Advertisement

ಅಕ್ಕ ಕೇಳವ್ವಾ ಗುರಲಿಂಗಮ್ಮನ ಕಥೆಯಾ…

05:42 PM Oct 29, 2019 | mahesh |

ಬೆನ್ನು ಬಾಗಿದೆ, ಕಣ್ಣು ಮಂಜಾಗಿದೆ, ಕೈ-ಕಾಲಿನಲ್ಲಿ ಶಕ್ತಿ ಕುಂದಿದೆ, ವಯಸ್ಸು ನೂರರ ಗಡಿ ದಾಟಿದೆ. ಆದರೆ, ಉತ್ಸಾಹ, ದೈವಭಕ್ತಿ, ವಚನಗಳ ಮೇಲಿನ ಪ್ರೀತಿ ಇಂದಿಗೂ ಬುಗ್ಗೆಯಾಗಿ ಚಿಮ್ಮುತ್ತಿದೆ. ವಯಸ್ಸಿನ ಇತಿಮಿತಿಯನ್ನು ಮೀರಿ ಅಕ್ಕಮಹಾದೇವಿ ವಚನಗಳನ್ನು ಸಾರುತ್ತಾ, ಶರಣೆಯಂತೆ ಬದುಕುತ್ತಿರುವವರು 113 ವರ್ಷದ, ಮಾತೋಶ್ರೀ ಗುರಲಿಂಗಮ್ಮ ದುಂಡಪ್ಪ ಬಾಳಿ.

Advertisement

ಇಂದಿನ ದಿನಗಳಲ್ಲಿ ವಯಸ್ಸು ನಲವತ್ತಾಗಿದ್ದರೆ, ದೇಹ ಅರವತ್ತರ ಹರೆಯದವರಷ್ಟು ಜರ್ಜರಿತವಾಗಿರುತ್ತದೆ. ಸಣ್ಣ ವಯಸ್ಸಿನಲ್ಲೇ ಬಿ.ಪಿ., ಶುಗರ್‌ ಬಂದು ಸುಸ್ತಾಗಿಬಿಟ್ಟಿದೆ ಈ ಜನಾಂಗ. ಆದರೆ, ಅವರಿಗೆಲ್ಲ ಸೆಡ್ಡು ಹೊಡೆದಂತೆ ಕ್ರಿಯಾಶೀಲರಾಗಿದ್ದಾರೆ ಈ ತಾಯಿ. ವಯೋಸಹಜ ಕಾಯಿಲೆಗಳಾದ ದೃಷ್ಟಿ-ಶ್ರವಣ ದೋಷವೂ ಇವರಿಗಿಲ್ಲ ಎಂಬುದು ವಿಶೇಷ.

ಬರದನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಶಿಕ್ಷಕ, ರೇವಣಸಿದ್ಧಪ್ಪ ಐರಸಂಗ ಅವರ ಮೂರ್ತಿಯನ್ನು ಸ್ಥಾಪಿಸಿ, ದೇವಸ್ಥಾನ ಕಟ್ಟಿಸಿರುವ ಗುರಲಿಂಗಮ್ಮ, ದಿನದ ಎರಡೊತ್ತು ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ, ಚಟಪಟನೆ ಕೆಲಸ ಮಾಡುತ್ತ, ಅಕ್ಕಮಹಾದೇವಿಯ ವಚನಗಳ ಸಾರವನ್ನು ಭಕ್ತಾದಿಗಳಿಗೆ ಬಿತ್ತರಿಸುತ್ತ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ.

ಗುರಲಿಂಗಮ್ಮ ಅವರು ಹುಟ್ಟಿದ್ದು ವಿಜಯಪುರದ ಅಡಕಿಗಲ್ಲಿಯಲ್ಲಿ. 1906ರಲ್ಲಿ ಜನಿಸಿದ ಇವರಿಗೆ ತೊಟ್ಟಿಲಿನಲ್ಲಿ ಇದ್ದಾಗಲೇ ವಿವಾಹವೂ ನಡೆದುಬಿಟ್ಟಿತು. ದುರದೃಷ್ಟಕ್ಕೆ ಇವರಿನ್ನೂ ಚಿಕ್ಕವರಿದ್ದಾಗಲೇ ಗಂಡ ತೀರಿಹೋದರು. ಮುಂದೆ ಅವರು ವಿಜಯಪುರ ತೊರೆದು, ಗಂಡನ ಮನೆಯಾದ ಅಥರ್ಗಾಕ್ಕೆ ಬಂದರು.

ಬಾಲ್ಯದಿಂದಲೂ ಅಕ್ಕಮಹಾದೇವಿ ಮತ್ತು ಬಸವಣ್ಣನ ವಚನಗಳಿಂದ ಪ್ರೇರಿತರಾದ ಗುರಲಿಂಗಮ್ಮ, ಅಥರ್ಗಾದ ತಮ್ಮ ಮನೆಯಲ್ಲಿ ಅಕ್ಕಮಹಾದೇವಿಯ ಮೂರ್ತಿಯನ್ನು ಸ್ಥಾಪಿಸಿ ಮನೆಯನ್ನೇ ಮಠವನ್ನಾಗಿ ಪರಿವರ್ತಿಸಿದರು. ತಮ್ಮ ಇಡೀ ಜೀವನವನ್ನು ವಚನಗಳ ಸಾರವನ್ನು ಬೋಧಿಸುವುದಕ್ಕೆ ಮುಡಿಪಾಗಿಟ್ಟರು.

Advertisement

2002ರಲ್ಲಿ ಮಠ ನಿರ್ಮಾಣವಾಗಿದ್ದು, ಇಲ್ಲಿ ಪ್ರತಿನಿತ್ಯ ಅನ್ನದಾಸೋಹವನ್ನೂ ನಡೆಸಲಾಗುತ್ತದೆ. ನೂರು ವರ್ಷ ದಾಟಿದ್ದರೂ ಗುರಲಿಂಗಮ್ಮ ಚಟುವಟಿಕೆಯಿಂದ ಮಠದ ತುಂಬಾ ಓಡಾಡುತ್ತ ಕೆಲಸ ಮಾಡುವುದೇ ಜನರಿಗೆ ಅಚ್ಚರಿ ಹುಟ್ಟಿಸುತ್ತದೆ. ದವನ ಹುಣ್ಣಿಮೆ ದಿನದಂದು ಅಕ್ಕಮಹಾದೇವಿ ಜಯಂತಿ ಆಚರಿಸಿ, ಎರಡು ದಿನಗಳ ಅದ್ಧೂರಿ ಜಾತ್ರೆಯನ್ನು ಮುಂದೆ ನಿಂತು ನಡೆಸುತ್ತಾರೆ. ಈ ತಾಯಿಯ ಮೂಲಕ, ಅಕ್ಕಮಹಾದೇವಿಯ ವಚನಗಳು ಮತ್ತಷ್ಟು ಜನರನ್ನು ತಲುಪುತ್ತಿವೆ.

-ವಿದ್ಯಾಶ್ರೀ ಗಾಣಿಗೇರ

Advertisement

Udayavani is now on Telegram. Click here to join our channel and stay updated with the latest news.

Next