Advertisement

ಆಕೆ ಎಲ್ಲ ಕೊರತೆಗಳನ್ನು ಮೀರಿ ಬೆಳೆದಳು

10:28 AM Jul 24, 2018 | |

ಶಿರ್ವ: ವಿದ್ಯೆ ಪಡೆದು ಯಶಸ್ಸಿನ ಹಾದಿ ತುಳಿಯಬೇಕೆಂಬ ಈಕೆಯ ಹಂಬಲವೇನೋ ಕೈಗೂಡಿದೆ. ಆದರೆ ಸ್ವಂತ ಉದ್ಯೋಗ ಪಡೆದು ಸ್ವಾವಲಂಬಿಯಾಗಬೇಕೆಂಬ ಕನಸು ಇನ್ನೂ ಕೈಗೂಡಿಲ್ಲ. ಹಳ್ಳಿಯೊಂದರಲ್ಲಿ ಚಿಮಣಿ ದೀಪದ ಬೆಳಕಲ್ಲಿ ಓದುತ್ತಲೇ ಬಿಕಾಂನಲ್ಲಿ ಶೇ. 97ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದವಳು ಅಕ್ಷಿತಾ ಹೆಗ್ಡೆ. ತನಗಿರುವ ಅನಾರೋಗ್ಯವನ್ನೂ ಹತ್ತಿಕ್ಕಿಕೊಂಡು ತನ್ನ ಓದುವ ಆಸೆ ಕೈಗೂಡಿಸಿಕೊಂಡವಳು. ಉನ್ನತ ವಿದ್ಯಾಭ್ಯಾಸದ ಕನಸು ಕಮರಲೂ ಬಡತನವೇ ಕಾರಣ. ಸದ್ಯ ಬೆಳ್ಮಣ್‌ ಸಮೀಪದ ಗೇರುಬೀಜ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾಳೆ.

Advertisement

ವಿದ್ವತ್ತಿಗೆ ವಿದ್ಯುತ್‌ ತೊಡಕಾಗಿಲ್ಲ
ಕಣಜಾರು ದಿ| ಸುಭಾಸ್‌ಚಂದ್ರ ಹೆಗ್ಡೆ ಮತ್ತು ಜಯಲಕ್ಷ್ಮೀ ದಂಪತಿಯ ಪುತ್ರಿ ಅಕ್ಷಿತಾ ತನ್ನ ನಾಲ್ಕನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಳು. ಸ್ವಂತ ಮನೆಯಾಗಲಿ, ಜಾಗವಾಗಲಿ ಇಲ್ಲದೆ ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ಹಾಳೆಕಟ್ಟೆ ಕಲ್ಯಾ ಕೇಶವ ಶಿಶು ಮಂದಿರದ ಕುಡಾರಿಕ್ಕು ಎಂಬಲ್ಲಿ ಸರಕಾರಿ ಜಮೀನಿನಲ್ಲಿ ತಗಡು ಶೀಟಿನ ಮನೆಯಲ್ಲಿ ತಾಯಿ -ಮಗಳು ಬದುಕುತ್ತಿದ್ದಾರೆ. ಮನೆ ನಂಬ್ರವಿಲ್ಲದ ಕಾರಣ, ವಿದ್ಯುತ್‌ ಮತ್ತು ಶೌಚಾಲಯ ಸೌಲಭ್ಯ ಸಿಕ್ಕಿಲ್ಲ. ತಾಯಿ ಜಯಲಕ್ಷ್ಮೀ (ಸಂಪರ್ಕ: 8277652245) ಅವರಿಗೂ ಅನಾರೋಗ್ಯ. ಹಾಗೆಂದು ಸುಮ್ಮನೆ ಕುಳಿತಿಲ್ಲ, ಬೀಡಿ ಕಟ್ಟಿ ಬದುಕು ನೂಕುತ್ತಿದ್ದಾರೆ.

