Advertisement
ತೆರೆದ ಬಾವಿಗಳನ್ನು ನಿರ್ಮಿಸುತ್ತಿದ್ದ ಸ್ಥಳಗಳಲ್ಲಿ ಕೊಳವೆಬಾವಿ ಕೊರೆಯಲಾರಂಭಿಸಿದ ಬಳಿಕ ಅಂತರ್ಜಲ ಕುಸಿಯಿತು. ಈಗ ನೂರಾರು ಕಿ.ಮೀ. ದೂರದಿಂದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಸಲು ಕೋಟ್ಯಂತರ ರೂ. ವೆಚ್ಚದ ಯೋಜನೆ ಅನುಷ್ಠಾನಕ್ಕೆ ತರಲು ಭಾರೀ ಉತ್ಸಾಹ ಕಂಡುಬರುತ್ತಿದೆ. ಕೆಲವು ಬಾರಿ ಇಂತಹ ಬೃಹತ್ ಯೋಜನೆಗಳು ಐಎಂಎಫ್, ಎಡಿಬಿಯಂತಹ ಖಾಸಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸಾಲದ ಮೊತ್ತದಿಂದ ಜಾರಿಗೊಳ್ಳುತ್ತದೆ. ಈ ಸಾಲಕ್ಕೂ ಜನರೇ ತಲೆ ಕೊಡಬೇಕಾಗುವುದು ಎಂದು ಜನರಿಗೆ ಮಾತ್ರ ಗೊತ್ತಿರುವುದಿಲ್ಲ,
Related Articles
ಪ್ರಕೃತಿಯ ಸಂಪನ್ಮೂಲವನ್ನು ಮನುಷ್ಯ ಜಾತಿ ಇರುವವರೆಗೆ ಉಪಯೋಗಿಸಲೇಬೇಕು. ಆದರೆ ಸಂಪನ್ಮೂಲವನ್ನು ಮಿತಿಯಲ್ಲಿ ಬಳಸುವಂತೆ ಕಣ್ಗಾವಲು ಬೇಕಷ್ಟೆ. ಇಷ್ಟೊಂದು ಎಂಜಿನಿಯರಿಂಗ್ ತಜ್ಞರು, ನೀರಾವರಿ ತಜ್ಞರು, ಆಡಳಿತ ತಜ್ಞರು ಇರುವಾಗಲೇ ಯದ್ವಾತದ್ವಾ ಕೊಳವೆ ಬಾವಿ ಕೊರೆದ ಪರಿಣಾಮ ಅಂತರ್ಜಲ ಕುಸಿತ ಉಂಟಾಯಿತು. ಈ ಕುಸಿತಕ್ಕೆ ತಾವು ಹೊಣೆ ಎಂಬುದನ್ನು ಕಾರಣರಾದವರು ಯಾರೂ ಒಪ್ಪಿಕೊಳ್ಳದೆ ಇನ್ನೊಂದು ಯೋಜನೆಯನ್ನು ಬಣ್ಣಬಣ್ಣದ ಶಬ್ದಗಳಲ್ಲಿ ವಿವರಿಸಿ ಜನರನ್ನು ದಿನದಿನವೂ ಮೂರ್ಖರಾಗಿಸುತ್ತಿದ್ದಾರೆ.
