Advertisement

ಆಲಮಟ್ಟಿ ಕಾಲುವೆ ನವೀಕರಣ ಕಳಪ

06:03 PM May 21, 2018 | |

ಆಲಮಟ್ಟಿ: ಜೂನ್‌-ಜುಲೈ ತಿಂಗಳಲ್ಲಿ ರೈತರ ಜಮೀನಿಗೆ ನೀರುಣಿಸಲು ಅನುವಾಗುವಂತೆ ಆಲಮಟ್ಟಿ ಎಡದಂಡೆ ಕಾಲುವೆ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು ಕಾಮಗಾರಿ ಕಳಪೆಯಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

Advertisement

ಬರದನಾಡಿನ ಹಣೆಪಟ್ಟಿ ಅಳಿಸಲು 1994ರಲ್ಲಿ ಆಗಿನ ಸರ್ಕಾರ ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕಿನ ಜಮೀನುಗಳಿಗೆ ನೀರೊದಗಿಸಲು ಆಲಮಟ್ಟಿ ಎಡದಂಡೆ ಕಾಲುವೆಯನ್ನು ನಿರ್ಮಿಸಿತ್ತು. 

ಇತ್ತೀಚೆಗೆ ಸಿಮೆಂಟ್‌ ಕಾಂಕ್ರಿಟ್‌ ಕಿತ್ತು ಹಾಳಾಗಿ ಅಲ್ಲಲ್ಲಿ ನೀರು ಪೋಲಾಗುವುದನ್ನು ತಡೆಗಟ್ಟಲು 0 ಕಿ.ಮೀ.ಯಿಂದ 13 ಕಿ.ಮೀ.ದಲ್ಲಿರುವ ಚಿಮ್ಮಲಗಿ ಏತ ನೀರಾವರಿ ಮುಖ್ಯ ಸ್ಥಾವರದವರೆಗೆ ಪೂರ್ಣ ನವೀಕರಣ ಹಾಗೂ 14ರಿಂದ 55.240 ಕಿ.ಮೀ. ವರೆಗಿನ ಆಯ್ದ ಭಾಗಗಳಲ್ಲಿ ಸಿಮೆಂಟ್‌ ಕಾಂಕ್ರಿಟ್‌ ಮಾಡುವುದು, ವ್ಯಾಪ್ತಿಯ 29 ವಿತರಣಾ ಕಾಲುವೆಗಳ ಆಯ್ದ ಭಾಗಗಳಲ್ಲಿ ನವೀಕರಣ ಮಾಡುವುದು ಅದರಡಿಯಲ್ಲಿ ಬರುವ ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ನವೀಕರಣ ಮಾಡಲು ಸರ್ಕಾರ 2016-17ನೇ ಸಾಲಿನಲ್ಲಿ 112.46 ಕೋಟಿ ರೂ. ಮೀಸಲಿರಿಸಿದ್ದರಿಂದ ಒಟ್ಟು ನಾಲ್ಕು ಪ್ಯಾಕೇಜುಗಳನ್ನಾಗಿ ಮಾಡಿ ಟೆಂಡರ್‌ ಕರೆಯಲಾಗಿತ್ತು.

ಟೆಂಡರ್‌ಗೆ ನೀತಿ ಸಂಹಿತೆ ಬಿಸಿ: ಒಟ್ಟು 112.46ಕೋಟಿ ರೂ.ಗಳಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ನಾಲ್ಕು ಪ್ಯಾಕೇಜುಗಳನ್ನು ಮಾಡಿ ಟೆಂಡರ್‌ ಕರೆಯಲಾಗಿದೆ. ಅದರಲ್ಲಿ 68.24 ಕಿ.ಮೀ. ಮುಖ್ಯ ಕಾಲುವೆ ಕಾಮಗಾರಿಯ 66.13 ಕೋಟಿ ರೂ. ಮೊತ್ತದ ಟೆಂಡರ್‌ನ್ನು ಬೇಗ ಕರೆದಿರುವುದರಿಂದ ಟೆಂಡರ್‌ ಪಡೆದ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದಾರೆ.

