Advertisement

ಕಾಂಗ್ರೆಸ್ ಶಾಸಕ ದ್ವಯರ ಪ್ರತಿಷ್ಠೆ- ಆಲಮಟ್ಟಿ ಇಂಜಿನಿಯರ್ ಎತ್ತಂಗಡಿ

08:09 AM May 01, 2020 | keerthan |

ವಿಜಯಪುರ: ತಿಡಗುಂದಿ ವಿಸ್ತರಣೆ ನಾಲೆಗೆ ನೀರು ಹರಿಸುವ ಹಾಗೂ ಗಂಗಾ ಪೂಜೆಯ ವಿಷಯವಾಗಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ಕಿತ್ತಾಟಕ್ಕೆ ಅಧಿಕಾರಿ ಎತ್ತಂಗಡಿ ಆಗಿದ್ದಾರೆ.

Advertisement

ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ಲಾಲ ಬಹಾದ್ದೂರ ಶಾಸ್ತ್ರಿ ಸಾಗರ ಆಣೆಕಟ್ಟು ವಲಯದ ಮುಖ್ಯ ಇಂಜಿನಿಯರ್ ಆರ್.ಪಿ.ಕುಲಕರ್ಣಿ ಅವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಹಿಂದಿರುಗಿಸಲಾಗಿದೆ.

ಜಲ ಸಂಪನ್ಮೂಲ ಇಲಾಖೆ ಸೇವಾ ವಿಭಾಗದ ಉಪ ಕಾರ್ಯದರ್ಶಿ ಎಸ್.ಆರ್.ಬಸವರಾಜಯ್ಯ ಇವರು ಏ. 29 ರಂದು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಅರ್.ಪಿ.ಕುಲಕರ್ಣಿ ಅವರ ಸೇವೆಯನ್ನು ಡಿ.ಪಿ.ಎ.ಆರ್. ಇಲಾಖೆಗೆ ಹಿಂದಿರುಗಿಸಿ ಅಧಿಸೂಚನೆ ಹೊರಡಿಸಿದ್ದಾರೆ.

ಮುಳವಾಡ ಏತ ನೀರಾವರಿ ಯೋಜನೆಯಿಂದ ಕೆರೆಗೆ ನೀರು ತುಂಬಿಸಲು ತಿಡಗುಂದಿ ವಿಸ್ತರಣೆ ನಾಲೆಗೆ ನೀರು ಹರಿಸಲಾಗಿದೆ. ಇದೇ ಮೊದಲ ಬಾರಿಗೆ ತಿಡಗುಂದಿ ನಾಲೆಯ ವಿಜಯಪುರ ಬಳಿ ಜಲ ಮೇಲ್ಸೇತುವೆ ಮೂಲಕ ನೀರು ಹರಿದು ಬಂದಿದೆ. ಹೀಗಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ, ನಾಗಠಾಣಾ ಶಾಸಕ ದೇವಾನಂದ ಚವ್ಹಾಣ ಜಂಟಿಯಾಗಿ ಪೂಜೆ ಸಲ್ಲಿಸಿ, ಲೋಕಾರ್ಪಣೆ ಮಾಡಿದ್ದರು. ಸದರಿ ಕಾರ್ಯಕ್ರಮದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳೂ ಪಾಲ್ಗೊಂಡಿದ್ದರು.

ಈ ಭಾಗದ ಶಾಸಕರಾದ ತಮ್ಮ ಗಮನಕ್ಕೆ ತರದೇ ನಾಲೆಗೆ ನೀರು ಹರಿಸುವ, ಜಲ ಮೇಲ್ಸೇತುವೆ ಉದ್ಘಾಟನೆ ತಮ್ಮನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಈ ಲೋಪಕ್ಕೆ ಕಾರಣವಾದ ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂಡಿ ಕ್ಷೇತ್ರದ ಶಾಸಕ ಯಶವಂತ್ರಾಯಗೌಡ ಪಾಟೀಲ, ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದಿದ್ದರು.

Advertisement

ಅಲ್ಲದೇ ಇದೇ ವಿಷಯವಾಗಿ ಜಿಲ್ಲೆಯ ಕಾಂಗ್ರೆಸ್ ಶಾಸಕ ದ್ವಯರಾದ ಯಶವಂತ್ರಾಯಗೌಡ ಹಾಗೂ ಎಂ.ಬಿ.ಪಾಟೀಲ ಪರಸ್ಪರ ಅರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದರು. ಇದರ ಬೆನ್ನಲ್ಲೇ ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಬುಧವಾರ (ಏ.29) ದೊಳಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಸಚಿವ ಜಾರಕಿಹೊಳಿ ಹೇಳಿದಂತೆ ಬುಧವಾರವೇ ಕೆಬಿಜೆಎನ್ಎಲ್ ಅಧಿಕಾರಿ ಆರ್.ಪಿ.ಕುಲಕರ್ಣಿ ಅವರ ಸೇವೆಯನ್ನು ಡಿಪಿಎಆರ್ ಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರ ಪ್ರತಿಷ್ಠೆಗೆ ಅಧಿಕಾರಿ ಎತ್ತಂಗಡಿ ಅಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next