ಆಲಮಟ್ಟಿ: ಮಹಾರಾಷ್ಟ್ರದ ಮಹಾಬಳೇಶ್ವರ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಕೃಷ್ಣೆ ಒಳಹರಿವು ಕಡಿಮೆಯಾಗಿದೆ. ಪ್ರವಾಹ ವೇಳೆ ರಾಜ್ಯದ ನೂರಾರು ಗ್ರಾಮಗಳು ಜಲಾವೃತವಾಗಿ ಗ್ರಾಮ ಹಾಗೂ ಜಮೀನಿನಲ್ಲಿರುವ ವಸ್ತುಗಳು ನೀರಿನಲ್ಲಿ ತೇಲಿಬಂದು ಈಗ ನದಿ ದಡದಲ್ಲಿ ಎಲ್ಲೆಂದರಲ್ಲಿ ಬಟ್ಟೆಗಳು, ಗಿಡಗಂಟಿಗಳ ಅವಶೇಷ ಹಾಗೂ ಜಲಚರಗಳ ಕಳೆಬರಗಳ ರಾಶಿಯೇ ಬಿದ್ದಿರುವದು ನೆರೆ ಭೀಕರತೆಯನ್ನು ಬಿಂಬಿಸುವಂತಾಗಿದೆ.
ಕೃಷ್ಣೆ ಪ್ರವಾಹದಿಂದ ಆಲಮಟ್ಟಿ ಜಲಾಶಯದಿಂದ ಬಿಟ್ಟ ನೀರು ಮೊಘಲ್ ಉದ್ಯಾನದಲ್ಲಿ ನುಗ್ಗಿ ಬೃಹತ್ ವಿದ್ಯುತ್ ಪರಿವರ್ತಕಗಳು, ಜನರೇಟರ್‌ಗಳಲ್ಲಿ ನೀರು ಹೋಗಿ ಹಾಳಾಗಿವೆ. ಗಿಡಗಳು, ಕಸದರಾಶಿ, ಹರಿದು ಹೋಗಿರುವ ನೀರಿನ ಪೈಪುಗಳು ಹಾಗೂ ಸೌಂದರ್ಯದ ಸಸಿಗಳು, ಉದ್ಯಾನದ ಹಸಿರಿಗಾಗಿ ನೀರೆಳೆಯಲು ಅಳವಡಿಸಿದ್ದ ಮೋಟಾರ ಪಂಪಸೆಟ್‌ಗಳು, ಪಾಲಿಹೌಸ್, ಗ್ರೀನ್ ಹೌಸ್ ಸೇರಿದಂತೆ ಸಸಿಗಳ ಬೆಳವಣಿಗೆಗಾಗಿ ಸಂಗ್ರಹಿಸಲಾಗಿದ್ದ ಗುಣಮಟ್ಟದ ಮಣ್ಣು, ಗೊಬ್ಬರ, ಸಸಿ ತಯಾರಿಸಲು ಬಳಸುವ ಪಾಲಿಥೀನ್ ಚೀಲಗಳು ಕೃಷ್ಣಾರ್ಪಣವಾಗಿವೆ.
ಸಂಗೀತ ನೃತ್ಯ ಕಾರಂಜಿ ಹಾಗೂ ಲೇಸರ್ ಷೋಗಳಲ್ಲಿ ಅಳವಡಿಸಲಾಗಿದ್ದ ಗುಣಮಟ್ಟದ ಎಲ್ಲ ಕೇಬಲಗಳು ಕೃಷ್ಣೆ ನೀರಿಗೆ ಕೆಲವು ಕೊಚ್ಚಿ ಹೋಗಿದ್ದರೆ ಇನ್ನುಳಿದ ಕೇಬಲ್ಗಳು ಎಷ್ಟು ಸುರಕ್ಷಿತವಾಗಿವೆ ಎನ್ನುವುದು ಕೂಡ ಯಾರಲ್ಲಿಯೂ ಸ್ಪಷ್ಟತೆಯಿಲ್ಲ. ನರ್ಸರಿಗೆ ಸುರಕ್ಷತೆಗಾಗಿ ನಿರ್ಮಿಸಲಾಗಿದ್ದ ಕೃಷ್ಣೆ ದಡದಲ್ಲಿ ಸುರಕ್ಷತಾ ಕಾಂಪೌಂಡ್ ಗೋಡೆ ನೀರಿಗೆ ಕೊಚ್ಚಿ ಹೋಗಿದೆ. ನೆರೆ ಇಳಿದಿದ್ದರಿಂದ ನೀರಿನ ಪ್ರವಾಹಕ್ಕೆ ಗಿಡಗಳಲ್ಲಿ ಸಿಕ್ಕಿ ಹಾಕಿಹಾಕಿಕೊಂಡಿರುವ ಸಾಮಾನುಗಳನ್ನು ತಂದು ಲೆಕ್ಕ ಹಾಕುವದರಲ್ಲಿಯೇ ಗುತ್ತಿಗೆದಾರರು ತಲ್ಲೀನರಾಗಿದ್ದಾರೆ.
ಗಬ್ಬು ವಾಸನೆ: 77 ಎಕರೆ ವಿಸ್ತಾರದಲ್ಲಿರುವ ಮೊಘಲ್, ಇಟಾಲಿಯನ್, ರೋಜ್, ಸಂಗೀತ ನೃತ್ಯ ಕಾರಂಜಿ, ಲೇಸರ್ ಶೋಗಳಿಗೆ ಭೇಟಿ ನೀಡಬೇಕಾದರೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಇಲ್ಲವಾದರೆ ಗಬ್ಬುವಾಸನೆ ತಡೆಯಲಾಗದೇ ವಾಂತಿಯಾಗುವುದು ಖಚಿತ.
ಇಲ್ಲಿ ಹಾವು, ಏಡಿ, ಮೀನುಗಳು ಎಲ್ಲೆಂದರಲ್ಲಿ ಸತ್ತು ಬಿದ್ದಿರುವದರಿಂದ ಅವುಗಳ ದುರ್ನಾತ ಸಹಿಸಲಸಾಧ್ಯ ಎನ್ನುವಷ್ಟರಮಟ್ಟಿಗೆ ದುರ್ವಾಸನೆ ಬೀರುತ್ತದೆ. ಇದರಿಂದ ಅದರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಮೂಗಿಗೆ ಬಟ್ಟೆಕಟ್ಟಿಕೊಂಡು ಕೆಲಸ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.