ಕಲಬುರಗಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಚೈನ್ ಕತ್ತರಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್ ಗೆ ಮೊದಲ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳ್ಳಂಬೆಳಗ್ಗೆಯೇ ಪೊಲೀಸರು ರಸ್ತೆಗಳಿದ ಪರಿಣಾಮ ಮಹಾನಗರ ಸೇರಿದಂತೆ ಇಡೀ ಜಿಲ್ಲೆ ಸ್ತಬ್ಧಗೊಂಡಿತ್ತು. ಇದರ ನಡುವೆಯೂ ಆಸ್ಪತ್ರೆಗಳು, ಮೆಡಿಕಲ್‌ಗಳು ಸೇರಿ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಕಠಿಣ ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಬೆಳಗ್ಗೆಯ ವಿನಾಯಿತಿಯೂ ಇಲ್ಲ. ಇಷ್ಟು ದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ತರಕಾರಿ ಮತ್ತು ದಿನಸಿ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಬೆಳಗ್ಗೆಯೇ ಜನರು ಹೊರಗೆ ಬರುತ್ತಿದ್ದರು. ಅಲ್ಲದೇ, 10 ಗಂಟೆ ನಂತರವೂ ಅನಗತ್ಯವಾಗಿ ಮನೆಗಳಿಂದ ಹೊರ ಬಂದು ಸುತ್ತಾಡುತ್ತಿದ್ದರು. ಗುರುವಾರದಿಂದ ಶನಿವಾರದ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿರುವ ಕಾರಣ ಜನರು ಮನೆಗಳಿಂದ ಅಷ್ಟಾಗಿ ಹೊರಗೆ ಬರಲೇ ಇಲ್ಲ.
ಬಹುತೇಕ ಜನರು ಬೆಳಗ್ಗೆಯಿಂದಲೇ ಮನೆಯೊಳಗೆ ಲಾಕ್ ಆಗಿ ಬಿಟ್ಟರು. ಕೆಲವರು ಬೆಳಗ್ಗೆ ರಸ್ತೆಗಳಿಯುವ ಪ್ರಯತ್ನ ಮಾಡಿದರು. ಆದರೆ, ಅಷ್ಟೊತ್ತಿಗೆ ಹಿರಿಯ ಅಧಿಕಾರಿಗಳ ಸಮೇತ ಪೊಲೀಸರು ರಸ್ತೆಗೆ ಬಂದು ಬಿಟ್ಟಿದ್ದರು. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಜನರು ಮನೆಗಳಿಗೆ ತೆರಳಿದರು. ಅಲ್ಲದೇ, ಪೊಲೀಸರು ಧ್ವನಿವರ್ಧಕದ ಮೂಲಕ ಯಾರೂ ಮನೆಗಳಿಂದ ಹೊರಗೆ ಬರಬಾದರು ಎಂದು ಎಚ್ಚರಿಕೆ ನೀಡುತ್ತಿದ್ದರು. ಇಷ್ಟಾದರೂ, ವಿನಾಕಾರಣ ಸುತ್ತಾಡುತ್ತಿದ್ದರನ್ನು ಹಿಡಿದ ಪೊಲೀಸರು ಬೆಳಗ್ಗೆಯೇ ಲಾಠಿ ರುಚಿ ತೋರಿಸಿದರು. ಆದ್ದರಿಂದ ಯುವಕರು ಸೇರಿದಂತೆ ಯಾರೂ ಕೂಡ ಅನಾವಶ್ಯಕವಾಗಿ ರಸ್ತೆಗಳಿಗೆ ಬರುವ ದುಸ್ಸಾಹಸ ಮಾಡಲಿಲ್ಲ.
ಪ್ರಮುಖ ಸ್ಥಳದಲ್ಲಿ ಬೀಡು: ಕಠಿಣ ಲಾಕ್‌ಡೌನ್ ಅನುಷ್ಠಾನಕ್ಕಾಗಿ ಎಲ್ಲೆಡೆ ಕಟ್ಟುನಿಟ್ಟಿನ ಪೊಲೀಸರು ಕಠಿಣ ಕಾರ್ಯಾಚರಣೆ ನಡೆಸಿದರು. ನಗರದ ಪ್ರಮುಖ ಸ್ಥಳಗಳಲ್ಲಿ ಆಯಾ ಠಾಣೆಗಳ ವ್ಯಾಪ್ತಿಯ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿ ಬೀಡು ಬಿಟ್ಟಿದ್ದರು. ಬೇಕಾಬಿಟ್ಟಿ ಓಡಾಟಕ್ಕೆ ಕಡಿವಾಣ ಹಾಕಲು ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿದರು. ಸೂಕ್ತ ಮಾಹಿತಿ ನೀಡಿದವರಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಿದರು.
ನಗರದ ಸೂಪರ್ ಮಾರ್ಕೆಟ್, ಕಿರಾಣಿ ಬಜಾರ್, ಜಗತ್ ವೃತ್ತ, ಶಹಾಬಜಾರ್, ಮುಸ್ಲಿಂ ಚೌಕ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ರಾಷ್ಟ್ರಪತಿ ಚೌಕ್, ಜೇವರ್ಗಿ ಕ್ರಾಸ್, ರಾಮ ಮಂದಿರ ಸೇರಿದಂತೆ ಹಲವು ಪ್ರದೇಶಗಳು ಭಣಗುಡುತ್ತಿದ್ದವು. ಕಿರಾಣಿ ಅಂಗಡಿ, ತರಕಾರಿ ಮಾರಾಟ, ಮದ್ಯದಂಗಡಿ ಸೇರಿದಂತೆ ಎಲ್ಲವನ್ನು ಬಂದ್ ಮಾಡಿದ್ದರಿಂದ ಜನರೂ ಸುಳಿಯಲಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿದ್ದರೂ ಅಷ್ಟಾಗಿ ಜನರು ಕಾಣಿಸಿಲ್ಲ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟಕ್ಕೂ ಹೆಚ್ಚು ಮಂದಿ ಹೋಟೆಲ್‌ಗಳ ಬಳಿ ಕಾಣಿಸಲಿಲ್ಲ. ಪೆಟ್ರೋಲ್ ಬಂಕ್‌ಗಳು ವಾಹನಗಳು ಇಲ್ಲದೇ ಬಹುತೇಕ ಖಾಲಿ-ಖಾಲಿ ಆಗಿದ್ದವು. ಒಟ್ಟಾರೆ ಜನ ಸಂಚಾರ, ವಾಹನ ಓಡಾಟಕ್ಕೆ ಕಡಿವಾಣ ಬಿದ್ದಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು.