ಲಂಡನ್ : ದೇಶದ ಜನನಾಯಕರೊಂದಿಗೆ ಪ್ರಜೆಗಳ ಉತ್ತಮ ಸಂಬಂಧವನ್ನ ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಹೊಸ ಬದಲಾವಣೆ ರೂಪಿಸಿದ್ದು, ಐತಿಹಾಸಿಕ ಡೌನಿಂಗ್‌ಸ್ಟ್ರೀಟ್ ಅನ್ನು ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲು ಪ್ರಸ್ತಾಪಿಸಿದ್ದಾರೆ.
ಪ್ರಧಾನಮಂತ್ರಿ ಸೇರಿದಂತೆ ಸರ್ಕಾರದ ಪ್ರಮುಖ ಆಡಳಿತಗಾರರ ಅಧಿಕೃತ ನಿವಾಸ ಹಾಗೂ ಕಚೇರಿಗಳಿರುವ ಪ್ರದೇಶವೇ ಡೌನಿಂಗ್ ಸ್ಟ್ರೀಟ್. ಮಾಜಿ ಮುಖ್ಯಮಂತ್ರಿ ಬೋರಿಸ್ ಜಾನ್ಸನ್ ಅವಧಿಯಲ್ಲಿ ಈ ಪ್ರದೇಶ ಕೇವಲ ಆಡಳಿತಗಾರರಿಗೆ ಅಷ್ಟೇ ಮೀಸಲಾಗಿಸಿದ್ದು, ಸಾಮಾನ್ಯ ಜನರು ಸರ್ಕಾರದ ವಿರುದ್ಧದ ದಂಗೆ ಸಂದರ್ಭದಲ್ಲಷ್ಟೇ ಅಲ್ಲಿ ಜಮಾಯಿಸುತ್ತಿದ್ದರು.
ಹಾಗಾಗಿ ಈ ಪ್ರದೇಶಕ್ಕೆ ದಂಗೆನಿರತ ಪ್ರದೇಶವೆನ್ನುವ ಕಳಂಕವೂ ಇದ್ದು, ಅದನ್ನು ತೊಡೆಯಲು ಅಕ್ಷತಾ ಮೂರ್ತಿ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ಲಂಡನ್‌ನ ನಿಯತಕಾಲಿಕೆಯೊಂದು ಬಣ್ಣಿಸಿದೆ.
ಆಡಳಿತಗಾರರ ನಿವಾಸ ಹಾಗೂ ಕಚೇರಿಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುವುದರಿಂದ ಕಟ್ಟಡದ ಇತಿಹಾಸ, ಮಹತ್ವ ಇದೆಲ್ಲದರ ಬಗ್ಗೆ ಜನರಿಗೆ ಹೆಮ್ಮೆ ಮೂಡುತ್ತದೆ. ದೇಶದ ವೈಭವ ಯುಗದ ಪರಿಚಯವಾಗುವುದರ ಜತೆಗೆ ಈ ಪ್ರದೇಶದ ಪ್ರಾಚೀನ ಇತಿಹಾಸದ ವೈಭವೀಕರಣವನ್ನು ಮತ್ತೆ ಜಗತ್ತಿನ ಮುಂದೆ ತೆರೆದಿಡಲು ಸಾಧ್ಯವಾಗುತ್ತದೆ ಎಂಬುದು ಅಕ್ಷತಾ ಮೂರ್ತಿ ಅವರ ಅಭಿಪ್ರಾಯವೆಂದು ನಿಯತಕಾಲಿಕೆ ಉಲ್ಲೇಖಿಸಿದೆ.
ಒಟ್ಟಾರೆ ಬ್ರಿಟನ್ ಪ್ರಜೆಗಳ ಪಾಲಿಗೆ ರಹಸ್ಯತಾಣವಾಗಿದ್ದ, ದೇಶದ ಆಡಳಿತದ ರೂಪುರೇಷೆಗಳು ಸಿದ್ಧಗೊಳ್ಳುತ್ತಿದ್ದ ಪ್ರದೇಶವೊಂದು ಇನ್ನು ಮುಂದೆ ಸಾರ್ವಜನಿಕರ ಪಾಲಿಗೂ ತೆರೆದುಕೊಳ್ಳಲಿದ್ದು, ರಿಷಿ ಸುನಕ್ ನೇತೃತ್ವದ ಸರ್ಕಾರ ಜನಸ್ನೇಹಿ ಸರ್ಕಾರವೆನ್ನುವಂತ ಭಾವನೆ ಮೂಡಲು ಈ ಬೆಳವಣಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ.