Advertisement

ಅಕ್ಕಮಹಾದೇವಿ –ಮಲ್ಲಮ್ಮ ಅನರ್ಘ್ಯ ರತ್ನ

04:38 PM May 16, 2022 | Team Udayavani |

ಗದಗ: ವಚನಗಾರ್ತಿ ಅಕ್ಕಮಹಾದೇವಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ವಿಶ್ವ ಮಹಿಳಾ ಸಮುದಾಯದ ಅನರ್ಘ್ಯ ರತ್ನವಿದ್ದಂತೆ. ಅವರ ಜೀವನವೇ ಒಂದು ಸಂದೇಶವಾಗಿದ್ದು, ಅವರ ತತ್ವ, ಆದರ್ಶಗಳಂತೆ ಜೀವನ ರೂಪಿಸಿಕೊಳ್ಳಬೇಕೆಂದು ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಹೇಳಿದರು.

Advertisement

ಶ್ರೀ ಹೇಮರಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆಯಿಂದ ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮಾಂಬೆ ಜಯಂತ್ಯುತ್ಸವ ಹಾಗೂ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ರಡ್ಡಿ ಯುವ ಚೈತನ್ಯ ಸಮಾವೇಶವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಕ್ಕಮಹಾದೇವಿಯಂತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕೂಡ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಪತಿಯಲ್ಲಿ ಮಲ್ಲಿಕಾರ್ಜುನನ್ನು ಕಂಡು, ಮಹಾಸಾದ್ವಿಯಾಗಿದ್ದಾರೆ. ವ್ಯಸನಿಯಾಗಿದ್ದ ಮೈದುನ ವೇಮನರನ್ನು ತಿದ್ದಿ ತೀಡಿ ಮಹಾಯೋಗಿಯಾಗುವಂತೆ ಪ್ರೇರಣೆಯಾದರು. ಅವರ ಜೀವನ ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದರು.

ಸಮಾಜದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಅನುಕೂಲಕ್ಕಾಗಿ ಯುವ ವೇದಿಕೆ ಮುಂದಿಟ್ಟಿರುವ ಪ್ರಮುಖ ನಾಲ್ಕು ಬೇಡಿಗೆಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ ಅವರು, ರಡ್ಡಿ ಸಮುದಾಯದವರಿಗೆ ಶ್ರೀಮಂತಿಕೆಯೊಂದಿಗೆ ಹೃದಯ ಶ್ರೀಮಂತಿಕೆಯೂ ಹೆಚ್ಚಬೇಕು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಿನ ಹಸ್ತ ಚಾಚಿ ಮುಖ್ಯವಾಹಿನಿಗೆ ತರಬೇಕು. ಹೇಮರೆಡ್ಡಿ ಮಲ್ಲಮ್ಮನವರ ಉದಾತ್ತ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಹಿಂದೂ ಧರ್ಮ ಜನ ಸಮೂಹದಿಂದಲೇ ಬೆಳೆದು ಬಂದ ಸಂಸ್ಕೃತಿ. ಉಪನಿಷತ್‌, ಭಗವದ್ಗೀತೆ, ವೇದಗಳು, ಶಿವಪುರಾಣ ಸೇರಿದಂತೆ ಅನೇಕ ಪುರಾಣಗಳು ಹಿಂದೂ ಧರ್ಮ ನೆಲೆಯಾಗಿವೆ. ಕಾಲಾನುಕ್ರಮದಲ್ಲಿ ಬಂದ ಧರ್ಮ ಚಿಂತಕರು, ದಾರ್ಶನಿಕರ ವಿಚಾರಧಾರೆಗಳ ಮೂಲಕ ಮುಂದುವರಿದಿದೆ. ಶೈವ ಸಿದ್ಧಾಂತದಲ್ಲಿ ಜಾತಿ ವ್ಯವಸ್ಥೆಯ ಸಂಕೋಲೆಗಳಿಂದ ಮುಕ್ತಗೊಳಿಸಿ, ಮಾನವ ಧರ್ಮಕ್ಕೆ ಜಯವಾಗಲಿ ಎಂಬುದೇ ಮೂಲ ಧ್ಯೇಯ. ಸಿದ್ಧಾಂತ ಶಿಖಾಮಣಿಯೂ ಅದನ್ನೇ ಬೋಧಿಸಿದೆ. ಉತ್ತಮ ಗೃಹಿಣಿಯಾಗಿ ನಡೆದುಕೊಂಡಿದ್ದರಿಂದ ಹೇಮರೆಡ್ಡಿ ಮಲ್ಲಮ್ಮ ಅವರನ್ನು ಶಿವಶರಣೆ ಎಂಬ ಗೌರವದ ಸ್ಥಾನ ನೀಡಲಾಗಿದೆ. ಶ್ರೀಶೈಲದ ಮಹಾದ್ವಾರದಲ್ಲಿ ಒಂದು ಭಾಗದಲ್ಲಿ ಅಕ್ಕಮಹಾದೇವಿ ಹಾಗೂ ಮತ್ತೂಂದು ಭಾಗದಲ್ಲಿ ಹೇಮರೆಡ್ಡಿ ಮಲ್ಲಮನವರ ಚಿತ್ರದ ಕೆತ್ತನೆಯಿದೆ. ಅಕ್ಕಮಹಾದೇವಿ, ಹೇಮರೆಡ್ಡಿ ಇಬ್ಬರೂ ಸಮಾನರು ಎಂದು ಹೇಳಿದರು.

