Advertisement
ತರಗತಿಯೊಳಗೆ ಶಿಕ್ಷಣ ನೀಡುವ ಜತೆಗೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಾಗಿ ಶಾಲಾ ಕೈತೋಟ ಮಾಡಿ ತರಕಾರಿ ಬೆಳೆಸುವ ಪ್ರಾತ್ಯಕ್ಷಿಕೆ ನೀಡುವ ಅನೇಕ ಯಶಸ್ವಿ ಶಾಲೆಗಳಿವೆ. ಅಡಿಕೆ ತೋಟ ಬೆಳೆದು ಕೃಷಿ ಪಾಠ ಬೋಧಿಸುವ, ಆದಾಯ ಪಡೆಯುವ, ತರಕಾರಿ ಬೆಳೆದು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿ ಸ್ವಾವಲಂಬಿಯಾಗಿರುವ ಶಾಲೆಗಳನ್ನು ಉದಾಹರಿಸಿ ಮುಂದಕ್ಕೆ ಎಲ್ಲ ಶಾಲೆಗಳು ಇಂತಹ ಮಾದರಿ ಅನುಸರಿಸಲು ಸೂಚಿಸಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಅಂಗಡಿಗಳಿಂದ ತರಕಾರಿ ಕೊಂಡು ತರುವ ಬದಲು, ವಿದ್ಯಾರ್ಥಿಗಳನ್ನೇ ರೈತರನ್ನಾಗಿಸಿ ಶಾಲೆಯಲ್ಲಿಯೇ ತರಕಾರಿ ಬೆಳೆಯುವ ಹಾಗೂ ಕೃಷಿ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಕರಗತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇನ್ನು ಮುಂದೆ ದ.ಕ. ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಕೈತೋಟ ಕಡ್ಡಾಯ. ಶಿಕ್ಷಣ ಇಲಾಖೆ ಮೂಲಕ ಇಂತಹ ವಿಶಿಷ್ಟ ಪ್ರಯೋಗಕ್ಕೆ ದ.ಕ. ಜಿ.ಪಂ. ಮುಂದಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳಿಂದಲೇ ಕೈತೋಟ ನಿರ್ಮಿಸಿದರೆ ಮಕ್ಕಳಿಗೆ ಅನುಭವದ ಪಾಠ ನೀಡಿದಂತಾಗುತ್ತದೆ ಎಂಬುದು ಇದರ ಹಿನ್ನೆಲೆ. ಶಾಲಾ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಆಸಕ್ತಿ ಹುಟ್ಟಿಸುವ ಈ ಕಾರ್ಯ ಈಗಾಗಲೇ ಕೆಲವು ಶಾಲೆಗಳಲ್ಲಿ ನಡೆಯುತ್ತಿದೆ. ದ.ಕ. ಜಿಲ್ಲೆಯ 1,423 ಶಾಲೆ ಗಳ ಪೈಕಿ 401 ಶಾಲೆಗಳು ತರಕಾರಿ ತೋಟಗಳನ್ನು ಮಾಡಿ ಗಮನ ಸೆಳೆದಿವೆ.
Related Articles
ವಿದ್ಯಾರ್ಥಿಗಳಿಗೆ ರಾಸಾಯನಿಕ ಬಳಸದೆ ಪೌಷ್ಟಿಕಾಂಶವುಳ್ಳ ತರಕಾರಿ ನೀಡುವುದರಿಂದ ಮಕ್ಕಳ ಆರೋಗ್ಯ ವರ್ಧನೆಯಾಗುತ್ತದೆ. ಜತೆಗೆ ವೃತ್ತಿ ಕೌಶಲದತ್ತ ಆಕರ್ಷಿಸುವ ನಿಟ್ಟಿನಲ್ಲಿ ಕೈತೋಟ ನಿರ್ಮಿಸಿದರೆ ಒಳಿತು ಎನ್ನುವ ಚಿಂತನೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ಅವರದ್ದಾಗಿದೆ.
Advertisement
ಅಕ್ಷರ ಕೈತೋಟ ನಿರ್ಮಿಸಲು ಪೂರಕ ನೆರವನ್ನು ಜಿ.ಪಂ. ಸಂಬಂಧಪಟ್ಟ ಇಲಾಖೆ ಗಳ ಮೂಲಕ ನೀಡಲಿದೆ. ಸಮಸ್ಯೆಗಳಿದ್ದಲ್ಲಿ ಲಿಖಿತವಾಗಿ ತಿಳಿಸುವಂತೆ ಶಾಲಾ ಶಿಕ್ಷಕರಿಗೆ ಸೂಚಿಸಲಾಗಿದೆ.