Advertisement
ಸಂಪನ್ಮೂಲದ ನವೀಕರಣಸಂಪನ್ಮೂಲ ಬಳಕೆ ಜತೆಗೆ ನವೀಕರಣದ ಚಿಂತನೆ ಇರಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿಯೂ ಬೃಹತ್ ಕೆರೆ ನಿರ್ಮಾಣ, ಮಳೆ ನೀರು ಕೊಯ್ಲು ಅನುಷ್ಠಾನಕ್ಕೆ ಸಬ್ಸಿಡಿ ಕೊಟ್ಟರೆ ಸರಕಾರಕ್ಕೆ ನಷ್ಟವೇನಿಲ್ಲ, ಇಷ್ಟು ಜನರ ನೀರಿನ ಬವಣೆಗೆ ಸರಕಾರ ತಲೆಕೆಡಿಸಿಕೊಳ್ಳುವುದು ತಪ್ಪುತ್ತದೆಯಲ್ಲವೆ? ಸಬ್ಸಿಡಿ ಕೊಟ್ಟದ್ದಕ್ಕಿಂತ ಹೆಚ್ಚು ಆಸ್ತಿಯ ಮೇಲೆ ಫಲಾನುಭವಿ ಹೂಡಿಕೆ ಮಾಡುತ್ತಾನೆ. ಇದು ಕೂಡ ಒಟ್ಟು ಸಂಪತ್ತು ಏರಿಕೆಗೆ ಕಾರಣವಾಗುತ್ತದೆ. ಯಾರಿಗೆ ಸ್ವಂತ ನೀರಿನ ಸಂಪನ್ಮೂಲ ಇಲ್ಲವೋ ಅವರಿಗೆ ಮಾತ್ರ ನೀರು ಕೊಡುವ ಜವಾಬ್ದಾರಿಯನ್ನು ಸರಕಾರ ವಹಿಸಿಕೊಂಡರೆ ಕಷ್ಟವಾಗುವುದಿಲ್ಲ. ಅಕ್ರಮ-ಸಕ್ರಮದ ವ್ಯಾಖ್ಯಾನ
ನೂರಾರು, ಸಾವಿರಾರು ಕೋಟಿ ರೂ. ಯೋಜನೆ ರೂಪಿಸಿ ಅದರ ಅರ್ಧಾಂಶ ಮೊತ್ತ ಕೆಲವೇ ಜನರ ಕಿಸೆಗೆ ಹೋದರೆ ಅಕ್ರಮ ಸಂಪತ್ತಾಗುತ್ತದೆ. ಇದೇ ಹಣ ಸಾವಿರಾರು ಜನರಿಗೆ ಕಾನೂನುಬದ್ಧವಾಗಿ ಹಂಚಿಕೆಯಾದಲ್ಲಿ ಸಕ್ರಮವಾಗುತ್ತದೆ. ಭ್ರಷ್ಟಾಚಾರಕ್ಕೂ ಪ್ರಾಮಾಣಿಕತೆ- ಪಾರದರ್ಶಕತೆಗೂ ಇಷ್ಟೆ ಸರಳ (ಒಂದಕ್ಷರ) ವ್ಯತ್ಯಾಸ. ಇನ್ನೊಬ್ಬರಿಗೆ ಸೇರಬೇಕಾದ ಸಂಪತ್ತು ಒಬ್ಬನಲ್ಲಿ ಕೇಂದ್ರೀಕರಣವಾದರೆ ಅಕ್ರಮ, ಅಪರಾಧ. ಯಾರಿಗೆ ಸೇರಬೇಕೋ ಅಂದರೆ ಹೆಚ್ಚು ಹೆಚ್ಚು ಜನರಿಗೆ ತಲುಪಿದರೆ ಅಕ್ರಮವಲ್ಲ. ಇಷ್ಟು ಚಿಂತನೆ ಶಾಸನ ರೂಪಿಸುವ ಶಾಸಕರಿಗೆ ಹೊಳೆಯಬೇಕಷ್ಟೆ. ಆದರೆ ಐಎಂಎಫ್, ಎಡಿಬಿಯಂತಹ ಅಂತಾರಾಷ್ಟ್ರೀಯ ಕಬಂಧಬಾಹುಗಳು ಪ್ರಧಾನಿ/ಅಧ್ಯಕ್ಷನನ್ನೂ ಸೇರಿಸಿ ಬಲೆ ಬೀಸುವಾಗ ಒಂದು ಹಂತದಲ್ಲಿ ನಮ್ಮನ್ನಾಳುವವರಿಗೂ ಯಾವ ಕಿಮ್ಮತ್ತು ಇಲ್ಲ ಎಂದರ್ಥವಾಗುತ್ತದೆ. 