ಅಕ್ಕಿಆಲೂರು: ಇಲ್ಲಿನ ಕುಮಾರ ನಗರದ 6 ವರ್ಷದ ಪುಟಾಣಿ ವಚನಾ ಚಿಲ್ಲೂರಮಠ ತನ್ನ ಕೈಬರಹದಿಂದ ಕಡ್ಡಾಯ ಮತದಾನ ಕುರಿತು ಕರಪತ್ರ ಬರೆದು, ಮತದಾನ ಜಾಗೃತಿಗೆ ಮುಂದಾಗುವ ಮೂಲಕ ಈ ಭಾಗದ ಜನತೆಯ ಪ್ರಶಂಸೆಗೆ ಪಾತ್ರರಾಗಿದ್ದಾಳೆ.
ಡೊಳ್ಳೇಶ್ವರ ಸರ್ಕಾರಿ ಶಾಲೆ ಶಿಕ್ಷಕ ಶಿವಬಸಯ್ಯ ಮತ್ತು ಅರ್ಪಣಾ ಚಿಲ್ಲೂರಮಠ ದಂಪತಿ ಪುತ್ರಿಯಾದ ವಚನಾ ಸ್ಥಳೀಯ ಜ್ಞಾನಭಾರತಿ ಕಾನ್ವೆಂಟ್ ಮಾದರಿ ಶಾಲೆಯಲ್ಲಿ ಯುಕೆಜಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
ಮತದಾನ ಎಂಬುದು ರಾಷ್ಟ್ರಪ್ರಜ್ಞೆ ಅನಾವರಣ ಮಾಡಲು ಇರುವ ಸುವರ್ಣ ವೇದಿಕೆ. ಮತದಾನ ಮಾಡದ ಯಾವ ಒಬ್ಬ ವ್ಯಕ್ತಿಗೂ ಸರ್ಕಾರದ ಸವಲತ್ತು ಪಡೆಯುವ ನೈತಿಕ ಹಕ್ಕಿಲ್ಲ. ನನ್ನ ಒಂದು ಮತ ಚಲಾವಣೆಯಾಗದಿದ್ದರೆ ನಡೆಯುತ್ತೆ ಎಂಬ ಬೇಜವಾಬ್ದಾರಿಯಿಂದ ರಜೆಗೆ ತೆರಳದಿರಿ, ಒಂದು ಮತ ದೇಶದ ಭವಿಷ್ಯ ನಿರ್ಧರಿಸುವ ಸಾಮರ್ಥ್ಯ ಹೊಂದಿದೆ ಇತ್ಯಾದಿ ಘೋಷಣೆಗಳೊಂದಿಗೆ ಮಾರುಕಟ್ಟೆ, ಧಾರ್ಮಿಕ ಸಭೆ ಸಮಾರಂಭ, ಶಾಲಾ-ಕಾಲೇಜುಗಳಿಗೆ ತೆರಳುವ ವಚನಾ ಮತದಾನದ ಮಹತ್ವ ಸಾರುತ್ತಿದ್ದಾಳೆ.
ವಚನಾಳ ಈ ನಿಸ್ವಾರ್ಥ ಸೇವೆಗೆ ಜಿಲ್ಲಾ ಚುನಾವಣಾಧಿ ಕಾರಿ ಕೃಷ್ಣಾ ಬಾಜಪೇಯಿ, ಜಿಪಂ ಸಿಇಒ ಕೆ. ಲೀಲಾವತಿ, ಹುಕ್ಕೇರಿಮಠದ ಸದಾಶಿವ ಶ್ರೀಗಳು, ವಿರಕ್ತಮಠದ ಶಿವಬಸವ ಶ್ರೀಗಳು, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರವೀಣಕುಮಾರ ಅಪ್ಪಾಜಿ