ಇಂತಹ ವಿಚಾರ ಸಭೆಗಳಲ್ಲಿ ಕೇವಲ ರಾಜಕಾರಣಿಗಳಿಗೆ ಒತ್ತು ನೀಡದೇ, ವೈದ್ಯರು, ಸಮಾಜದ ಸೇವಕರಿಗೂ ಆದ್ಯತೆ ನೀಡಬೇಕು. ಆ ಮೂಲಕ ಸಮಾಜದ ಅಭಿವೃದ್ಧಿ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಏಳ್ಗೆಗೆ ಎಲ್ಲರೂ ಶ್ರಮಿಸಬೇಕೆಂದು ಸಲಹೆ ನೀಡಿದರು.

ಮಾಜಿ ಶಾಸಕ ಜಿ.ಎಸ್‌.ಪಾಟೀಲ ಮಾತನಾಡಿ, ಸೂರ್ಯ, ಚಂದ್ರರು ಇರುವವರೆಗೂ ಸಮಾಜಕ್ಕೆ ಅನ್ನದ ಕೊರತೆಯಾಗಬಾರದು ಎಂದು ಶಿವನಿಂದ ವರ ಪಡೆದ ಮಹಾ ತಾಯಿ ಮಲ್ಲಮ್ಮ. ಶ್ರೀಮಂತಿಕೆ ಎಂದರೆ ಹಣ, ಚಿನ್ನವಲ್ಲ. ಪರಸ್ಪರ ಪ್ರೀತಿ, ಗೌರವದಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಎಲ್ಲಾ ಸಮುದಾಯಗಳೊಂದಿಗೆ ಸಹಬಾಳ್ವೆಯಿಂದ ಬದುಕುವಂತೆ ಮಲ್ಲಮ್ಮ ಬೋಧಿ ಸಿದರು. ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರೆಡ್ಡಿ ಮಲ್ಲಮ್ಮನವರು ಮೋಕ್ಷದ ಮಾರ್ಗ ತೋರಿದ ಮಹಾಸಾದ್ವಿ ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಬೇಕೆಂದು ಹೇಳಿದರು.

ಮಾಜಿ ಸಂಸದ ಆರ್‌.ಎಸ್‌.ಪಾಟೀಲ ಮಾತನಾಡಿ, ಅನೇಕ ಕ್ಷೇತ್ರದಲ್ಲಿ ರಡ್ಡಿ ಸಮುದಾಯ ಬೆಳೆದಿದ್ದರೂ, ಮಕ್ಕಳ ಶೈಕ್ಷಣಿಕ ಮೀಸಲಾತಿಗೆ ಚಿಂತನೆ ನಡೆಸಬೇಕಿದೆ. ಸಮಾಜದ ಅಭಿವೃದ್ಧಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಏಳ್ಗೆಗೆ ಶ್ರಮಿಸಬೇಕಿದೆ ಎಂದರು.

ಶ್ರೀಶೈಲ ಪೀಠದ ಜಗದ್ಗುರು ಡಾ|ಚನ್ನಸಿದ್ದರಾಮ ಪಂಡಿತರಾದ್ಯ ಭಗವಾತ್ಪಾದರು ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಮೇಲೆ ಮಾಜಿ ಸಚಿವ ಬಿ.ಆರ್‌.ಯಾವಗಲ್ಲ, ಎಸ್‌.ಆರ್‌.ಪಾಟೀಲ, ರವಿ ಮೂಲಿಮನಿ, ಕುಮಾರ ಗಡಗಿ, ರಮೇಶಗೌಡ ಕರಕನಗೌಡ್ರ, ಡಾ.ಬಿ.ಎಸ್‌.ಮೇಟಿ, ಆನಂದ ಮುಂಡವಾಡ, ಚಂದ್ರಶೇಖರ ಅರಹುಣಸಿ, ಕೃಷ್ಣಗೌಡ ಪಾಟೀಲ, ಶರಣಪ್ಪ ಮಮ್ಮಟಗೇರಿ, ಅಶೋಕರೆಡ್ಡಿ ಕಬ್ಬೇರಹಳ್ಳಿ, ಬಸವರಾಜ ದಾನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next