ಆಲಮಟಿ: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಮುಳವಾಡ ಏತ ನೀರಾವರಿ ಯೋಜನೆಯ ಮನಗೂಳಿ ಶಾಖಾ ಕಾಲುವೆ ಸೇರಿದಂತೆ ಜಿಲ್ಲೆಯ ಎಲ್ಲ ಏತ ನೀರಾವರಿ ಯೋಜನೆಗಳ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಕಾಲುವೆಗಳಿಗೆ ನೀರು ಹರಿಸದಿರುವ ಕ್ರಮ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಂಘಟನೆ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಎ ಸ್ಕೀಂ, ಬಿ ಸ್ಕೀಂ ಎಂದು ನೆಪ ಹೇಳದೇ ಮುಳವಾಡ ಏತ ನೀರಾವರಿ ಯೋಜನೆಯ ಮನಗೂಳಿ ಶಾಖಾ ಕಾಲುವೆ ಮತ್ತು ಜಿಲ್ಲೆಯ ಎಲ್ಲ ಏತ ನೀರಾವರಿ ಯೋಜನೆಗಳ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಕಲಗುರ್ಕಿ ಬಳಿ ಹಾಯ್ದು ಹೋಗಿರುವ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಮನಗೂಳಿ ಶಾಖಾ ಕಾಲುವೆಗೆ ಮೇಲೆ ರೈಲ್ವೆ ಸೇತುವೆ ಕಾಮಗಾರಿ ಮುಕ್ತಾಯವಾಗಿದೆ. ಈಗ ಕೃಷ್ಣಾಭಾಗ್ಯ ಜಲ ನಿಗಮದ ವತಿಯಿಂದ ಲೈನಿಂಗ್ ಕಾಮಗಾರಿ ತ್ವರಿತವಾಗಿ ಮುಗಿಸಿ ಕಾಲುವೆಗೆ ನೀರು ಹರಿಸಲು ಅಧಿ ಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕಾಲುವೆಯಲ್ಲಿ ಸಂಗ್ರಹವಾದ ಮಣ್ಣು ತೆರವುಗೊಳಿಸಿ ಕೂಡಲೇ ಕಾಲುವೆ ನೀರು ಹರಿಸಬೇಕು. ನೀರಾವರಿ ಸಲಹಾ ಸಮಿತಿ ಸಭೆಗೆ ಜಿಲ್ಲೆಯ ರೈತರನ್ನು ಆಹ್ವಾನಿಸದೇ ಅಧಿಕಾರಿಗಳು ತಮ್ಮಿಷ್ಟದಂತೆ ನಿರ್ಧಾರ ಕೈಗೊಂಡು ನೀರು ಹರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸದ್ಯ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಕೂಡಲೇ ಕಾಲುವೆ ನೀರು ಹರಿಸಬೇಕು ಇದರಿಂದ ಬರದಿಂದ ಕಂಗೆಟ್ಟ ರೈತರಿಗೆ ಅನುಕೂಲವಾಗುತ್ತದೆ. ಜಿಲ್ಲೆಯ ಸಮಗ್ರ ನೀರಾವರಿ ದೃಷ್ಟಿಯಿಂದ ಎಲ್ಲ ಏತ ನೀರಾವರಿ ಯೋಜನೆಗಳ ಕಾಲುವೆ ನೀರು ಹರಿಸಬೇಕು. ವಾರದಲ್ಲಿ ನೀರು ಹರಿಸಬೇಕು. ಇಲ್ಲವಾದಲ್ಲಿ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರ ಕಚೇರಿಗೆ ಬೀಗ ಜಡಿದು ಅಹೋ ರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡ ಸೋಮನಗೌಡ ಪಾಟೀಲ ಮನಗೂಳಿ ಮಾತನಾಡಿ, ಸರ್ಕಾರ ಮೊದಲು ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದರು. ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ
ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ಹಿಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ಕೃ.ಮೇ.ಯೋ. ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ. ತಮ್ಮ ಮನವಿ ಸಮಿತಿ ಗಮನಕ್ಕೆ ತರಲಾಗುವುದು ಎಂದರು.
ಸದಾಶಿವ ಬರಟಗಿ, ಕೃಷ್ಣಪ್ಪ ಬಮರೆಡ್ಡಿ, ರಾಮಣ್ಣ ಶಿರಾಗೇರ, ಖಾಜಾಸಾಹೇಬ ಕೊಲ್ಹಾರ, ರೇವಣೆಪ್ಪ ಕಡಗೋಲ, ಸಿದ್ರಾಮ ಅಂಗಡಗೇರಿ, ಶ್ರೀಶೈಲ ನಾಗೋಡ, ಚನ್ನಪ್ಪ ತೋಟದ, ಸಂಗಪ್ಪ ನಿಂಗೋಡ, ಸಂಗನಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಸಂಗಪ್ಪ ಕುಂಬಾರ, ಸಿದ್ರಾಮಯ್ಯ ಮಠಪತಿ, ದುಂಡಪ್ಪ ಬೆಲ್ಲದ, ಬಸಪ್ಪ ಜಗ್ಗಲಿ, ಮಲ್ಲು ತೋಟದ, ಭೀಮಣ್ಣ ನಡಗಡ್ಡಿ ಇತರರು ಇದ್ದರು.