ಕಳೆದ 20 ವರ್ಷಗಳಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸುವ “ಅಕ್ಷರ ದಾಸೋಹ’ ದ ಸಿಬ್ಬಂದಿ ಕನಿಷ್ಠ ವೇತನ ಜಾರಿಯೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹತ್ತಾರು ಸಲ ಪ್ರತಿಭಟನೆ-ಧರಣಿ ನಡೆಸಿದರೂ ಸರ್ಕಾರ ಮಾತ್ರ ಇದುವರೆಗೂ ಅವರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಅಕ್ಷರ ದಾಸೋಹ ಸಿಬ್ಬಂದಿಯಲ್ಲಿ ಶೇ.99ರಷ್ಟು ಮಹಿಳೆಯರೇ ಇರುವುದು ವಿಶೇಷ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ “ಶಕ್ತಿ’ ಯೋಜನೆ ಹಾಗೂ ಮನೆಯೊಡತಿಗೆ ತಿಂಗಳಿಗೆ 2 ಸಾವಿರ ರೂ. ಪಾವತಿಸುವ “ಗೃಹಲಕ್ಷ್ಮಿ’ ಯೋಜನೆಗೆ ಸಾವಿರಾರು ಕೋಟಿ ರೂ.ಗಳನ್ನು ಬೊಕ್ಕಸದಿಂದ ಖರ್ಚು ಮಾಡುವ ಮೂಲಕ ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚೆಚ್ಚು ಮಾತನಾಡುತ್ತಿದೆ. ಆದರೆ ಯಾವುದೇ ಸೇವಾಭದ್ರತೆ ಇಲ್ಲದೆ ಬಹುತೇಕ ಇಡೀ ದಿನ ಶಾಲೆಗಳಲ್ಲಿ ದುಡಿಯುವ ಮಹಿಳೆಯರ ಕೈಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ.
ಅಕ್ಷರ ದಾಸೋಹ ಯೋಜನೆಯಡಿ ರಾಜ್ಯದಲ್ಲಿ 1.21 ಲಕ್ಷ ಬಿಸಿಯೂಟ ತಯಾರಕ ಸಿಬ್ಬಂದಿ ಇದ್ದಾರೆ. ಅವರಿಗೆ ಸದ್ಯ ಮಾಸಿಕ 3600 ರೂ. ಮಾತ್ರ ನೀಡಲಾಗುತ್ತಿದೆ. ತಿಂಗಳ ವೇತನ ಲೆಕ್ಕ ಹಾಕಿದರೆ ದಿನಕ್ಕೆ 120 ರೂ. ಮಾತ್ರ ಕೂಲಿ ತಗಲುತ್ತದೆ. ರಾಜ್ಯದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗುವ ದಿನದ ಕೂಲಿಯನ್ನೇ 316 ರೂ.ಗಳಿಗೆ ನಿಗದಿಪಡಿಸಲಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 25 ಮಕ್ಕಳಿಗೆ ಒಬ್ಬರು ಮುಖ್ಯ ಅಡುಗೆಯವರನ್ನು ನೇಮಿಸಿಕೊಂಡಿದ್ದು ಇವರಿಗೆ ಮಾಸಿಕ 3700 ರೂ. ವೇತನ ನಿಗದಿಯಾಗಿದ್ದರೆ 25 ಕ್ಕಿಂತ ಅಧಿಕ ಮಕ್ಕಳಿರುವ ಶಾಲೆಗಳಲ್ಲಿ ಮಕ್ಕಳ ಪ್ರಮಾಣಕ್ಕೆ ಅನುಗುಣವಾಗಿ ಕೆಲಸ ಮಾಡುವ ಅಡುಗೆ ಸಹಾಯಕರಿಗೆ 3600 ರೂ. ಮಾಸಿಕ ವೇತನವಿದೆ. ರಾಜ್ಯ ಸರ್ಕಾರವೇ ಕನಿಷ್ಠ ವೇತನವನ್ನು 15 ಸಾವಿರ ರೂ.ಗಳಿಗೆ ನಿಗದಿಪಡಿಸಿರುವಾಗ ಯಾವ ಮಾನದಂಡದ ಆಧಾರದ ಮೇಲೆ ಬಿಸಿಯೂಟದ ಸಿಬ್ಬಂದಿಗೆ ತಿಂಗಳಿಗೆ 3600 ರೂ. ನಿಗದಿಪಡಿಸಿದ್ದಾರೆ ಎಂಬುದು ಯಕ್ಷ ಪ್ರಶ್ನೆ. ಇಷ್ಟೊಂದು ಕನಿಷ್ಠ ಪ್ರಮಾಣದ ವೇತನದಲ್ಲಿ ಕುಟುಂಬ ನಿರ್ವಹಣೆ ಸಾಧ್ಯವೇ? ಎಂಬುದು ಸರ್ಕಾರದ ಗಮನಕ್ಕೆ ಬಂದಿಲ್ಲವೇ?
