ನವದೆಹಲಿ/ಕೋಲ್ಕತಾ: ಉಗ್ರ ಸಂಘಟನೆ ಅಲ್- ಖೈದಾ ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳಲ್ಲಿ ಸ್ಲೀಪರ್ ಸೆಲ್‌ಗಳನ್ನು ಬಳಕೆ ಮಾಡಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಇದರ ಜತೆಗೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂಬ ಅಂಶವನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ನ.5ರಂದೇ ಇಲಾಖೆ ಈ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು.
ಕರ್ನಾಟಕದ ಶಿರಸಿಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ನೇಮಕ ಕೆಲಸ ಮಾಡುತ್ತಿದ್ದ ಸಯ್ಯದ್ ಎಂ.ಇದ್ರಿಸ್ ಎಂಬಾತನನ್ನು ಕೋಲ್ಕತಾದ ಎನ್‌ಐಎ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲಿಯೇ ಈ ವಿಚಾರ ಬಹಿರಂಗವಾಗಿರುವುದು ಗಮನಾರ್ಹ. ಆತ ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆ ಲಷ್ಕರ್‌ಗೆ ನೇಮಕ ಮಾಡುವ ನೆಟ್‌ವರ್ಕ್‌ನಲ್ಲಿ ಇದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಮುಂದಿನ ಹತ್ತು ದಿನಗಳಲ್ಲಿ ಕೋವಿಡ್ ಪ್ರಕರಣ ಸಂಪೂರ್ಣ ನಿಯಂತ್ರಣಕ್ಕೆ : ಅರವಿಂದ ಕೇಜ್ರಿವಾಲ್
ಅಲ್-ಖೈದಾ ಉಗ್ರ ಸಂಘಟನೆ ವಿದೇಶಿ ನೆರವಿನ ಜತೆಗೆ ಸ್ಥಳೀಯರನ್ನು ಪ್ರಚೋದಿಸಿ, ಹಿಂಸಾತ್ಮಕ ಕೃತ್ಯಗಳನ್ನು ಎಸಗುವ ನಿಟ್ಟಿನಲ್ಲಿ ಕುಮ್ಮಕ್ಕು ನೀಡಲು ವೇದಿಕೆ ಸಿದ್ಧಪಡಿಸುತ್ತಿದೆ ಎಂದು ಗುಪ್ತಚರ ಇಲಾಖೆ ತನ್ನ ಮುನ್ನೆಚ್ಚರಿಕೆಯಲ್ಲಿ ಉಲ್ಲೇಖೀಸಿದೆ.
ಪಾಕಿಸ್ತಾನದ ಕರಾಚಿ ಮತ್ತು ಪೇಶಾವರದಲ್ಲಿ ಉಗ್ರ ಸಂಘಟನೆ ನೇಮಕ ಕೇಂದ್ರಗಳನ್ನು ತೆರೆದಿದೆ. ಅಲ್ಲಿಂದಲೇ ಪಶ್ಚಿಮ ಬಂಗಾಳದಲ್ಲಿ ಯುವಕರನ್ನು ಪ್ರಚೋದನೆಗೊಳಿಸಿ ತ್ವೇಷಮಯ ವಾತಾವರಣ ಸೃಷ್ಟಿಸುವಂತೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.