 ಇನ್ನುಳಿದ ವಿತರಣಾ ಕಾಲುವೆಗಳ ತಲಾ 15 ಕೋಟಿಯ 3 ಟೆಂಡರ್‌ಗಳನ್ನು ಕರೆಯಲಾಗಿದ್ದರೂ ನೀತಿ ಸಂಹಿತೆಯಿಂದ ತಟಸ್ಥಗೊಳಿಸಿದ್ದರು. ಈಗ ನೀತಿ ಸಂಹಿತೆ ಮುಗಿದಿದ್ದು ತಾಂತ್ರಿಕ ಟೆಂಡರ್‌ಗಳನ್ನು ಪರಿಶೀಲಿಸಲಾಗಿದ್ದು ಇನ್ನೂ ಹಣಕಾಸು ಟೆಂಡರ್‌ ತೆರೆಯಬೇಕಾಗಿದೆ.
 
ಬರಗಾಲದ ಬವಣೆಯಿಂದ ಬಳಲುತ್ತಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳ ನೀರಿನ ಬವಣೆ ತಪ್ಪಿಸಲು ಸರ್ಕಾರ 1964 ಮೇ 22ರಂದು ಆಗಿನ ಪ್ರಧಾನಿ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಭೂಮಿ ಪೂಜೆ ನೆರವೇರಿಸಿದ್ದರೂ ಜಲಾಶಯ ಲೋಕಾರ್ಪಣೆಗೊಳ್ಳಲು ಸುಮಾರು 42 ವರ್ಷವಾಯಿತು. ಜಲಾಶಯ ವ್ಯಾಪ್ತಿಯ ಆಲಮಟ್ಟಿ ಎಡದಂಡೆ ಕಾಲುವೆ ಮೊದಲ ಹಂತದ 0-68.24 ಕಿ.ಮೀ.ವರೆಗೆ ನಿರ್ಮಿಸಲು 1994ರಲ್ಲಿ ಕಾಮಗಾರಿ ಆರಂಭಿಸಿ 2002ರಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಅದೇ ವರ್ಷ ಕಾಲುವೆಗೆ ನೀರು ಹರಿಸಲು ಆರಂಭಿಸಲಾಯಿತು. ಇದರಿಂದ ಬಸವನಬಾಗೇವಾಡಿ, ಮುದ್ದೇಬಿಹಾಳ ಹಾಗೂ 2ನೇ ಹಂತದಲ್ಲಿ 68.24 ಕಿ.ಮೀ.ಯಿಂದ 86.215 ಕಿ.ಮೀ.ದಲ್ಲಿ ಸುರಪುರ ತಾಲೂಕಿನ ಸಾವಿರಾರು ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ.

Advertisement

ಆಲಮಟ್ಟಿ ಜಲಾಶಯ ವ್ಯಾಪ್ತಿಯ 86.215 ಕಿ.ಮೀ.ಉದ್ದದ ಆಲಮಟ್ಟಿ ಎಡದಂಡೆ ಕಾಲುವೆಯು 43 ವಿತರಣಾ ಕಾಲುವೆಗಳನ್ನು ಹೊಂದಿ ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕುಗಳ 29 ಸಾವಿರ ಹೆಕ್ಟೇರ್‌ ಮತ್ತು
ಆಲಮಟ್ಟಿಯಿಂದ ಕೊಪ್ಪ (ಹುಲ್ಲೂರ) ದವರೆಗೆ 13 ಕಿ.ಮೀ.ಉದ್ದದಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮುಖ್ಯಸ್ಥಾವರ ನಿರ್ಮಿಸಲಾಗಿದೆ. ಇದರಲ್ಲಿ 54 ಕಿ.ಮೀ. ಉದ್ದದ ಚಿಮ್ಮಲಗಿ ಏತ ನೀರಾವರಿಯ ಪಶ್ಚಿಮ ಕಾಲವೆ 8 ವಿತರಣಾ ಕಾಲುವೆಯಿಂದ ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ 5,200 ಹೆಕ್ಟೇರ್‌ ಭೂಮಿ ನೀರಾವರಿಗೊಳಪಡುತ್ತದೆ.

