Advertisement

ಕೃಷ್ಣೆಗೆ ಬಾಗಿನ ಅರ್ಪಣೆ ಯಾವಾಗ?

01:04 PM Aug 28, 2019 | Naveen |

ಆಲಮಟ್ಟಿ: ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಕೃಷ್ಣೆಗೆ ಅಡ್ಡಲಾಗಿರುವ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ತುಂಬಿ ನಿಂತಿದೆ. ಆದರೆ ತುಂಬಿದ ಕೃಷ್ಣೆಯ ಜಲನಿಧಿಗೆ ಮುಖ್ಯಮಂತ್ರಿಯವರು ಬಾಗಿನ ಅರ್ಪಣೆ ಯಾವಾಗ ಅರ್ಪಿಸುತ್ತಾರೆ ಎಂದು ಕೃಷ್ಣೆಯ ಒಡಲ ಮಕ್ಕಳು ಕಾತರದಿಂದ ಕಾಯುತ್ತಿದ್ದಾರೆ.

Advertisement

ದೇಶದ ಬೃಹತ್‌ ನೀರಾವರಿ ಯೋಜನೆಗಳಲ್ಲೊಂದಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರವಾಗಿರುವ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಮಹಾಪೂರ ಬಂದು ತಿಂಗಳಗಳವರೆಗೆ ಲಕ್ಷಾಂತರ ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿತ್ತು. ಇನ್ನು ಸರ್ಕಾರ ಪ್ರತಿ ಬಾರಿ ಕೂಡ ಕೃಷ್ಣೆಗೆ ಬಾಗಿನ ಅರ್ಪಿಸಲು ಮೀನ-ಮೇಷ ಎಣಿಸುವುದು ಪ್ರತಿ ಬಾರಿಯೂ ನಡೆಯುತ್ತದೆ.

ದಕ್ಷಿಣದಲ್ಲಿ ಹರಿದಿರುವ ಕಾವೇರಿ ನದಿ ತುಂಬುವ ವೇಳೆಯಲ್ಲಿ ಜಲಾಶಯಕ್ಕೆ ಹಿಂದಿನ ಎಲ್ಲ ಸರ್ಕಾರಗಳು ಬಾಗಿನ ಅರ್ಪಿಸುತ್ತಲೇ ಬಂದಿವೆ. ಆದರೆ ಕೃಷ್ಣೆ ತುಂಬಿದ್ದರೂ ಕೂಡ ಬಾಗಿನ ಅರ್ಪಿಸಲು ಇಲ್ಲದ ನೆಪಗಳು ಬರುತ್ತವೆ. ಇದರಿಂದ ಆಳುವ ಸರ್ಕಾರಗಳು ಕಾವೇರಿಗೆ ಕೊಡುವ ಮಹತ್ವ ಕೃಷ್ಣೆಗೇಕಿಲ್ಲ ಎಂದು ಕೃಷ್ಣೆಯ ಒಡಲ ಮಕ್ಕಳು ಪ್ರಶ್ನಿಸುವಂತಾಗಿದೆ.

ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಆಗಿನ ಪ್ರಧಾನಿ ಶಾಸ್ತ್ರೀಜಿಯವರು 1964 ಮೇ 22ರಂದು ಭೂಮಿಪೂಜೆ ನೆರವೇರಿಸಿದ್ದರು. ನಂತರ ಕಟ್ಟಡದ ಕಾಮಗಾರಿ ಹಾಗೂ ಭೂಸ್ವಾಧಿಧೀನ, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಯೋಜನೆಗಳು ಆಮೆಗತಿಯಲ್ಲಿ ಸಾಗಿದ್ದರ ಪರಿಣಾಮ ಜಲಾಶಯದಲ್ಲಿ 2002ರಿಂದ ನೀರು ಸಂಗ್ರಹಿಸಲು ಆರಂಭಿಸಲಾಯಿತು.

ನಂತರ 2006ರಲ್ಲಿ ಆಗಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ರಾಷ್ಟ್ರಪತಿಯಾಗಿದ್ದ ಖ್ಯಾತ ವಿಜ್ಞಾನಿ ದಿ| ಡಾ| ಎ.ಪಿ.ಜೆ. ಅಬ್ದುಲ್ಕಲಾಂ ಅವರಿಂದ ಲೋಕಾರ್ಪಣೆಗೊಳಿಸಿದ್ದರು.

