ಆಲಮಟ್ಟಿ: ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಆಲಮಟ್ಟಿ ಬಲದಂಡೆ ಕಾಲುವೆಗೆ ಕುಡಿಯುವ ನೀರಿಗಾಗಿ ನೀರು ಹರಿಸುವಂತೆ ಒತ್ತಾಯಿಸಿ ನಾಗರಿಕರು ಕೃಷ್ಣಾ ಭಾಗ್ಯಜಲ ನಿಗಮದ ಮುಖ್ಯ ಅಭಿಯಂತರಗೆ ಮನವಿ ಸಲ್ಲಿಸಿದರು.
ಬುಧವಾರ ಆಲಮಟ್ಟಿ ಬಲದಂಡೆ ವ್ಯಾಪ್ತಿಯ ನಾಯನೇಗಲಿ, ಮಂಕಣಿ, ಸುತಗುಂಡಾರ, ಡೊಮನಾಳ, ಬೊಮ್ಮಣಗಿ, ಮ್ಯಾಗೇರಿ, ದೇವಲಾಪುರ, ಕಟಗೂರ, ತುರಡಗಿ, ಹಂಡರಗಲ್ಲ, ಕೂಡಲಸಂಗಮ ನಾಗರಿಕರು ಮನವಿ ಸಲ್ಲಿಸಿ ಮಾತನಾಡಿ, ಈಗ ಬೇಸಿಗೆಯಾಗಿದ್ದರಿಂದ ಬಿರು ಬಿಸಿಲಿನಿಂದ ಕೊಳವೆ ಬಾವಿ, ತೆರೆದ ಬಾವಿಗಳೂ ಒಣಗಿರುವುದಲ್ಲದೇ ಎಲ್ಲ ಹಳ್ಳಗಳೂ ಒಣಗಿವೆ. ಇದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದರು.
ಕಾಲುವೆಗೆ ನೀರು ಹರಿಸುವುದರಿಂದ ಪಕ್ಕದ ಹಳ್ಳಗಳು, ಕೆರೆಗಳು ಹಾಗೂ ಬಾವಿಗಳಿಗೆ ನೀರು ಬರುವುದರಿಂದ ಅವುಗಳನ್ನು ಕುಡಿದು ಬದುಕುತ್ತವೆ. ಆದ್ದರಿಂದ ಇಂದಿನಿಂದಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ನಂತರ ಕೃಷ್ಣಾ ಭಾಗ್ಯಜಲ ನಿಗಮದ ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿಯವರು ಕೂಡಲೇ ಸಹಾಯಕ ಅಭಿಯಂತರರನ್ನು ಸಂಪರ್ಕಿಸಿ ಕುಡಿಯುವ ನೀರಿಗಾಗಿ ಕಾಲುವೆಗೆ ಒಂದು ಪಂಪಿನ ಮೂಲಕ ನೀರು ಹರಿಸಬೇಕು ಎಂದು ಆದೇಶಿಸಿದರು .ಆಮೇಲೆ ರೈತರಿಗೆ ಈಗ ನೀರು ಬಿಡುತ್ತಿರುವುದು ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಮಾತ್ರ ಯಾವುದೇ ಕಾರಣಕ್ಕೂ ಕಬ್ಬಿನ ಬೆಳೆಗೆ ನೀರುಣಿಸಬಾರದು ಎಂದು ಎಚ್ಚರಿಕೆ ನೀಡಿದರು.
ಆವರ ಮಾತಿಗೆ ಮಾರುತ್ತರ ನೀಡಿದ ರೈತರು ನಾವು ನಮ್ಮ ಬೆಳೆಗಳಿಗೆ ನೀರುಣಿಸಲು ನಮ್ಮ ಜಮೀನಿನಲ್ಲಿ ಯಾವುದೇ ಬೆಳೆಗಳಿಲ್ಲ. ಇದ್ದ ಬೆಳೆಗಳು ನೀರಿಲ್ಲದೇ ಒಣಗಿ ಹೋಗಿವೆ. ಈಗ ನಾವು ಬದುಕಲು ನೀರು ಕೊಡಿ ಬೆಳೆಗಳಿಗೆ ನೀರುಣಿಸಲು ಬೆಳೆಗಳೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ಆಲಮಟ್ಟಿ ಬಲದಂಡೆ ಕಾಲುವೆ ವ್ಯಾಪ್ತಿಯ ಗ್ರಾಮಗಳ ನರೇಶ ಮೇಖಾ, ಶಿವಾನಂದ ಅಂಬಿಗೇರ, ಮಂಜು ಬೂದಿಹಾಳ, ವೆಂಕಟೇಶ ಕುಂಚಗನೂರ, ಬಾಳಪ್ಪ ಮಳಗಾವಿ, ರಮೇಶ ಅಂಬಿಗೇರ, ಸಂಗಪ್ಪ ಇದ್ದಲಗಿ, ಶಿವು ಲೋಕಾಪುರ, ಹನುಮಂತ ಬೇನಾಳ, ಮಹಾಂತೇಶ ಕಾಳಗಿ, ಕನಕಪ್ಪ ತಳವಾರ, ಸಂಗಪ್ಪ ಚಿನ್ನೂರ, ರಾಮನಗೌಡ ದೊಡಮನಿ, ಹುಲ್ಲಪ್ಪ ಮಳಗಾವಿ ಮೊದಲಾದವರಿದ್ದರು.