ಶ್ರೀನಗರ : ಭದ್ರತಾ ಪಡೆಗಳಿಗೆ ಸಿಕ್ಕಿರುವ ಭಾರೀ ದೊಡ್ಡ ಯಶಸ್ಸೊಂದರಲ್ಲಿ ಅಲ್ ಬದ್ರ್ ಸಂಘಟನೆಯ ಉಗ್ರ ಮುಜಫರ್ ಅಹ್ಮದ್, ಜಮ್ಮು ಕಾಶ್ಮೀರದ ಬಡಗಾಂವ್ ಜಿಲ್ಲೆಯಲ್ಲಿ ಇಂದು ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.
ಮುಜಫರ್ ಅಹ್ಮದ್ ಈ ಹಿಂದೆ ಪಾಕಿಸ್ಥಾನದಲ್ಲಿ ನೆಲೆ ಹೊಂದಿರುವ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ.
ಅಹ್ಮದ್ ಅಡಗಿಕೊಂಡಿದ್ದ ತಾಣದ ಬಗ್ಗೆ ನಿಖರ ಮಾಹಿತಿ ಪಡೆದ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಆ ಸ್ಥಳವನ್ನು ಸುತ್ತು ವರಿದು ಎನ್‌ಕೌಂಟರ್ ನಡೆಸಿದರು. ಇದನ್ನು ಅನುಸರಿಸಿ ಗುಂಡಿನ ಕಾಳಗ ನಡೆಯಿತು. ಎನ್‌ಕೌಂಟರ್‌ನಲ್ಲಿ ಅಹ್ಮದ್ ಹತನಾದ ಎಂದು ರಾಷ್ಟ್ರೀಯ ರೈಫಲ್ ಪಡೆಯ ಅನೂಪ್ ನಾಯರ್ ತಿಳಿಸಿದ್ದಾರೆ.
“ಅಹ್ಮದ್‌ನನ್ನು ಹತ್ಯೆ ಗೈಯುವ ಮೂಲಕ ನಾವು ಅಲ್ ಬದ್ರ್ ಉಗ್ರ ಸಂಘಟನೆಯ ಬೆನ್ನೆಲುಬನ್ನು ಮುರಿದಿದ್ದೇವೆ. ಈ ಉಗ್ರ ಸಂಘಟನೆಯು ಕಾಶ್ಮೀರದಲ್ಲಿ ನೆಲೆ ಕಾಣಲು ಕೆಲ ಕಾಲದಿಂದ ಯತ್ನಿಸುತ್ತಿತ್ತು’ ಎಂದು ನಾಯರ್ ಹೇಳಿದ್ದಾರೆ.
ಎಲ್‌ಇಟಿ ಸಂಘಟನೆಯ ಉಗ್ರನಾಗಿದ್ದ ಅಹ್ಮದ್ ನನ್ನು ಈಚೆಗೆ ಗುಂಪಿನಿಂದ ಹೊರಹಾಕಲಾಗಿತ್ತು. ಅನಂತರ ಆತ ಅಲ್ ಬದ್ರ್ ಸಂಘಟನೆಯನ್ನು ಸೇರಿಕೊಂಡಿದ್ದ. ಈತನು ಹಿಜ್‌ಬುಲ್ ಮುಜಾಹಿದೀನ್ ಕಮಾಂಡರ್ ಕಯೂಮ್ ನಜರ್ ನ ನಿಕಟ ಸಹವರ್ತಿಯಾಗಿದ್ದ ಎಂದು ನಾಯರ್ ಹೇಳಿದ್ದಾರೆ.