Advertisement

ಆಲಡ್ಕ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

03:45 AM Jan 06, 2017 | Team Udayavani |

ನೆಲ್ಯಾಡಿ/ಪುತ್ತೂರು: ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಆಲಡ್ಕದಲ್ಲಿ ಗುರುವಾರ ಬೆಳಗ್ಗೆ ಒಂದೇ ಕುಟುಂಬದ ನಾಲ್ವರ ಶವಗಳು ಕೆರೆಯಲ್ಲಿ ಪತ್ತೆಯಾಗಿವೆ. ಈ ಪೈಕಿ ಓರ್ವ ಎಂಡೋಪೀಡಿತನಾಗಿ ಹಾಸಿಗೆ ಹಿಡಿದವನಾಗಿದ್ದು, ಆತನನ್ನು ಕೆರೆಗೆ ತಳ್ಳಿ ಬಳಿಕ ಉಳಿದವರೂ ಕೆರೆಗೆ ಹಾರಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Advertisement

ಆಲಡ್ಕ ಮನೆಯ ಯಜಮಾನ ಬಾಬು ಗೌಡ (62), ಪತ್ನಿ ಗಂಗಮ್ಮ (55), ಪುತ್ರರಾದ ಎಂಡೋಪೀಡಿತ ಸದಾನಂದ (32) ಮತ್ತು ನಿತ್ಯಾನಂದ (30) ಸಾವಿಗೀಡಾದವರು. ಘಟನೆಯ ಸಂದರ್ಭ ಇನ್ನೋರ್ವ ಪುತ್ರ ದಯಾನಂದ ಮಂಗಳೂರಿನಲ್ಲಿದ್ದರು. ಬುಧವಾರ ತಡರಾತ್ರಿ ಈ ಕೃತ್ಯ ಎಸಗಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ.

ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನಸಿಕವಾಗಿ ನೊಂದಿರುವುದೇ ಕೃತ್ಯ ಎಸಗಲು ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಘಟನೆ ವಿವರ: ಬಾಬು ಗೌಡ  ವರ್ಷ ದಿಂದೀಚೆಗೆ ತಾನು ಆತ್ಮಹತ್ಯೆ ಮಾಡಿ ಕೊಳ್ಳುವು ದಾಗಿ ಸಂಬಂಧಿಕರು, ನೆರೆಕರೆಯರೊಂದಿಗೆ ಹೇಳಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ ಸಂಬಂಧಿಕರು ಮನೆಗೆ ಬಂದಿದ್ದು, ಮನೆ ಸಂಬಂಧ ದೋಷಗಳೇನಾದರೂ ಇದ್ದಲ್ಲಿ ಪ್ರಶ್ನಾಚಿಂತನೆ ಮೂಲಕ   ಪರಿಹರಿಸೋಣ ಎಂದು ಸಮಾಧಾನಿಸಿದ್ದರು.  ಅಪರಾಹ್ನ 3.30ರ ಬಳಿಕ ಬಾಬು ಗೌಡರ ಎರಡನೆಯ ಪುತ್ರ ನಿತ್ಯಾನಂದ ನಾಪತ್ತೆ ಆಗಿದ್ದು, ಆತನಿಗಾಗಿ ಸಂಬಂಧಿಕರ ಮನೆಯಲ್ಲೂ ಬಾಬು ಗೌಡ ವಿಚಾರಿಸಿದ್ದರು. ಆತ ಪತ್ತೆ ಆಗದ ಕಾರಣ ತಡರಾತ್ರಿ  ಹೆತ್ತವರೂ ಕೆರೆಗೆ ಹಾರಿರಬಹುದು ಎಂದು ಶಂಕಿಸಲಾಗಿದೆ.