ಸದ್ಯ ನೀಡುತ್ತಿರುವ ಮಾಸಿಕ 3600 ರೂ. ವೇತನವನ್ನು 6 ಸಾವಿರ ರೂ.ಗಳಗೆ ಹೆಚ್ಚಿಸಬೇಕು, 60 ವರ್ಷದಲ್ಲಿ ನಿವೃತ್ತಿ ಹೊಂದುವವರಿಗೆ 1 ಲಕ್ಷ ರೂ. ಪರಿಹಾರ ನೀಡಬೇಕು, ಅಡುಗೆ ಮಾಡುವ ವೇಳೆ ಯಾವುದೇ ರೀತಿಯ ದುರ್ಘಟನೆ ಸಂಭವಿಸಿದರೆ ಎಫ್ಐಆರ್ ಇಲ್ಲದೆ ಅನುದಾನ ಕೊಡಬೇಕು, ಆರೋಗ್ಯ ವಿಮೆ, ಮರಣ ಪರಿಹಾರ, ಗಾಯಗಳಾದರೆ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂಬುದು ಅಕ್ಷರ ದಾಸೋಹ ಸಿಬ್ಬಂದಿಯ ಪ್ರಮುಖ ಬೇಡಿಕೆಗಳಾಗಿವೆ.
ಈ ಮಧ್ಯೆ ವಿಧಾನಸಭಾ ಚುನಾವಣೆಗೂ ಮುನ್ನ ಬೆಳಗಾವಿಯಲ್ಲಿ ಪಕ್ಷದ 6ನೇ ಗ್ಯಾರಂಟಿಯಾಗಿ ಕಾಂಗ್ರೆಸ್ ನಾಯಕ ಪ್ರಿಯಾಂಕಾ ವಾದ್ರಾ ಅವರು ಬಿಸಿಯೂಟ ತಯಾರಕರ ವೇತನವನ್ನು 6 ಸಾವಿರ ರೂ.ಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದ್ದರು. ಈ ಭರವಸೆ ಈಡೇರಿಸಿಲ್ಲ ಎಂಬುದು ಬಿಸಿಯೂಟ ತಯಾರಕರ ಒಕ್ಕೂಟದ ರಾಜ್ಯ ಸಮಿತಿಯ ಅಸಮಾಧಾನ. ಶಾಲಾ ಮಕ್ಕಳಿಗೆ ಅನ್ನಬಡಿಸುವ ಕೈಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಮಾನವೀಯತೆಯಿಂದ ಯೋಚಿಸಿದರೆ ಸರ್ಕಾರಕ್ಕೆ ಇದು ಯಾವುದೇ ರೀತಿಯ ಆರ್ಥಿಕ ಹೊರೆ ಅಲ್ಲ. ಇಡೀ ದಿನ ಶಾಲೆಯಲ್ಲಿ ಕೆಲಸದಲ್ಲೇ ನಿರತರಾಗಿರುವುದರಿಂದ ಬೇರೆ ಕೆಲಸಕ್ಕೂ ಹೋಗಲು ಸಮಯವಿಲ್ಲ. ಹೀಗಾಗಿ ಇದೊಂದು ರೀತಿ ಪೂರ್ಣಾವಧಿ ಕೆಲಸವಾಗಿದೆ. ಬಿಸಿಯೂಟ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಸರ್ಕಾರ ಪರಿಗಣಿಸಿದರೂ ಇತರೆ ನೌಕರರಿಗೆ ಸಿಗುತ್ತಿರುವ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಆಗುತ್ತಿರುವ ಅನಗತ್ಯ ಹಾಗೂ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರೆ ಈ ಸಿಬ್ಬಂದಿಯ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ.