Advertisement

ಶಾಲೆಗಳಿಗೆ ಬಂತು “ಅಕ್ಷಯ ತರಕಾರಿ ಬುಟ್ಟಿ’

10:27 PM Feb 19, 2020 | mahesh |

ನಗರ : ಶಾಲಾ ಅಕ್ಷರ ದಾಸೋಹದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ತರಕಾರಿ ಸತ್ವ ದೊರಕಿಸುವ ದೃಷ್ಟಿಯಿಂದ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್‌ ರೂಪಿಸಿದ “ಅಕ್ಷಯ ತರಕಾರಿ ಬುಟ್ಟಿ’ ಎಂಬ ವಿನೂತನ ಪ್ರಯೋಗವನ್ನು ಪ್ರಸ್ತುತ ತಾವು ಸೇವೆ ಸಲ್ಲಿಸುತ್ತಿರುವ ಪುತ್ತೂರು ತಾಲೂಕು ವ್ಯಾಪ್ತಿಗೂ ವಿಸ್ತರಿಸಿ ಯಶಸ್ಸು ಕಾಣುತ್ತಿದ್ದಾರೆ.

Advertisement

ಈ ಯೋಜನೆಯನ್ನು ಮಂಗಳೂರು, ಬೆಳ್ತಂಗಡಿಯಲ್ಲಿ ತಾವು ಸೇವೆ ಸಲ್ಲಿಸುತ್ತಿದ್ದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್‌ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದರು. ಅದೇ ಯೋಜನೆಯನ್ನು ಪುತ್ತೂರು ತಾಲೂಕಿನ ಸರಕಾರಿ ಶಾಲೆಗಳಲ್ಲೂ ಆರಂಭಗೊಳಿಸಿದ್ದಾರೆ.

ಪೌಷ್ಟಿಕಾಂಶಯುಕ್ತ ಆಹಾರ
ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಅಕ್ಷರ ದಾಸೋಹದಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ. ವಾರದಲ್ಲಿ ಬೇರೆ ಬೇರೆ ರೀತಿಯ ಕಾಳು, ಸೊಪ್ಪಿನ ಸಾಂಬಾರು ನಿಗದಿಪಡಿಸಲಾಗಿದ್ದರೂ, ಎಲ್ಲವನ್ನು ಮಾರುಕಟ್ಟೆಯಿಂದ ಖರೀದಿಸಿ ತರುವ ತರಕಾರಿಗಳಿವು. ಆದರೆ ಮಕ್ಕಳ ಮನೆಗಳಲ್ಲಿ ಬೆಳೆದ ಪೌಷ್ಟಿಕಾಂಶಯುಕ್ತ ತರಕಾರಿಗಳನ್ನು ಎಲ್ಲ ಮಕ್ಕಳ ಮೂಲಕ ಸ್ವಲ್ಪವೇ ತರಿಸಿ ಒಟ್ಟುಗೂಡಿಸಿ ಪೌಷ್ಟಿಕಾಂಶಗಳನ್ನು ನೀಡುವುದೇ “ಅಕ್ಷಯ ತರಕಾರಿ ಬುಟ್ಟಿ’ ಯೋಜನೆಯ ಉದ್ದೇಶ.

ಹೀಗೆ ಪ್ರಯೋಗ
ಮಕ್ಕಳು, ಸಾರ್ವಜನಿಕರು ಹಾಗೂ ಪೋಷಕರು ಶಾಲೆಗಳಿಗೆ ಅವರು ಬೆಳೆಯುವ ತರಕಾರಿಯನ್ನು ಶಕ್ತಿಯನುಸಾರ ನೀಡಬಹುದು. ಇದು ತರಕಾರಿಗಷ್ಟೆ ಸೀಮತ. ಓರ್ವ ವಿದ್ಯಾರ್ಥಿ ಒಂದು ಬಗೆಯ ತರಕಾರಿ ತಂದರೆ ಇನ್ನೋರ್ವ ವಿದ್ಯಾರ್ಥಿ ಇನ್ನೊಂದು ಬಗೆಯ ತರಕಾರಿ ತರುತ್ತಾರೆ. ಹೀಗೆ ವಿವಿಧ ಬಗೆಯ ತರಕಾರಿಗಳನ್ನು ವಾರದ ಒಂದು ದಿನ ಒಟ್ಟುಗೂಡಿಸಿ ಮಧ್ಯಾಹ್ನದ ಬಿಸಿಯೂಟದಲ್ಲಿ ತರಕಾರಿಯನ್ನೂ ಸೇರಿಸಿದ ಒಂದು ಪದಾರ್ಥ ತಯಾರಿಸಲಾಗುತ್ತದೆ.

 ಶೇ. 75 ಶಾಲೆಗಳಲ್ಲಿ ಪ್ರಗತಿ
ತಾಲೂಕಿನ ಶೇ. 75 ಶಾಲೆ ಗಳಲ್ಲಿ ಅಕ್ಷಯ ತರಕಾರಿ ಬುಟ್ಟಿ ಯೋಜನೆ ಜಾರಿಗೊಳಿಸಿದ್ದೇವೆ. ಮಕ್ಕಳು ಮನೆಯಲ್ಲಿ ಬೆಳೆದ ತರಕಾರಿಗಳ ಪೈಕಿ ಒಂದೊಂದು ತರಕಾರಿ ತರುತ್ತಾರೆ. ಇದಕ್ಕೆ ಒತ್ತಡ ವಿಲ್ಲ. ಇದರಿಂದ ಮಕ್ಕಳಲ್ಲಿ ಅರಿವೂ ಮೂಡುತ್ತದೆ.
– ಸಿ. ಲೋಕೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next