ಎಂಡೋ ಪೀಡಿತ ಸ‌ದಾನಂದ ಅವರ‌ ಕುತ್ತಿಗೆಗೆ ಟವೆಲ್‌ ಸುತ್ತಲಾಗಿದ್ದು, ಈತನನ್ನು ಎಳೆದುಕೊಂಡು ಹೋಗಿ ಕೆರೆಗೆ ತಳ್ಳಿರುವ ಸಾಧ್ಯತೆ ಕಂಡುಬಂದಿದೆ. ಗುರುವಾರ ಬೆಳಗ್ಗೆ ನೆರೆಮನೆಯವರು ಮನೆಮಂದಿಯ ಹುಡುಕಾಟ ನಡೆಸಿದ್ದು, ಕೆರೆಯಲ್ಲಿ ಗಂಗಮ್ಮಳ ಶವ ತೇಲುತ್ತಿತ್ತು. ಸ್ಥಳೀಯರು ಕೆರೆಯ ತಳದಲ್ಲಿ ಶೋಧಿಸಿದಾಗ ಇನ್ನಿಬ್ಬರ ಶವವೂ ಪತ್ತೆಯಾಯಿತು. ಗಂಗಮ್ಮ ಅವರ ಶವ ತೇಲುತ್ತಿದ್ದ ಕಾರಣ ಆಕೆಯೇ ಮೊದಲು ನೀರಿಗೆ ಹಾರಿರಬಹುದು ಎಂದು ಶಂಕಿಸಲಾಗಿದೆ.

Advertisement

ಮೂವರ ಶವಗಳು ಪತ್ತೆಯಾದ ಬಳಿಕವೂ ನಿತ್ಯಾನಂದ ಅವರು ಎಲ್ಲೂ ಕಾಣಿಸದ್ದರಿಂದ ಪಕ್ಕದ ತೋಟದಲ್ಲಿರುವ ಇನ್ನೊಂದು ಕೆರೆಯನ್ನೂ ಶೋಧಿಸಲಾಯಿತು. ಆಗ ನೀರಿನ ತಳದಲ್ಲಿ ಅವರ ಶವ ಕಂಡುಬಂತು.

ಹುಲ್ಲು ಕೊಂಡೊಯ್ಯಲು  ಬಂದಿರಲಿಲ್ಲ: ಬಾಬು ಗೌಡ ಅವರು ಪ್ರತಿದಿನ ಬೆಳಗ್ಗೆ 6ಕ್ಕೆ ತೋಟಕ್ಕೆ ಹುಲ್ಲು ತರಲು ಹೋಗುತ್ತಿದ್ದರು. ಗುರುವಾರ ಬೆಳಗ್ಗೆ ಅವರು ಬಾರದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಸಂಜೀವ ನಾಯ್ಕ ಅವರು ಬಾಬು ಗೌಡರ ಮನೆಗೆ ಬಂದು ಪರಿಶೀಲಿಸಿದ್ದಾರೆ. ಆ ಸಂದರ್ಭ ಮನೆಯಿಂದ ಕೆಳಗಡೆಯಿದ್ದ ಕೆರೆಯಲ್ಲಿ ಗಂಗಮ್ಮ ಅವರ ಮೃತದೇಹ ತೇಲುತ್ತಿತ್ತು. ತತ್‌ಕ್ಷಣ ಮೃತರ ಸಂಬಂಧಿಕರ ಗಮನಕ್ಕೆ ತಂದಿದ್ದಾರೆ. ಅನಂತರ ಉಳಿದವರ ಪತ್ತೆಗೆ ಶೋಧ ಮುಂದುವರಿದಿತ್ತು. ಮನೆಯ ಕೆರೆಯಲ್ಲಿ ಬಾಬು ಗೌಡ, ಸದಾನಂದ ಅವರ ಶವ ಪತ್ತೆ ಆಗಿತ್ತು. ನಿತ್ಯಾನಂದ ಅವರ ಶವ ಮನೆ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.

