“ಅಕ್ಷಿ’ – ಈ ಚಿತ್ರಕ್ಕೆ ಕಳೆದ ಕಳೆದ ಬಾರಿ ರಾಷ್ಟ್ರಪ್ರಶಸ್ತಿ ಬಂದಿರೋದು ನಿಮಗೆ ನೆನಪಿರಬಹುದು. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟಿ ಸ್ಪರ್ಶ ರೇಖಾ, ನಟ ವಿಜಯ ಸೂರ್ಯ, ಮಿಂಟೋ ಹಾಸ್ಪಿಟಲ್ ನಿರ್ದೇಶಕರಾದ ಡಾ.ಸುಜಾತ ರಾಥೋಡ್ ಸೇರಿದಂತೆ ಇತರರು ಹಾಡುಗಳನ್ನು ಬಿಡುಗಡೆ ಮಾಡಿದರು.
“ಈ ಸಿನಿಮಾ ಮಾಡಲು ನಿಜವಾದ ಪ್ರೇರಣೆ ಡಾ.ರಾಜ್‌ಕುಮಾರ್. ರಾಜ್‌ಕುಮಾರ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಆ ವಿಚಾರ ನನಗೆ ಕುತೂಹಲ ಹುಟ್ಟಿಸಿ. ಅದೇ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ನಮಗೆ ಒಳ್ಳೆಯ ಸಿನಿಮಾ ಮಾಡಬೇಕೆಂಬ ಉದ್ದೇಶವಷ್ಟೇ ಇತ್ತು’ ಎಂಬುದು ಚಿತ್ರತಂಡದ ಮಾತು.
ಇದನ್ನೂ ಓದಿ:ದಾರಿ ಯಾವುದಯ್ಯ ಶಾಲೆಗೆ ? ಶಾಲೆಗೆ ಹೋಗುವ ವಿದ್ಯಾರ್ಥಿಗಳ ನಿತ್ಯ ನರಕಯಾತನೆ
“ನಾನು ಈ ಕಥೆ ಸಿದ್ದಮಾಡಿಕೊಂಡು ಐದು ವರ್ಷಗಳ ಕಾಲ ನಿರ್ಮಾಪಕರಿಗೆ ಹುಡುಕಾಡಿದೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು ಅಂತಾರಲ್ಲ, ಹಾಗೆ ಈಗ ಸಮಯ ಕೂಡಿ ಬಂದಿದೆ. ಸಿನಿಮಾ ಸಿದ್ಧವಾಗಿದೆ. ನನ್ನದು ಚಿಕ್ಕಹಳ್ಳಿ . ಅಲ್ಲಿ ಪೇಪರ್ ಕೂಡ ಸಿಗಲ್ಲ. ನನ್ನ ಚಿತ್ರಕ್ಕೆ ರಾಷ್ಟಪ್ರಶಸ್ತಿ ಬಂದಾಗ, ಎಲ್ಲಾ ಪತ್ರಿಕೆಗಳಲ್ಲಿ ಫೋಟೊ ಬಂದಿತ್ತು. ಅದನ್ನು ನೋಡಲು ನನ್ನ ಅಪ್ಪ ಏಳು ಕಿಲೋಮೀಟರ್ ದೂರದಿಂದ ಪತ್ರಿಕೆಕೊಂಡು, ನೋಡಿ ಸಂತೋಷ ಪಟ್ಟಿದ್ದರು. ನಾನು ಇಲ್ಲಿಯವರೆಗೂ ನನ್ನ ತಾಯಿಗೆ ಒಂದು ಸೀರೆ ಕೂಡ ಕೊಡಿಸಿಲ್ಲ. ಈ ಸಂತಸವೇ ನನ್ನ ಹೆತ್ತವರಿಗೆ ನನ್ನ ಗಿಫ್ಟ್’ ಎನ್ನುತ್ತಾ ಭಾವುಕರಾದರು ನಿರ್ದೇಶಕ ಮನೋಜ್ ಕುಮಾರ್.
ಚಿತ್ರದಲ್ಲಿ ಅಭಿನಯಿಸಿರುವ ಗೋವಿಂದೇಗೌಡ, ಬೇಬಿ ಸೌಮ್ಯ ಪ್ರಭು, ಮಾಸ್ಟರ್ ಮಿಥುನ್, ಇಳಾ ವಿಟ್ಲ ಮುಂತಾದವರು ಸಿನಿಮಾ ಬಗ್ಗೆ ಮಾತನಾಡಿದರು. ಚಿತ್ರವನ್ನು ಶ್ರೀನಿವಾಸ್ ವಿ, ರಮೇಶ್ ಹಾಗೂ ರವಿ ಹೆಚ್. ಎಸ್ ಸೇರಿ ನಿರ್ಮಿಸಿದ್ದಾರೆ.