ಮುಂಬೈ: ಹಿಂದಿ ಭಾಷೆ ವಿಚಾರವಾಗಿ ದಕ್ಷಿಣ ಮತ್ತು ಉತ್ತರ ಸಿನಿ ರಂಗದವರ ನಡುವೆ ಉಂಟಾಗಿರುವ ವೈಮನಸ್ಸಿನ ಕುರಿತಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. “ಈ ರೀತಿ ಒಳ ಜಗಳದಿಂದಾಗಿಯೇ ಬ್ರಿಟಿಷರು ನಮ್ಮ ಮೇಲೆ ಆಕ್ರಮಣ ಮಾಡಿ, ಆಳಿದರು’ ಎಂದು ಅವರು ಹೇಳಿದ್ದಾರೆ.
“ಯಾರಾದರೂ ಸಿನಿ ರಂಗದ ವಿಚಾರದಲ್ಲಿ ದಕ್ಷಿಣ-ಉತ್ತರ ಎಂದರೆ ನನಗೆ ಇಷ್ಟವಾಗುವುದಿಲ್ಲ. ನಾವೆಲ್ಲರೂ ಒಂದೇ. ಈ ರೀತಿ ಜಗಳದಿಂದಾಗಿಯೇ ಬ್ರಿಟಿಷರು ನಮ್ಮನ್ನು ಒಡೆದು, ಆಕ್ರಮಣ ಮಾಡಿ, ಆಳಿದರು ಎನ್ನುವುದನ್ನು ಮರೆಯಬಾರದು. ಆದರೆ ಅದರಿಂದ ನಾವಿನ್ನೂ ಪಾಠ ಕಲಿತೇ ಇಲ್ಲ. ನಾವೆಲ್ಲರೂ ಒಂದೇ ಎಂದು ಯಾವಾಗ ಅರ್ಥ ಮಾಡಿಕೊಳ್ಳುತ್ತೇವೋ ಆಗ ಇನ್ನಷ್ಟು ಚೆನ್ನಾಗಿ ಕೆಲಸಗಳಾಗುತ್ತವೆ’ ಎಂದಿದ್ದಾರೆ ಅಕ್ಷಯ್.
ಇದೇ ವಿಚಾರವಾಗಿ ಬಾಲಿವುಡ್‌ನ ಬೇರೆ ಬೇರೆ ನಟ ನಟಿಯರೂ ಮಾತನಾಡಿದ್ದಾರೆ. “ಸಾಮಾನ್ಯ ಭಾಷೆ ಹೊಂದುವ ಬದಲು ಎಲ್ಲರ ಹೃದಯ ಒಂದಾಗಿರಬೇಕು. ಎಲ್ಲ ಭಾಷೆಗೂ ಸೂಕ್ತ ಗೌರವ ಸಿಗಬೇಕು. ಹಿಂದಿ ಬರುವುದಿಲ್ಲ ಎನ್ನುವ ಕಾರಣಕ್ಕೇ ಅವರನ್ನು ಬೇರೆ ರೀತಿಯಲ್ಲಿ ನೋಡಬಾರದು’ ಎಂದಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಆಯುಷ್ಮಾನ್ ಖುರಾನ.
ಕೇನ್ಸ್ ಚಲನಚಿತ್ರೋತ್ಸದವಲ್ಲಿ ಭಾಗಿಯಾಗಿರುವ ನಟಿ ಅದಿತಿ ರಾವ್ ಹೈದರಿ ಕೂಡ ಮಾತನಾಡಿದ್ದು, “ದಕ್ಷಿಣದ ಸಿನಿಮಾ, ಉತ್ತರದ ಸಿನಿಮಾ, ಪ್ರಾದೇಶಿಕ ಸಿನಿಮಾ ಎನ್ನುವ ಬೇಧ ಭಾವ ಇಲ್ಲದೇ ಹೋದರೆ ಮಾತ್ರ ಸಿನಿಮಾ ರಂಗ ಇನ್ನಷ್ಟು ಜನರಿಗೆ ತಲುಪಲು ಸಾಧ್ಯ’ ಎಂದಿದ್ದಾರೆ.
ಕೆಜಿಎಫ್, ಆರ್‌ಆರ್‌ಆರ್, ಪುಷ್ಪ ಸಿನಿಮಾಗಳು ಮಾಡಿರುವ ದಾಖಲೆಗಳ ಬಗ್ಗೆ ಹೆಮ್ಮೆ ಇರುವುದಾಗಿ ಹೇಳಿರುವ ನಿರ್ದೇಶಕ ಕರಣ್ ಜೋಹರ್, “ನಾವು ಒಂದೇ ರಂಗದವರು. ನಮ್ಮ ಮಧ್ಯೆ ಸ್ಪರ್ಧೆಯಿಲ್ಲ’ ಎಂದಿದ್ದಾರೆ.