ಜಗತ್ತು 4ಜಿ – 5ಜಿ ಯುಗದಲ್ಲಿದ್ದರೂ ಟಿವಿ, ವಾಟ್ಸಾಪ್‌, ಫೇಸ್‌ಬುಕ್‌ ಯಾವುವೂ ಈಕೆಯನ್ನು ತಲುಪಿಲ್ಲ. ಇತ್ತೀಚೆಗಿನವರೆಗೂ ಚಿಮಿಣಿ ದೀಪದ ಬೆಳಕೇ ಆಶ್ರಯ. ಎರಡು ತಿಂಗಳ ಹಿಂದೆ ಮನೆಗೆ ಸೋಲಾರ್‌ ಲೈಟ್‌ ಅಳವಡಿಸಲಾಗಿದೆ. ಅಕ್ಷಿತಾ, ಸುಂದರರಾಮ್‌ ಶೆಟ್ಟಿ ಕಾಲೇಜಿನ ವಿದ್ಯಾರ್ಥಿನಿ. ಈ ವರ್ಷ ಬಿಕಾಂ ಅಂತಿಮ ಸೆಮಿಸ್ಟರ್‌ನಲ್ಲಿ ಶೇ. 97 ಅಂಕ ಗಳಿಸಿದಳು. ಪ್ರಾಯೋಗಿಕ ವಿಷಯಗಳಾದ ಬಿಸಿನೆಸ್‌ ಟ್ಯಾಕ್ಸೇಶನ್‌ಐV, ಫೈನಾನ್ಶಿಯಲ್‌ ಮ್ಯಾನೇಜ್‌ ಮೆಂಟ್‌ ಐಐ, ಫೈನಾನ್ಶಿಯಲ್‌ ಅಕೌಂಟಿಂಗ್‌ Vಐ ಹಾಗೂ ಕಾಸ್ಟ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ ಐV- ವಿಷಯಗಳಲ್ಲಿ ಪೂರ್ಣಾಂಕ. 5ನೇ ಸೆಮಿಸ್ಟರ್‌
ನಲ್ಲೂ ಫೈನಾನ್ಸಿಯಲ್‌ ಅಕೌಂಟಿಂಗ್‌ನಲ್ಲಿ 150ಕ್ಕೆ 150 ಅಂಕ. ರ್‍ಯಾಂಕ್‌ ಸ್ವಲ್ಪದರಲ್ಲೇ ತಪ್ಪಿತು. ಆದರೆ ಫೈನಾನ್ಸಿಯಲ್‌ ಅಕೌಂಟಿಂಗ್‌ನ 5 ಮತ್ತು 6ನೇ ಸೆಮಿಸ್ಟರ್‌ಗಳಲ್ಲಿ 300 ಕ್ಕೆ 300 ಅಂಕ ಗಳಿಸಿದ್ದಕ್ಕೆ ಮಂಗಳೂರು ವಿ.ವಿ.ಯ ಸ್ವರ್ಣ ಪದಕ ಸಿಗಲಿದೆ.

 
ಹಲವರ ಸಹಕಾರ
ಅಕ್ಷಿತಾಳ ಇದುವರೆಗಿನ ಕಲಿಕೆಗೆ ಕೆಲವು ಸಂಘ ಸಂಸ್ಥೆಗಳಲ್ಲದೆ ನಿವೃತ್ತ ಶಿಕ್ಷಕ ಎನ್‌. ತುಕಾರಾಮ ಶೆಟ್ಟಿಯವರ ಮೂಲಕ ಮುಂಬಯಿಯ ಉದ್ಯಮಿ ಆರ್‌.ಕೆ. ಶೆಟ್ಟಿಯವರು ನೆರವಾಗಿದ್ದಾರೆ. ಅದನ್ನು ಆಕೆ ಮರೆತಿಲ್ಲ. ಕಂಪ್ಯೂಟರ್‌ ಕೋರ್ಸ್‌ ಮಾಡಿರುವ ಈಕೆ ಬ್ಯಾಂಕಿಂಗ್‌ ಪರೀಕ್ಷೆ ತಯಾರಿಯಲ್ಲಿದ್ದಾಳೆ. ಉದ್ಯೋಗ ಗಳಿಸಿ ತಾಯಿಯನ್ನು ಸಲಹುವ ಆಸೆ ಅವಳದ್ದು. 

ಮುಂದಿನ ವಿದ್ಯಾಭ್ಯಾಸ 
ನಡೆಸಲು ಅಸಹಾಯಕ ಳಾಗಿದ್ದೇನೆ. ಬ್ಯಾಂಕಿಂಗ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಉದ್ಯೋಗದ ನಿರೀಕ್ಷೆಯಲ್ಲಿದ್ದೇನೆ. ಅಲ್ಲಿವರೆಗೆ ಸುಮ್ಮನಿರಬಾರದೆಂದು ಹಾಗೂ ಹಣಕ್ಕಾಗಿ ಗೇರು ಬೀಜ ಕಾರ್ಖಾನೆಗೆ ಸೇರಿಕೊಂಡಿದ್ದೇನೆ.
-ಅಕ್ಷಿತಾ ಹೆಗ್ಡೆ

Advertisement

ಕಾಡುವ ಅನಾರೋಗ್ಯ
ಏಳು ವರ್ಷವಿದ್ದಾಗ ಅಕ್ಷಿತಾಗೆ ಕಾಲಿನ ಗಂಟು ತಿರುವಿ ಗಂಟಿನೊಳಗೆ ರಕ್ತ ಸ್ರಾವವಾಗುತ್ತಿದ್ದು, ಹಲವು ಬಾರಿ ಚಿಕಿತ್ಸೆ ನೀಡಲಾಗಿದೆ. ಇಂದಿಗೂ ಬ್ಯಾಂಡೇಜ್‌ ಸುತ್ತಿಕೊಂಡೇ ಓಡಾಡಬೇಕು. ಎರಡು ವರ್ಷಗಳಿಂದ ಕಣ್ಣಿನ ದೃಷ್ಟಿಯ ಸಮಸ್ಯೆಯೂ ಕಾಡತೊಡಗಿದೆ.

— ಸತೀಶ್‌ಚಂದ್ರ ಶೆಟ್ಟಿ ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next