ಏನಿದು ಅಕರ ಕೈ ತೋಟ?ಶಿಕ್ಷಣದ ಜತೆಗೆ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆ ಅಕ್ಷರ ದಾಸೋಹ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಅಂಗಡಿಯಿಂದ ಕೊಂಡು ತರುವ ಬದಲು ಶಾಲೆಯಲ್ಲಿಯೇ ಬೆಳೆದು ಅಡುಗೆಗೆ ತಾಜಾ ತರಕಾರಿಗಳನ್ನು ಬಳಸಿಕೊಳ್ಳುವ ಯೋಜನೆಯೇ ಅಕ್ಷರ ಕೈತೋಟ. ಬಂಟ್ವಾಳ ತಾಲೂಕಿನ ಕೆದ್ದಳಿಕೆ, ಮಧ್ವ, ಬೊಳಂತಿಮೊಗರು ಸರಕಾರಿ ಶಾಲೆಗಳಲ್ಲಿ ಅತ್ಯುತ್ತಮವಾದ ಕೈತೋಟ ನಿರ್ಮಿಸಿದ್ದು, ಈ ಶಾಲೆಗಳ ಕೃಷಿ ಸಾಧನೆಯ ಕೈಪಿಡಿಯನ್ನು ಜಿ.ಪಂ.ನ ಅಕ್ಷರ ದಾಸೋಹ ಕಚೇರಿ ಹೊರತಂದಿದೆ. ಇದೇ ಸ್ಫೂರ್ತಿಯಿಂದ ಜಿ.ಪಂ. ಕಾರ್ಯ ನಿರ್ವ ಹಣಾಧಿಕಾರಿ ಅಕ್ಷರ ಕೈತೋಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮಕ್ಕಳಲ್ಲಿ ಆಸಕ್ತಿ
ಈಗಾಗಲೇ ಕೆಲವು ಶಾಲೆಗಳು ಕೈತೋಟ ಮಾಡಿ ಯಶಸ್ವಿಯಾಗಿವೆ. ಈ ವರ್ಷದಿಂದ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಅಕ್ಷರ ಕೈತೋಟ ಮಾಡುವಂತೆ ತಿಳಿಸಲಾಗಿದೆ. ಇದರಿಂದಾಗಿ ತಾಜಾ ಹಾಗೂ ಆರೋಗ್ಯಕರ ಆಹಾರ ಸಿಗುವುದರ ಜತೆಗೆ ಮಕ್ಕಳಿಗೆ ಕೃಷಿ ತೋಟಗಾರಿಕೆಯಲ್ಲಿ ಆಸಕ್ತಿ ಮೂಡುತ್ತದೆ. ಜೀವನ ಶಿಕ್ಷಣದ ಕಲಿಕೆಗೂ ಅವಕಾಶವಾಗುತ್ತದೆ.
- ಡಾ| ಎಂ.ಆರ್. ರವಿ
ಸಿಇಒ, ದ.ಕ. ಜಿ.ಪಂ. ಬಂಟ್ವಾಳ ಮಾದರಿ
ಎಲ್ಲ ಶಾಲೆಗಳು ಕಡ್ಡಾಯವಾಗಿ ಕೈತೋಟ ಬೆಳೆಸಬೇಕು. ಸಾಕಷ್ಟು ಸ್ಥಳ ಇಲ್ಲದ ಶಾಲೆಗಳು ವರಾಂಡದಲ್ಲಿ, ಟೆರೆಸ್‌ನಲ್ಲಿ ಚಟ್ಟಿ ಮೂಲಕವೂ ಬೆಳೆಸಬಹುದು. ತೋಟಗಾರಿಕೆ, ಕೃಷಿ ಇಲಾಖೆ ಮೂಲಕ ತರಕಾರಿ ಬೀಜ ಒದಗಿಸುವ ವ್ಯವಸ್ಥೆ ಆಗಿದೆ. ಶಿಕ್ಷಣ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರೆಟರಿ ಅವರು ರಾಜ್ಯ ಸರಕಾರಕ್ಕೆ ಬರೆದ ಪತ್ರದಲ್ಲಿ ಬಂಟ್ವಾಳವನ್ನು ಮಾದರಿ ಎಂದು ವಿಶೇಷವಾಗಿ ಉಲ್ಲೇಖೀಸಿ ಪತ್ರ ಬರೆದಿದ್ದಾರೆ.
- ಎನ್. ಶಿವಪ್ರಕಾಶ್
ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