Advertisement

ಆಲಮಟ್ಟಿ: ಶಾಸ್ತ್ರೀ ಜಲಾಶಯದಿಂದ 35 ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ

03:30 PM Jul 20, 2017 | Girisha |

ಆಲಮಟ್ಟಿ: ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯಕ್ಕೆ ಇತ್ತೀಚೆಗೆ ಒಳಹರಿವು ಹೆಚ್ಚುತ್ತಿರುವುದರಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ನೀರಿನ ಅಗತ್ಯ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದಿಂದ ಬುಧವಾರದಿಂದ 35,000 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. 

Advertisement

ಕೆಬಿಜೆನ್‌ಎಲ್‌ ಅಧಿಕಾರಿಗಳು ಸೋಮವಾರ ನಿರ್ಧರಿಸಿದಂತೆ  ಮಧ್ಯಾಹ್ನ 12ರಿಂದ ನೀರು ಬಿಡಲು ಆರಂಭಗೊಂಡಿದೆ. ಮುಂದಿನ ಎರಡು ದಿನ ನೀರನ್ನು ಬಿಡಲಾಗುತ್ತಿದೆ ಎಂದು ಕೆಬಿಜೆಎನೆಲ್‌ ಮೂಲಗಳಿಂದ ತಿಳಿದು ಬಂದಿದ್ದು, ಸದ್ಯ ಆಲಮಟ್ಟಿ ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್‌ ಉತ್ಪಾದನಾ ಕೇಂದ್ರದಿಂದ ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಡಲಾಗುತ್ತಿದೆ.  ಇದರಿಂದಾಗಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ವಿದ್ಯುತ್‌ ಉತ್ಪಾದನಾ ಘಟಕ ಮತ್ತೇ ಕಾರ್ಯಾರಂಭ ಮಾಡಿದೆ. ಸದ್ಯ ನಾಲ್ಕು ಯುನಿಟ್‌ ಗಳಿಂದ 170 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಕಳೆದ ವರ್ಷ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ಜನ-ಜಾನುವಾರುಗಳಿಗೆ ನೀರಿಗಾಗಿ ಪರದಾಡಿದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಜಲಾಶಯ ಇನ್ನೂ ಅರ್ಧವೂ ಭರ್ತಿಯಾಗಿಲ್ಲ, ಈಗಲೇ ನೀರು ಬಿಡಲು ಆರಂಭಿಸಿರುವುದು
ಆಲಮಟ್ಟಿ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ. ಕಾಲುವೆಗೆ ನೀರು ಹರಿಸಬೇಕಾದರೇ ಜಲಾಶಯದ ಮಟ್ಟ ಇನ್ನೂ ಏರಿಕೆಯಾಗಿಲ್ಲ. ಸದ್ಯ 519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 513.90 ಮೀ. ವರೆಗೆ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 38,452 ಕ್ಯೂಸೆಕ್‌ ನೀರು ಒಳಹರಿವು ಇದೆ. ಜಲಾಶಯದಲ್ಲಿ 54 ಟಿಎಂಸಿ ಅಡಿ ನೀರಿದೆ. ಮುಂದಿನ ಕೆಲ ದಿನಗಳ ಕಾಲ ಒಳಹರಿವು ಹೆಚ್ಚಳವೇ ಇರಲಿದೆ. ಮಹಾರಾಷ್ಟ್ರದ ಕೃಷ್ಣಾ ಕೊಳ್ಳದಲ್ಲಿ ಮಳೆ ಪ್ರಮಾಣ ಒಳಹರಿವು ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಮರೋಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಜಾಕ್‌ವೆಲ್‌ಗ‌ಳ ಪರೀಕ್ಷೆಗಾಗಿ ನೀರಿನ ಅಗತ್ಯವಿದ್ದು ಆಲಮಟ್ಟಿ ಜಲಾಶಯದಿಂದ ನೀರು ಹರಿಸಿರುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next