ಮಾನಸಿಕವಾಗಿ ಕುಗ್ಗಿದ್ದರು: ಬಾಬು ಅವರದ್ದು ಕೃಷಿ ಪ್ರಧಾನ ಕುಟುಂಬವಾಗಿದ್ದು, ಪತ್ನಿ ಮತ್ತು ಮೂವರು ಮಕ್ಕಳಿದ್ದರು. ಮೊದಲನೆಯ ಪುತ್ರ ಸದಾನಂದ ಎಂಡೋ ಪೀಡಿತರಾಗಿದ್ದು, ಶೇ. 90ರಷ್ಟು ಬುದ್ಧಿಮಾಂದ್ಯರಾಗಿದ್ದರು. 2ನೇ ಪುತ್ರ ದಯಾನಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಇನ್ನೋರ್ವ ಪುತ್ರ ನಿತ್ಯಾನಂದನಿಗೆ 2 ಬಾರಿ ಅಪಘಾತ ಸಂಭವಿಸಿ, ಅವರ ಆರೋಗ್ಯವೂ ಸುಸ್ಥಿತಿಯಲ್ಲಿ ರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಎಲ್ಲರೂ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಹಲವು ಬಾರಿ ಪ್ರಯತ್ನ: ಬಾಬು ಗೌಡ ಅವರು ಕೆಲವು ದಿನಗಳ ಹಿಂದೆ ಓಣಿತ್ತಾರು ಸಂಜೀವ ನಾಯ್ಕ ಅವರ ತೋಟದ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೋಟದ ಮಾಲಕ ಗಮನಿಸಿದ ಕಾರಣ ಅಂದು ಪಾರಾಗಿದ್ದರು. ಅದೇ ದಿನ ರಾತ್ರಿ 20 ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಬು ಗೌಡ ಅವರು, ಕೋಮಾ ಸ್ಥಿತಿಗೆ ತಲುಪಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ಅನಂತರವೂ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಪದೇ-ಪದೇ ಮಾತನಾಡುತ್ತಿದ್ದರು ಎಂದು ನೆರೆಕರೆಯವರು ತಿಳಿಸಿದ್ದಾರೆ.

ತರವಾಡು ಮನೆ!: ಬಾಬು ಗೌಡ ಅವರು ವಾಸಿಸುತ್ತಿದ್ದ ಮನೆ ತರವಾಡು ಮನೆ ಆಗಿದೆ. ಅಲ್ಲಿ ದೈವದ ಆರಾಧನೆ ಇದ್ದು, ವರ್ಷಕೊಮ್ಮೆ ಕಾರ್ಯಕ್ರಮ ನಡೆಯುತ್ತಿತ್ತು. ಸುಮಾರು 100ಕ್ಕೂ ಅಧಿಕ ಕುಟುಂಬಗಳು ತರವಾಡು ಮನೆಯ ವ್ಯಾಪ್ತಿಗೆ ಸೇರಿವೆ. ಪದೇ-ಪದೇ ಅಪಘಾತ, ಎಂಡೋ ಪೀಡಿತನ ಸಮಸ್ಯೆ, ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಮನೆ ಯಲ್ಲಿ ನೆಮ್ಮದಿ ಇಲ್ಲದ ಕಾರಣ, ನಿತ್ಯಾನಂದ ಅವರು ಜೋತಿಷಿ ಮೂಲಕ ಪ್ರಶ್ನಾ ಚಿಂತನೆ ನಡೆಸುವಂತೆ ಹೇಳುತ್ತಿದ್ದರು.  ಮನೆಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ  ಎನ್ನಲಾಗಿದೆ.

ಸಜ್ಜನ ಕುಟುಂಬ: ಬಾಬು ಗೌಡ ಅವರ ಮನೆಯಲ್ಲಿ ಮಾನಸಿಕವಾಗಿ ಕಿರಿ-ಕಿರಿ ಇದ್ದರೂ ಊರವರೊಂದಿಗೆ ಅದನ್ನು ತೋರಿಸಿ ಕೊಳ್ಳುತ್ತಿರಲಿಲ್ಲ. ಬೇರೆಯವರೊಂದಿಗೆ ಅಷ್ಟಾಗಿ ಬೆರೆಯದೇ ತನ್ನ ಪಾಡಿಗೆ ತಾವು ಇರುತ್ತಿದ್ದರು. ಬಾಬು ಗೌಡ ಕುಟುಂಬ ಅಡಿಕೆ ಕೃಷಿ ಹೊಂದಿದ್ದು, ಜೀವನ ನಿರ್ವಹಣೆ ಅದರಿಂದ ಸಾಗುತ್ತಿತ್ತು. ನಾಲ್ಕು ವರ್ಷದ ಹಿಂದೆಯಷ್ಟೇ ಹೊಸ ಮನೆ ಕಟ್ಟಿದ್ದರು. ಈ ಬಾರಿ ಫಸಲು ಇಲ್ಲ. ಸಾಲ ಕಟ್ಟುವುದು ಹೇಗೆ ಎಂದು ಬಾಬು ಗೌಡ ಕೆಲವರೊಂದಿಗೆ ಚಿಂತೆ ವ್ಯಕ್ತಪಡಿಸಿದ್ದರು.

ಎಸ್ಪಿ ಭೇಟಿ: ಸ್ಥಳಕ್ಕೆ ಎಸ್ಪಿ ಭೂಷಣ್‌ ಜಿ. ಬೊರಸೆ, ಡಿವೈಎಸ್‌ಪಿ ರವೀಶ್‌  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ, ಧರ್ಮಸ್ಥಳ ಉಪನಿರೀಕ್ಷಕ ಮಾಧವ ಕೂಡ್ಲು , ಉಪವಿಭಾಗಾಧಿಕಾರಿ ರಘುನಂದನ್‌ ಮೂರ್ತಿ, ಬೆಳ್ತಂಗಡಿ ತಹಶೀಲ್ದಾರ್‌ ಎಚ್‌.ಕೆ. ತಿಪ್ಪೇಸ್ವಾವಿ ಮತ್ತಿತರರಿದ್ದರು.

ಎಂಡೋ ಸಮಸ್ಯೆ ಕಾರಣ?
ಬಾಬು ಗೌಡ ಅವರ ಹಿರಿಯ ಪುತ್ರ ಸದಾನಂದ ಎಂಡೋಪೀಡಿತನಾಗಿದ್ದು, ಆತನ ಆರೈಕೆಯನ್ನು ತಂದೆ-ತಾಯಿ ನೋಡಿಕೊಳ್ಳುತ್ತಿದ್ದರು. ಎಂಡೋಪೀಡಿತನಾಗಿದ್ದರೂ ಸರಕಾರದಿಂದ ಸರಿಯಾದ ಸವಲತ್ತು ಸಿಕ್ಕಿರಲಿಲ್ಲ  ಎಂದು ಕೆಲವು ಎಂಡೋ ಹೋರಾಟಗಾರರು ಆರೋಪಿಸಿದ್ದಾರೆ. ಮನೆಯ ಯಜಮಾನ ಹೊರತುಪಡಿಸಿ ಉಳಿದವರು ಮಾನಸಿಕವಾಗಿ ಬಳಲಿದ್ದು, ಇದಕ್ಕೆ ಎಂಡೋಸಲ್ಫಾನ್‌ ಪ್ರಭಾವ ಕಾರಣ ಎನ್ನಲಾಗಿದೆ. ಎಂಡೋಸಂತ್ರಸ್ತ ಪರ ಹೋರಾಟಗಾರ ಶ್ರೀಧರ ಗೌಡ, ಸರಕಾರ ಸಮರ್ಪಕ ಮೂಲಸೌಕರ್ಯ ಒದಗಿಸದಿದ್ದುದು ಇಂಥ ಘಟನೆಗಳಿಗೆ ಕಾರಣ ಎಂದು ಜಿಲ್ಲಾ ಎಸ್ಪಿಯವರ ಗಮನಕ್ಕೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next