ವಿಜಯಪುರ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಿ.19 ರಂದು 13 ಹಾಗೂ 14ನೇ ಘಟಿಕೋತ್ಸವ ನಡೆಯಲಿದೆ. ಘಟಿಕೋತ್ಸವದಲ್ಲಿ ಈ ಬಾರಿ ಮೂವರು ಸಾಧಕಿಯರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ತಿಳಿಸಿದರು.
ಭಾನುವಾರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವದ ವಿವರ ನೀಡಿದ ಅವರು, ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಮುಖ್ಯಸ್ಥೆ-ಸಮಾಜ ಸೇವಕಿ ಡಾ.ಎಸ್.ಜಿ.ಸುಶೀಲಮ್ಮ
ಗುಜರಾತ್‍ನ ಅಹಮದಾಬಾದ್ ಪುನರುತ್ಥಾನ ವಿದ್ಯಾಪೀಠದ ಕುಲಪತಿ, ಶಿಕ್ಷಣ ತಜ್ಞೆ ಇಂದುಮತಿ ಕಾಟದಾರೆ, ಬೀದರ್‍ನ ಗುರುನಾನಕ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ರೇಷ್ಮ ಕೌರ್ ಅವರಿಗೆ ಈ ಬಾರಿ ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರು ಅನುಮತಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 13 ಮತ್ತು 14ನೆಯ ಘಟಿಕೋತ್ಸಗಳನ್ನು ಏಕಕಾಲಕ್ಕೆ ಆಯೋಜಸಲಾಗುತ್ತಿದೆ. ವಿಶ್ವವಿದ್ಯಾಲಯಗಳ ಕುಲಾಧೀಪತಿಗಳೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಡಿ.19 ರಂದು ಮಧ್ಯಾಹ್ನ 12 ಗಂಟೆಗೆ ವಿಶ್ವವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ಘಟಿಕೋತ್ಸವ ಆಯೋಜಿಸಲಾಗಿದೆ.
ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಾಂತಿಶ್ರೀ ಧೂಳಿಪುಡಿ ಪಂಡಿತ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪಾಲ್ಗೊಳ್ಳಲಿದ್ದಾರೆ ಎಂದರು.