ಆಲಮಟ್ಟಿ: ಕಳೆದ ಕೆಲದಿನಗಳಿಂದ ಮಹಾರಾಷ್ಟ್ರದಲ್ಲಿ ಹಾಗೂ ರಾಜ್ಯದ ಕೃಷ್ಣಾ ಜಲಾನಯ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಬರುವ ನೀರಿನಲ್ಲಿ ವ್ಯಾಪಕ ಏರಿಕೆಯಾಗಿದೆ. ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯಕ್ಕೆ ಕಳೆದ ಕೆಲ ದಿನಗಳಿಂದ ಒಳ ಹರಿವಿತ್ತಾದರೂ ರವಿವಾರ ಸಂಜೆ ದಿಢೀರನೇ ಏರಿಕೆಯಾಗಿದ್ದರಿಂದ ಮುಂಜಾಗೃತಾ ಕ್ರಮವಾಗಿ ಜಲಾಶಯದ ಬಲ ಭಾಗದಲ್ಲಿರುವ ಜಲ ವಿದ್ಯುದಾಗಾರ ಹಾಗೂ 10 ಗೇಟುಗಳ ಮೂಲಕ ನೀರು ಬಿಡಲು ಆರಂಭಿಸಿ ಸೋಮವಾರ ಬೆಳಗ್ಗೆಯಿಂದ ಜಲಾಶಯಕ್ಕೆ 90 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಒಳ ಹರಿವಿನಲ್ಲಿ ಏರಿಕೆಯಾಗಿದ್ದರಿಂದ 45 ಸಾವಿರ ಕ್ಯೂಸೆಕ್ ನೀರನ್ನು ಶಾಸ್ತ್ರೀ ಜಲಾಶಯದ ಬಲ ಭಾಗದಲ್ಲಿರುವ
ಕರ್ನಾಟಕ ವಿದ್ಯುತ್ ಉತ್ಪಾದನಾ ಘಟಕ 6 ಘಟಕದಿಂದ 290 ಮೆ.ವ್ಯಾ. ವಿದ್ಯುತ್ ಉತ್ಪಾದಿಸಿ ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.
ಇನ್ನುಳಿದಂತೆ 45 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದ ಒಟ್ಟು 26 ಗೇಟುಗಳಲ್ಲಿ ಅ.ಸಂ-4, 8, 9, 10, 12, 13, 14, 15, 16, 17, 18, 19, 20, 21, 22ನೇ ಗೇಟುಗಳನ್ನು 0.6 ಮೀ.ನಷ್ಟು ಮೇಲಕ್ಕೆತ್ತಿ ಒಟ್ಟು 15 ಗೇಟುಗಳಿಂದ 45 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ. ಇನ್ನುಳಿದ ಅ.ಸಂ- 1, 2, 3, 5, 6, 7, 11, 23, 24, 25, 26 ಸಂಖ್ಯೆಯ ಗೇಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಆಲಮಟ್ಟಿ ಜಲಾಶಯದ 15 ಗೇಟುಗಳಿಂದ ನದಿ ಪಾತ್ರಕ್ಕೆ ಬಿಡುತ್ತಿರುವ ನೀರು ಹಾಲಿನ ನೊರೆಯಂತೆ ಕಂಗೊಳಿಸುತ್ತಿದ್ದು ಪ್ರವಾಸಿಗರು ಕಣ್ತುಂಬಿಕೊಂಡು ಸಂತಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.