ಉಡುಪಿ: ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯ ಜ.18 ರಂದು ಆರಂಭವಾಗಲಿದ್ದು, ಪರ್ಯಾಯ ಪೀಠಾರೋಹಣ ಮಾಡುವ ದಿನದಿಂದಲೇ ಶ್ರೀಕೃಷ್ಣನ ಎದುರು ಅಖಂಡ ನಾದೋಪಾಸನೆ ಆರಂಭವಾಗಲಿದೆ. ಜ.18ರಿಂದ ಎರಡು ವರ್ಷ ಪೂರ್ಣ ಹಗಲು ರಾತ್ರಿ ತಾಳದ ಸದ್ದು ತಪ್ಪುವುದಿಲ್ಲ.
ಜ.18ರಂದು ಮುಂಜಾವು ಪರ್ಯಾಯ ಮೆರವಣಿಗೆ ಬಂದು ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿದ ಬಳಿಕ ಅಲ್ಲೇ ಎಲ್ಲ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮೂಲಕ ಅಖಂಡ ಭಜನಾ ಸೇವೆಯನ್ನು ಉದ್ಘಾಟಿಸಿ ಮುಂದಿನ ಕಲಾಪಗಳಿಗೆ ತೆರಳುತ್ತಾರೆ. ಆಗಲೇ ಅಖಂಡ ಭಜನಾ ಸೇವೆ ಆರಂಭಗೊಳ್ಳುತ್ತದೆ. ಕನಕಗೋಪುರದ ಬಳಿ ಒಂದು ವೇದಿಕೆಯನ್ನು ನಿರ್ಮಿಸಲಾಗುತ್ತಿದ್ದು ಅಲ್ಲಿ ಅಖಂಡ ಭಜನೆ ನಡೆಯಲಿದೆ. ಪ್ರತಿ ಮೂರು ದಿನಗಳಲ್ಲಿ ಆರು ಭಜನಾ ತಂಡಗಳು ಕಾರ್ಯ ನಿರ್ವಹಿಸಲಿವೆ.
ಇವುಗಳಲ್ಲಿ ಒಂದು ತಂಡ ಎರಡು ಗಂಟೆ ಭಜನೆ ಮಾಡಿದ ಬಳಿಕ ಇನ್ನೊಂದು ತಂಡ, ಬಳಿಕ ಮತ್ತೂಂದು ತಂಡ ಭಜನೆ ಮಾಡಲಿವೆ. ಒಂದು ತಂಡಕ್ಕೆ ನಾಲ್ಕು ಗಂಟೆಗಳ ವಿಶ್ರಾಂತಿ ದೊರಕುತ್ತದೆ. ಆರು ತಂಡಗಳು ಮೂರು ದಿನ ಇಲ್ಲಿರಬೇಕು. ಎಲ್ಲ ಭಜನೆಗಳನ್ನೂ ಕುಳಿತುಕೊಂಡೇ ಮಾಡಲಾಗುವುದು. ಎರಡು ವರ್ಷಗಳಲ್ಲಿ ಒಂದು ಸಾರಿ ಬಂದ ತಂಡ ಇನ್ನೊಮ್ಮೆ ಬರುವುದಿಲ್ಲ. ಈ ಲೆಕ್ಕಾಚಾರದಲ್ಲಿ ಎರಡು ವರ್ಷಕ್ಕೆ 1,440 ಭಜನಾ ತಂಡಗಳ ಅಗತ್ಯವಿದೆ. ಆದರೂ ತಂಡಗಳು ಕೊನೆ ಕ್ಷಣದಲ್ಲಿ ಬರಲು ಅನಾನುಕೂಲವಾದರೆ ಇನ್ನೊಂದು ತಂಡ ಇರಬೇಕಾಗುತ್ತದೆ. ಹೀಗಾಗಿ ಸುಮಾರು 1,800 ಭಜನಾ ತಂಡಗಳು ಬೇಕೆಂದು ಅಂದಾಜಿಸಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಮಂತ್ರಾಲಯ ಮಠದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನಲ್ಲಿ ನೋಂದಾಯಿಸಿದ ಭಜನಾ ಮಂಡಳಿಗಳು ಈ ಸೇವೆಯನ್ನು ನಡೆಸಲಿವೆ. ಎರಡೂ ಕಡೆಯ ನೋಂದಾಯಿತ ಮಂಡಳಿಗಳು ಭಜನೆಯಲ್ಲಿ ತರಬೇತಿ ಪಡೆದಿರುತ್ತವೆ. ಎರಡೂ ಸಂಸ್ಥೆಗಳ ಸಹಕಾರದಲ್ಲಿ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಅಖಂಡ ಭಜನಾ ಸೇವೆ ನಡೆಯಲಿದೆ. ತಿರುಪತಿಯಲ್ಲಿ ಸುಮಾರು 2,500 ಮತ್ತು ಮಂತ್ರಾಲಯದಲ್ಲಿ 800 ತಂಡಗಳಿವೆ. ಇವುಗಳಲ್ಲಿ ಅನುಕೂಲವಾದ 1,800 ತಂಡಗಳು ಉಡುಪಿಗೆ ಬಂದು ಈ ನಾದೋಪಾಸನೆ ಸೇವೆಯನ್ನು ನಡೆಸಲಿವೆ.