಗೌಡ ಪಾಟೀಲ, ರಾಜಶೇಖರ ಕೋನಶಿರಸಗಿ, ರಾಘವೇಂದ್ರ ಗುತ್ತೇದಾರ, ಬಾಪುಗೌಡ ಬಿರಾದಾರ, ರಾಮನಗೌಡ ದೇಸಾಯಿ, ಸೋಮನಗೌಡ ಪಾಟೀಲ ಮೊದಲಾದವರಿದ್ದರು.