Advertisement

2015ರಲ್ಲಿ ಜಲಾಶಯವು ಸಂಪೂರ್ಣ ಭರ್ತಿಯಾಗದೇ ಗರಿಷ್ಠವಾಗಿ ಸೆಪ್ಟೆಂಬರ್‌ 25ರಂದು ಗರಿಷ್ಠ 519.60 ಮೀ ಎತ್ತರದ ಜಲಾಶಯದಲ್ಲಿ 515.82 ಮೀ. ಸಂಗ್ರಹವಾಗಿ ಜಲಾಶಯದಲ್ಲಿ 71.806 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

2002ರಿಂದ ಜಲಾಶಯದಲ್ಲಿ ಗರಿಷ್ಠ ನೀರು ಸಂಗ್ರಹ ಆರಂಭಿಸಿದಾಗಿನಿಂದ 2002ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ, 2005ರಲ್ಲಿ ದಿ| ಧರ್ಮಸಿಂಗ್‌, 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ, 2007ರಲ್ಲಿ ಜಲ ಸಂಪನ್ಮೂಲ ಸಚಿರಾಗಿದ್ದ ಕೆ.ಎಸ್‌. ಈಶ್ವರಪ್ಪ, 2008ರಿಂದ 2010ರವರೆಗೆ ಬಿ.ಎಸ್‌. ಯಡಿಯೂರಪ್ಪ, 2011ರಲ್ಲಿ ಸದಾನಂದಗೌಡ, 2012ರಲ್ಲಿ ಜಗದೀಶ ಶೆಟ್ಟರ, 2013 ಹಾಗೂ 2014ರಲ್ಲಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದರು.

ಆದರೆ 2015ರಲ್ಲಿ ಜಲಾಶಯ ತುಂಬದೇ ಇರುವುದರಿಂದ ಜಲಾಶಯಕ್ಕೆ ಬಾಗಿನ ಅರ್ಪಣೆಯಾಗಲಿಲ್ಲ. ಇನ್ನು 2016ರಲ್ಲಿ ಸಿದ್ದರಾಮಯ್ಯನವರ ಮಗ ರಾಕೇಶ ಅವರ ಅಕಾಲಿಕ ನಿಧನದಿಂದ ಮುಖ್ಯಮಂತ್ರಿಯವರಿಂದ ಬಾಗಿ ಅರ್ಪಣೆಯಾಗಲಿಲ್ಲ. ಇನ್ನು 2017ರಲ್ಲಿ ಸಿದ್ದರಾಮಯ್ಯನವರು ಕೃಷ್ಣೆಗೆ ಬಾಗಿನ ಅರ್ಪಿಸಿದ್ದರು.

2018ರಲ್ಲಿ ಬಾಗಿನ ಅರ್ಪಣೆಗೆ ದಿನಾಂಕ ನಿಗದಿಯಾಗಿದ್ದರೂ ಮುಖ್ಯಮಂತ್ರಿ ಯಾಗಿದ್ದ ಕುಮಾರಸ್ವಾಮಿಯವರು ಬಾಗಿನ ಅರ್ಪಿಸಲು ಬರದೇ ಮಳೆ ನೆಪ ಹೇಳಿ ರದ್ದುಗೊಳಿಸಿದ್ದರಿಂದ ಕೊಲಾØರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿಯವರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಹಾಗೂ ರೈತರು ಮುಖ್ಯಮಂತ್ರಿಗಳ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು.

ರಾಜ್ಯದಲ್ಲಿ ಅತಿ ಉದ್ದವಾಗಿ ಹರಿದು ಸುಮಾರು 6.5 ಲಕ್ಷ ಎಕರೆ ಜಮೀನು ಹಾಗೂ 12 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೃಷ್ಣೆಗೆ ಈ ಬಾರಿಯಾದರೂ ಮುಖ್ಯಮಂತ್ರಿ ಯಡಿಯೂರಪ್ಪನವರು ಬಾಗಿನ ಅರ್ಪಿಸಿಯಾರೇ ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next