ಬ್ರಿಟನ್‌ನ ನಿಯೋಜಿತ ಪ್ರಧಾನಿಯಾಗಿರುವ ರಿಷಿ ಸುನಕ್ ಮದುವೆಯಾದದ್ದು ಮಾಹಿತಿತಂತ್ರ ಜ್ಞಾನ ಸಂಸ್ಥೆ ಇನ್ಫೋಸಿಸ್‌ನ ಸಂಸ್ಥಾಪಕ ಡಾ| ಎನ್.ಆರ್.ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ. ಅವರಿಬ್ಬರ ನಡುವೆ ಪರಿಚಯ ಆಗಿ, ಮದುವೆ ಹೇಗೆ ಆಯಿತು ಎಂಬ ಬಗ್ಗೆ ಈಗ ಕುತೂಹಲ.
ಇಷ್ಟು ಮಾತ್ರವಲ್ಲ ಕರ್ನಾಟಕದ ಅಳಿ ಯನಾಗಿರುವ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಬ್ರಿಟನ್ ಪ್ರಧಾನಿ ನಿವಾಸ ಪ್ರವೇಶ ಮಾಡಲಿರುವ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಲಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ಡಾ| ಎನ್.ಆರ್. ನಾರಾಯಣ ಮೂರ್ತಿ- ಸುಧಾಮೂರ್ತಿ ದಂಪತಿಯ ಮಗಳಾದ ಅಕ್ಷತಾ ಅಮೆರಿಕದ ಕ್ಯಾಲಿಫೋರ್ನಿಯಾದ ವಿವಿ ಯಲ್ಲಿ ಎಂಬಿಎ ಕಲಿಯಲು ಹೋಗಿದ್ದರು. ಆಗ ಅಲ್ಲಿಯೇ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಪಡೆದು ಉನ್ನತ ವ್ಯಾಸಂಗ ಮಾಡುತ್ತಿದ್ದ ರಿಷಿ ಸುನಕ್ ಅವರ ಪರಿಚಯವಾಗಿತ್ತು. ಕ್ರಮೇಣ ಅದು ಗೆಳೆತನವಾಗಿ, ಪ್ರೇಮಕ್ಕೆ ತಿರುಗಿತು. ಎರಡೂ ಕುಟುಂಬಗಳು ಮಾತುಕತೆ ನಡೆಸಿ, 2009ರಲ್ಲಿ ಇಬ್ಬರ ವಿವಾಹವನ್ನು ನೆರವೇರಿತ್ತು.
ಬೆಂಗಳೂರಿನಲ್ಲಿ ನಡೆದಿದ್ದ ಅದ್ದೂರಿ ಮದುವೆಯಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ಹಲವು ಖ್ಯಾತನಾಮರು ಪಾಲ್ಗೊಂಡಿದ್ದರು.
ಹಲವು ಸಂದರ್ಭಗಳಲ್ಲಿ ರಿಷಿ ಸುನಕ್ ಅವರು ಮಾವ ಡಾ| ಎನ್.ಆರ್.ನಾರಾಯಣ ಮೂರ್ತಿ ಮತ್ತು ಅತ್ತೆ ಸುಧಾ ಮೂರ್ತಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಜತೆಗೆ ಪತ್ನಿಯ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ರಿಷಿ ಸುನಕ್ ಆಡಿದ್ದರು. ಇಬ್ಬರ ನಡುವೆ ಭಾರೀ ವ್ಯತ್ಯಾಸಗಳು ಇವೆ. ಹೀಗಿದ್ದರೂ ನಾವಿಬ್ಬರೂ ಆದರ್ಶ ದಂಪತಿಯಂತೆ ಬಾಳುವೆ ನಡೆಸುತ್ತಿದ್ದೇವೆ ಎಂದು ನಿಯೋಜಿತ ಪ್ರಧಾನಿ ರಿಷಿ ಸುನಕ್ ಹಲವು ಸಂದರ್ಭಗಳಲ್ಲಿ ಹೇಳಿದ್ದರು.