Advertisement

ಅಂತ್ಯಕ್ರಿಯೆಗೆ ತಪ್ಪದ ಪರದಾಟ

12:09 PM Jan 05, 2020 | Naveen |

ಆಲಮಟ್ಟಿ: ನಾಗರಿಕ ಸಮಾಜದಲ್ಲಿ ವಾಸಿಸಲು ಬೆಚ್ಚನೆಯ ಮನೆ, ಓಡಾಡಲು ಉತ್ತಮ ರಸ್ತೆ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯ ಗಳಿದ್ದರೂ ಗ್ರಾಮಗಳಲ್ಲಿ ಯಾರಾದರೂ ಮೃತರಾದರೆ ಹೂಳಲು ಕೂಡ ಸ್ಥಳವಿಲ್ಲದಿದ್ದರೆ ಆ ಗ್ರಾಮದ ಸ್ಥಿತಿಯನ್ನು ಎಣಿಸಿಕೊಳ್ಳಲೂ ಸಾಧ್ಯವಿಲ್ಲ.

Advertisement

ಹೌದು ಇದು ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿ, ಪುನರ್ವಸತಿ ಕೇಂದ್ರ, ರೈಲ್ವೆ ಮಾರ್ಗ ಸೇರಿದಂತೆ ವಿವಿಧ ಯೋಜನೆಗಳಿಗೆ ಜಮೀನನ್ನು ಧಾರೆಯೆರೆದಿರುವ ಗ್ರಾಮ ಅರಳದಿನ್ನಿ ಪರಿಸ್ಥಿತಿ. ಇಲ್ಲಿ ಯಾರಾದರೂ ಮೃತರಾದರೆ ಅಂತ್ಯಸಂಸ್ಕಾರ ನೆರವೇರಿಸಲು ಪಡುವ ತೊಂದರೆ ಅಷ್ಟಿಷ್ಟಲ್ಲ. ಕುಗ್ರಾಮವಾಗಿರುವ ಅರಳದಿನ್ನಿ ಆಲಮಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿದ್ದು ಜಿಲ್ಲೆಯ ಕೊನೆ ಗ್ರಾಮವೂ ಆಗಿದೆ. ಜನಪ್ರತಿನಿಧಿಗಳು ಆಲಮಟ್ಟಿ ಗ್ರಾಪಂ ವ್ಯಾಪ್ತಿ ಗ್ರಾಮಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿರುವುದಕ್ಕೆ ಇದೊಂದು ತಾಜಾ ಉದಾಹರಣೆ.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಅಭ್ಯರ್ಥಿಗಳು ಆಲಮಟ್ಟಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ ದೊಡ್ಡ ಪಟ್ಟಿಯನ್ನೇ ತಯಾರಿಸುತ್ತಾರೆ. ಚುನಾವಣೆ ನಂತರ ಭರವಸೆಯಲ್ಲಿಯೇ ಕಾಲಹರಣ ಮಾಡುವುದು ವಾಡಿಕೆಯಾಗಿದೆ.

ಅರಳದಿನ್ನಿಯಲ್ಲಿ ಯಾವುದೇ ಸಮಾಜದ ವ್ಯಕ್ತಿಗಳು ಮೃತರಾದರೆ ಅವರ ಜಮೀನಿನಲ್ಲಿ ಅಥವಾ ಅವರ ಸಂಬಂಧಿಗಳ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸುತ್ತಾ ಬಂರಲಾಗುತ್ತಿದೆ. ಇನ್ನು ಗ್ರಾಮದಲ್ಲಿ ಸಂಬಂಧಿಗಳಿಲ್ಲದ ವ್ಯಕ್ತಿಗಳು ಮಳೆಗಾಲದಲ್ಲಿ ಮೃತರಾದರೆ ಅವರ ಗೋಳು ಯಾವ ಶತ್ರುಗಳಿಗೂ ಬೇಡಪ್ಪ ಎನ್ನುವಂತಾಗುತ್ತದೆ. ಏಕೆಂದರೆ ಸಂಬಂಧಿಗಳಿಲ್ಲದವರು ಸಾಮಾನ್ಯವಾಗಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಮುಂಭಾಗ ಕೃಷ್ಣೆ ತಟದಲ್ಲಿ ಶವಸಂಸ್ಕಾರ ಮಾಡುತ್ತಾರೆ.

ಮಳೆಗಾಲದಲ್ಲಿ ಕೃಷ್ಣೆ ತುಂಬಿ ಹರಿದು ಗ್ರಾಮದ ರೈತರ ಜಮೀನುಗಳು ಜಲಾವೃತವಾಗುತ್ತವೆ. ಇಂಥ ಸ್ಥಿತಿಯಲ್ಲಿ ಮರಣ ಹೊಂದಿದವರಿಗಿಂತಲೂ ಅವರ ಕುಟುಂಬ ಸದಸ್ಯರ ಕರುಣಾಜನಕ ಸ್ಥಿತಿಯನ್ನು ಊಹಿಸುವುದು ಕಷ್ಟ.

Advertisement

ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಅವರು ಆಲಮಟ್ಟಿ ಭಾಗದಲ್ಲಿ ಭೇಟಿ ನೀಡಿದಾಗಲೊಮ್ಮೆ ಅರಳದಿನ್ನಿಗೆ ಸ್ಮಶಾನ ಜಾಗೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಸತತವಾಗಿ ಗ್ರಾಮಸ್ಥರು ಮನವಿ ಮಾಡುತ್ತ ಬಂದಿದ್ದಾರೆ. ಆದರೆ ಶಾಸಕರು ಕಳೆದ 10ವರ್ಷದಿಂದ ಕೇವಲ ಭರವಸೆಯಲ್ಲಿಯೇ ದಿನ ದೂಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮಹಾರಾಷ್ಟ್ರ ಹಾಗೂ ರಾಜ್ಯದ ಕೃಷ್ಣೆ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದಾಗ ನಮ್ಮೂರಿನ ಜಮೀನುಗಳು ಜಲಾವೃತವಾಗಿ ಗ್ರಾಮದ ಸಮೀಪದಲ್ಲಿಯೇ ನೀರು ನಿಲ್ಲುತ್ತದೆ. ಗ್ರಾಮದಲ್ಲಿ ತಿಪ್ಪೆ ಹಾಕಲು ಸ್ಥಳವಿಲ್ಲ, ಯಾರಾದರೂ ಮೃತರಾದರೆ ಸ್ಮಶಾನವಿಲ್ಲ, ದನ ಮೇಯಿಸಲು ಗೋಮಾಳವಿಲ್ಲ. ಈ ಕುರಿತು ಜನಪ್ರತಿನಿಧಿಗಳಿಗೆ ಹಾಗೂ ಕೃ.ಮೇ. ಯೋಜನೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬಸವರಾಜ ಹೆರಕಲ್ಲ,
ಅರಳದಿನ್ನಿ ಗ್ರಾಮಸ್ಥ

ಅರಳದಿನ್ನಿ ಗ್ರಾಮಕ್ಕೆ ಸ್ಮಶಾನ ಜಾಗೆ, ಗೋಮಾಳದ ಕುರಿತು ಹಿಂದಿನ ಮಾಜಿ ಶಾಸಕ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಹಾಗೂ ಈಗಿರುವ ಶಾಸಕ ಮಾಜಿ ಸಚಿವ ಶಿವಾನಂದ ಪಾಟೀಲ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹನಮಂತ ಕೊಳ್ಳಾರ
ಗ್ರಾಪಂ ಮಾಜಿ ಸದಸ್ಯ, ಆಲಮಟ್ಟಿ

ಅರಳದಿನ್ನಿ ಗ್ರಾಮಕ್ಕೆ ಸ್ಮಶಾನ ಜಾಗೆ ನೀಡಲು ಈಗಾಗಲೇ ನಾನು ಹಾಗೂ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದ್ದೇವೆ. ಈ ಕುರಿತು ಶಾಸಕರು ಸ್ಥಳ ನಿಗದಿಗೊಳಿಸಲು ತಹಶೀಲ್ದಾರ್‌ ಅವರಿಗೆ ಸೂಚಿಸಿದ್ದಾರೆ.
ಮಲ್ಲು ರಾಠೊಡ
ತಾಪಂ ಸದಸ್ಯರು, ಆಲಮಟ್ಟಿ

„ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next