ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾನುವಾರ ಸಂಜೆ ಜಾಮೀಯಾ ಮಿಲ್ಲಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳ ಹಿಂಸಾಚಾರದ ಟ್ವೀಟ್ ಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ “ಲೈಕ್” ಒತ್ತುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಲ್ಲದೇ ಟೀಕೆಗೆ ಗುರಿಯಾದ ಘಟನೆ ನಡೆದಿದೆ.
ಆಗಿದ್ದೇನು?
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮೀಯಾ ಮಿಲ್ಲಿಯಾ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ವೇಳೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ ದಿಲ್ಲಿ ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ಕ್ರಮಕೈಗೊಂಡಿದ್ದರು. ಈ ಟ್ವೀಟ್ ಗೆ ಅಕ್ಷಯ್ ಕುಮಾರ್ ಲೈಕ್ ಒತ್ತಿಬಿಟ್ಟಿದ್ದರು. ಕೂಡಲೇ ತನ್ನ ತಪ್ಪಿನ ಅರಿವಾಗಿದ್ದು, ಅದನ್ನು ಅನ್ ಲೈಕ್ ಮಾಡಿದ್ದರು. ಆದರೆ ಸ್ಕ್ರೀನ್ ಶಾಟ್ ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದವು.
ಜಾಮೀಯಾ ಮಿಲ್ಲಿಯಾ ವಿದ್ಯಾರ್ಥಿಗಳ ಪ್ರತಿಭಟನೆಯ ಟ್ವೀಟ್ ಗೆ ಕಣ್ತಪ್ಪಿನಿಂದಾಗಿ ಲೈಕ್ ಒತ್ತಿ ಬಿಟ್ಟಿದ್ದೆ. ನಾನು ಟ್ವೀಟ್ ಅನ್ನು ಸ್ಕ್ರೋಲ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಲೈಕ್ ಒತ್ತಿದ್ದೆ. ನಂತರ ಕೂಡಲೇ ಅದನ್ನು ಅನ್ ಲೈಕ್ ಮಾಡಿದ್ದು, ಆದರೆ ಯಾವುದೇ ಕಾರಣಕ್ಕೂ ಇಂತಹ ನಡವಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಅಕ್ಷಯ್ ಮರು ಟ್ವೀಟ್ ನಲ್ಲಿ ಸಮಜಾಯಿಷಿ ನೀಡಿದ್ದರು.
ಅಕ್ಷಯ್ ಆಕಸ್ಮಿಕ ಲೈಕ್ ಟ್ರೋಲ್ ಆಗುತ್ತಿದ್ದಂತೆಯೇ, ಅಭಿನಂದನೆಗಳು…ಜಾಮೀಯಾ ಸ್ವಾತಂತ್ರ್ಯ ಜಯಗಳಿಸಿದೆ ಎಂದು ಟ್ವೀಟ್ ಮೂಲಕ ಟ್ವೀಟಿಗರೊಬ್ಬರು ಅಣಕಿಸಿದ್ದರು. ಅಕ್ಷಯ್ ಟ್ವೀಟ್ ಗೆ ಸ್ಪಷ್ಟನೆ ನೀಡಿದ ಅರ್ಧಗಂಟೆಯೊಳಗೆ 1800 ಮರು ಟ್ವೀಟ್ ಆಗಿದ್ದು, 9000 ಲೈಕ್ಸ್ ನೊಂದಿಗೆ ಅಕ್ಷಯ್ ಟ್ರೋಲ್ ಒಳಗಾಗಿದ್ದರು.
ಕಳೆದ ವರ್ಷವಷ್ಟೇ ಕೆನಡಾ ಪ್ರಜೆ ಎಂದು ಹೇಳಿಕೆ ನೀಡುವ ಮೂಲಕ ನಟ ಅಕ್ಷಯ್ ಕುಮಾರ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗೆ ಗ್ರಾಸವಾಗಿದ್ದು, ನಂತರ ತಾನು ಭಾರತೀಯ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿರುವುದಾಗಿ ಸ್ಪಷ್ಟನೆ ನೀಡಿದ್ದರು.