ಆಲಮಟ್ಟಿ: ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯ ವ್ಯಾಪ್ತಿ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕೆರೆ ಹಾಗೂ ಬಾಂದಾರಗಳನ್ನು ತುಂಬುವಂತೆ ಆಗ್ರಹಿಸಿ ಕೃಷ್ಣಾಭಾಗ್ಯಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು 6ನೇ ದಿನಕ್ಕೆ ಕಾಲಿರಿಸಿತು.
ಶನಿವಾರ ನಡೆದ ಧರಣಿಯಲ್ಲಿ ಬೆಂಬಲಿಗರೊಂದಿಗೆ ಆಗಮಿಸಿದ ಮನಗೂಳಿ ರೈತ ಮುಖಂಡ ಸೋಮನಗೌಡ ಪಾಟೀಲ ಮಾತನಾಡಿ, ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ವಿರುದ್ಧವಲ್ಲ. ಇದು ಅಖಂಡ ವಿಜಯಪುರ ಜಿಲ್ಲೆಯ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಜಿಲ್ಲೆಯ ಜನಪ್ರತಿನಿ ಧಿಗಳು ಪಕ್ಷಾತೀತವಾಗಿ ಬೆಂಬಲಿಸಿ ಸರ್ಕಾರದ ಮೇಲೆ ಒತ್ತಡ ತರಬೇಕು. ಇಲ್ಲದಿದ್ದರೆ ರೈತರು ಸಿಡಿದೆದ್ದರೆ ಸರ್ಕಾರಕ್ಕೆ ಉಳಿಗಾಲವಿಲ್ಲ. ಇದನ್ನರಿತು ಸರ್ಕಾರ ಕೂಡಲೇ ಮೀನ-ಮೇಷ ಎಣಿಸದೇ ಅಖಂಡ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿ ಆವರಣದಲ್ಲಿ ಶಾಂತಿಯುತವಾಗಿ ಕಳೆದ ಐದು ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದರೂ ಕೂಡ ಜಿಲ್ಲೆ ಶಾಸಕರು ಹಾಗೂ ಸಂಸದರು ಸ್ಪಂದಿ ಸದೇ ಇರುವದು ನಾಚಿಕೆ ಪಡುವ ಸಂಗತಿ ಎಂದರು.
ಸೋಮವಾರ ಸರ್ಕಾರದ ವಿರುದ್ಧವಾಗಿ ಕತ್ತೆಮೆರವಣಿಗೆ ಚಳುವಳಿ ನಡೆಸಲಾಗುವದು. ಅಖಂಡ ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ನೀರು ಹರಿಸುವಂತೆ ಕೇಳಿದರೂ ಕೂಡ ಕಣ್ತೆರೆಯದ ಸರ್ಕಾರ ಹಾಗೂ ಜನಪ್ರತಿನಿ ಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಜನಪ್ರತಿನಿ ಧಿಗಳು ಪ್ರತಿ ಕಾರ್ಯಕ್ರಮದಲ್ಲಿ ರೈತರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ಆದರೆ ಜನ-ಜಾನುವಾರುಗಳು ಬದುಕಲು ನೀರು ಕೇಳಿದರೆ ನಿದ್ರೆಯಲ್ಲಿದ್ದಾರೆ. ಇದೇ ಧೋರಣೆ ಮುಂದುವರಿದರೆ ಇನ್ನೂ ಹಲವಾರು ರೀತಿಯಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಅಹೋರಾತ್ರಿ ಧರಣಿಯಲ್ಲಿ ಅಣ್ಣುಗೌಡ ಗುಜಗೊಂಡ, ವಿಠ್ಠಲ ಬಿರಾದಾರ, ಮಾಚಪ್ಪ ಹೊರ್ತಿ, ರೇವಣೆಪ್ಪ ಕಡಗೋಲ, ವಿಠ್ಠಲ ಬಿರಾದಾರ, ಬೀರಪ್ಪ ಗೋಡೇಕರ, ಬಸಗೊಂಡಪ್ಪ ಹೊಲ್ದೂರ, ದುಂಡಪ್ಪ ಹೊಲ್ದೂರ, ಚಂದ್ರಶೇಖರ ಜಂಬಲದಿನ್ನಿ, ರಮೇಶ ಜಮ್ಮಲದಿನ್ನಿ, ಶಂಕರ ಬಾಗೇವಾಡಿ, ಮಹ್ಮದ ಕೊಲ್ಹಾರ, ರಾಮಣ್ಣ ವಾಲೀಕಾರ, ಚಂದ್ರಾಮ ತೆಗ್ಗಿ ಸೇರಿದಂತೆ ಹುಲಿಬೆಂಚಿ, ನಾಗರಾಳ, ಇಂಗಳೇಶ್ವರ, ಬಸವನಬಾಗೇವಾಡಿ, ಹಂಗರಗಿ, ತಳೇವಾಡ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.