ಅಕ್ಕಿಆಲೂರು: ಧರ್ಮಾಚರಣೆಗಳು, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ಇಲ್ಲದಿದ್ದರೆ ಜಗತ್ತಿನ ಸಂಸಾರ ಕಹಿಯಾಗಿರುತ್ತಿತ್ತು. ನಾಡಿನ ಮಠಮಾನ್ಯಗಳು ಜಗತ್ತನ್ನು ಬೆಳಗುವ ಉದ್ದೇಶದಿಂದ ಹತ್ತು ಹಲವು ಕಾರ್ಯಕ್ರಮ ಆಯೋಜಿಸುತ್ತಿವೆಯಾದರೂ ಜನ ಸಂಪರ್ಕದ ಕೊರತೆಯಿಂದ ಮಂಕಾಗುತ್ತಿವೆ ಎಂದು ಹುಬ್ಬಳ್ಳಿಯ ಮೂರು ಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ವಿಷಾದಿಸಿದರು.
ಕೂಡಲ ಗ್ರಾಮದ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ, ಗುರುನಂಜೇಶ್ವರ ಮಠದ ಶ್ರೀ ಗುರುನಂಜೇಶ್ವರ ಶಿವಾಚಾರ್ಯ ಶ್ರೀಗಳ ಜಯಂತ್ಯುತ್ಸವ ಸಮಾರಂಭದಲ್ಲಿ ನಡೆದ ಷಷ್ಠಿಪೂರ್ತಿ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಆಧುನಿಕ ದಿನಗಳಲ್ಲಿ ಕೇವಲ ಮಾಧ್ಯಮಗಳ ದಾಸರಾಗಿ ತಮ್ಮ ಸರ್ವಸ್ವ ಬದಿಗಿಡುತ್ತಿರುವ ಯುವಶಕ್ತಿ ಜಾಗೃತಗೊಂಡು ತಮ್ಮೊಳಗಿರುವ ಅದ್ಭುತ ಶಕ್ತಿ ಅರಿತುಕೊಳ್ಳಬೇಕಿದೆ. ಹಾನಗಲ್ಲ ಕುಮಾರೇಶ್ವರರ ಜೀವನಾದರ್ಶಗಳು, ಅನುಸರಿಸಿದ ತತ್ವಗಳು ನಮ್ಮೆಲ್ಲರ ಬಾಳಿಗೆ ಬೆಳಕು ನೀಡುವ ಶಕ್ತಿ ಹೊಂದಿವೆ. ಲಿಂಗಪೂಜೆಯಲ್ಲಿ ತಮ್ಮನ್ನು ತಾವೇ ಮರೆಯುತ್ತಿದ್ದ ಕುಮಾರ ಶ್ರೀಗಳು ಸಾಧಕರ ಪಾಲಿನ ದೈವತ್ವವಾಗಿದ್ದಾರೆ. ಯುವಶಕ್ತಿ ಈಗಲಾದರೂ ಜಾಗೃತರಾಗಿ ಮಠಮಾನ್ಯಗಳ ಸಾಮಾಜಿಕ, ಧಾರ್ಮಿಕ ಕಾರ್ಯಗಳೊಂದಿಗೆ ಕೈಜೋಡಿಸಬೇಕಿದೆ ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಆಶೀರ್ವಚನ ನೀಡಿ, ಮನುಷ್ಯನ ಆರೋಗ್ಯ ಸ್ಥಿತಿ ಇಂದು ದುಶ್ಚಟಗಳಿಂದಾಗಿ ಹದಗೆಡುತ್ತಿದ್ದು, ದೈಹಿಕವಾಗಿ ಪರಿಪೂರ್ಣತೆ ಸಾಧಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನಸಿಕವಾಗಿ ಮನುಷ್ಯ ಪರಿಪಕ್ವನಾಗಬೇಕಾದರೇ ಮಠಮಾನ್ಯಗಳಲ್ಲಿ ನಡೆಯುವ ಧಾರ್ಮಿಕ, ಆದ್ಯಾತ್ಮಿಕ ಆಚರಣೆಗಳಲ್ಲಿ ತೊಡಗಿಕೊಳ್ಳುವುದು ಮತ್ತು ಶ್ರದ್ಧಾಭಕ್ತಿ ಕೇಂದ್ರಗಳೊಂದಿಗಿನ ಸಂಪರ್ಕ ಅನಿವಾರ್ಯವಾಗಿದೆ ಎಂದರು.
ನೇತೃತ್ವ ವಹಿಸಿದ್ದ ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಶಿಕ್ಷಣದ ಕೊರತೆಯಿಂದಾಗಿ ಬಳಲುತ್ತ ಮೌಡ್ಯತೆಯಲ್ಲಿ ಬದುಕು ಸಾಗಿಸುತ್ತಿರುವ ಯುವಶಕ್ತಿ ಎಚ್ಚೆತ್ತುಕೊಂಡು ನಮ್ಮ ಮುಂದಿನ ಮಹತ್ತರ ಜವಾಬ್ದಾರಿ ಅರಿತುಕೊಳ್ಳಬೇಕಿದೆ ಎಂದರು.
ನಂತರ ಹುಬ್ಬಳ್ಳಿಯ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳಿಗೆ ಷಷ್ಠಿಪೂರ್ತಿಯ ನಿಮಿತ್ತ ವಿಶೇಷ ಗುರುವಂದನೆ ಕಾರ್ಯಕ್ರಮ ನೆರವೇರಿತು. ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಶ್ರೀಗಳು, ಚಿಕ್ಕಹರವಿಯ ಹಿರೇಮಠದ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.