24ಗಿ7 ನೀರು, 24ಗಿ7 ವಿದ್ಯುತ್ ಘೋಷಣೆಯಲ್ಲಿ ಮಾತ್ರ ಇರುತ್ತದೆ. ಏಕೆಂದರೆ ಇದನ್ನು ಮುಂದಿನ ದಿನಗಳಿಗೆ ಅನ್ವಯಗೊಳಿಸಿ ಹೇಳುವುದು. ನಿನ್ನೆಯೂ ನಾಳೆಗೆ ಅನ್ವಯಿಸಿ ಹೇಳಿದ್ದೇವೆ, ನಾಳೆಯೂ ನಾಡಿದ್ದಿಗೆ ಅನ್ವಯಿಸಿ ಹೇಳುತ್ತೇವೆ. ದುಂಬಾಲು ಬೀಳಿಸಿಕೊಳ್ಳುವ ತಂತ್ರ
ಅಂತಾರಾಷ್ಟ್ರೀಯ ಮಟ್ಟದಿಂದ ಹಿಡಿದು ಗ್ರಾಮ ಸ್ತರದ ಕೊನೆಯ ವ್ಯಕ್ತಿಗಳವರೆಗೂ ಒಬ್ಬರು ತಮಗಿಂತ ಮೇಲಿನ ಇನ್ನೊಬ್ಬರಿಗೆ ದುಂಬಾಲು ಬೀಳುವಂತೆ ಮಾಡುವ ತಂತ್ರಗಾರಿಕೆ ಗೋಚರಿಸುತ್ತದೆ. ದುಂಬಾಲು ಬೀಳುವುದು ಸ್ವಾಭಿಮಾನಕ್ಕೆ ಧಕ್ಕೆ ತರುವುದಿಲ್ಲ. ಏಕೆಂದರೆ ಒಬ್ಬರಿಗೆ ದುಂಬಾಲು ಬಿದ್ದರೇನು? ಅವರಿಗಿಂತ ಕೆಳಗಿನವರು ಇವರಿಗೆ ದುಂಬಾಲು ಬೀಳುವುದಿಲ್ಲವೆ? ಇದುವೇ ಅವರಿಗೆ ತೃಪ್ತಿ. ಪ್ರತೀ ವರ್ಷವೂ ಶಾಲಾರಂಭವಾಗುವಾಗ ಪಠ್ಯಪುಸ್ತಕ, ಮೀನುಗಾರರಿಗೆ ಸಬ್ಸಿಡಿ ಸೀಮೆ ಎಣ್ಣೆ, ಡೀಸೆಲ್, ಬೇಸಗೆಯಲ್ಲಿ ಕಲ್ಲಿದ್ದಲು, ಮಳೆಗಾಲದಲ್ಲಿ ರಸಗೊಬ್ಬರ ಹೀಗೆ ಒಂದೆರಡಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಕೊರತೆಯಾಗುತ್ತಲೇ ಇರುತ್ತದೆ, ಜನರು ದುಂಬಾಲು ಬೀಳುತ್ತಲೇ ಇರುತ್ತಾರೆ. ಇಂತಹ ವಾತಾವರಣವನ್ನು ಇಂಜಕ್ಟ್ ಮಾಡಲಾಗುತ್ತದೋ ಎಂದು ಭಾಸವಾಗುತ್ತದೆ. ಅಧಿಕಾರಿಶಾಹಿ ಇದಕ್ಕೆ ಒಗ್ಗಿದೆಯೆ? ಇದನ್ನು ಸೃಷ್ಟಿಸುತ್ತದೆಯೆ? ಏನೇ ಆದರೂ ಆಡಳಿತಗಾರರು ಕಾಲಕ್ಕೆ ಸರಿಯಾದ ಭರವಸೆ ಕೊಡುತ್ತಿರುತ್ತಾರೆ. ಇದು ಸುಸ್ಥಿರ ಅಭಿವೃದ್ಧಿಯಂತೂ ಅಲ್ಲವೇ ಅಲ್ಲ. ಲಾಗಾಯ್ತಿನಿಂದ ನಡೆಯುತ್ತಿರುವುದು ಕೊಳ್ಳೆಬಾಕತನ. -ಮಟಪಾಡಿ ಕುಮಾರಸ್ವಾಮಿ