ಸರಾಗವಾಗಿ ಹರಿಯುವುದೇ ನೀರು?: 2000ನೇ ಸಾಲಿನಲ್ಲಿ ಕಾಲುವೆ ಕಾಮಗಾರಿ ಮುಗಿದು ರೈತರ ಜಮೀನಿಗೆ ನೀರುಣಿಸುತ್ತಿದ್ದರೂ ಕೂಡ ತಾಂತ್ರಿಕ ಅಧಿಕಾರಿಗಳ ಅಂದರೆ ಮುಖ್ಯ ಅಭಿಯಂತರರಿಂದ ಶಾಖಾಧಿಕಾರಿವರೆಗಿನ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಎಡದಂಡೆ ಕಾಲುವೆಯಲ್ಲಿ ನಿಡಗುಂದಿ, ವಡವಡಗಿ, ಹುಲ್ಲೂರ, ಮಾದಿನಾಳ ಸೇರಿದಂತೆ ಹಲವಾರು ಕಡೆಗಳಲ್ಲಿ ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆಗಳ ಸಮಪಾತಳಿಯನ್ನು
ಸರಿಯಾಗಿ ನೋಡದೇ ಇರುವುದರ ಪರಿಣಾಮ ಕಾಲುವೆಯಲ್ಲಿನ ನೀರು ಸರಾಗವಾಗಿ ಸಾಗದೇ ಎಲ್ಲೆಂದರಲ್ಲಿ ನೀರು ಸೋರಿಕೆಯಾಗಿ ಸವುಳು-ಜವುಳಿಗೆ ಕಾರಣವಾಗಿದೆ. 

ಇನ್ನು ಕಾಲುವೆಯಂಚಿನ ಕೊನೆ ರೈತರ ಜಮೀನಿಗೆ ಇನ್ನೂವರೆಗೆ ಹರಿದಿಲ್ಲ ಎಂದು ರೈತರು ಪ್ರತಿ ಬಾರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮನವಿ ಕೊಡುತ್ತಾರೆ. ಅಧಿಕಾರಿಗಳು ಆ ಕ್ಷಣಕ್ಕೆ ಮನವಿ ಸ್ವೀಕರಿಸಿ ಮತ್ತೆ ಮರೆಯುವುದು ಸಂಪ್ರದಾಯವಾಗಿದೆ. 

ಕಾಲುವೆ ಸಮೀಪದ ಜಮೀನಿಗೆ ನೀರಿಲ್ಲ: ವಿತರಣಾ ಕಾಲುವೆಗಳ ಸಮೀಪದಲ್ಲಿಯೇ ಇರುವ ರೈತರ ಜಮೀನುಗಳಿಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಹಾಗೂ ಕೃಷ್ಣಾ ಕಾಡಾ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಲುವೆಯ ಪಕ್ಕದಲ್ಲಿಯೇ ಇದ್ದರೂ ಅವುಗಳಿಗೆ ಇನ್ನೂವರೆಗೆ ನೀರು ಹರಿಸಿಲ್ಲ ಮತ್ತು ಈಗ ನವೀಕರಣಗೊಳ್ಳುತ್ತಿರುವ ಕಾಮಗಾರಿಯಲ್ಲಿ ಗುಣಮಟ್ಟ ಎನ್ನುವುದೇ ಇಲ್ಲ. ಹೀಗಾದರೆ ಕಾಲುವೆ ಕೊನೆಯಂಚಿನ ಜಮೀನುಗಳಿಗೆ ನೀರು ಹರಿಯುವದು ಅಸಾಧ್ಯ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

„ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next