ತಾಯಿಯ ಬಗ್ಗೆ ಎಷ್ಟು ಬರೆದರೂ ಮುಗಿಯುವುದಿಲ್ಲ. ಬರೆದಷ್ಟೂ ಅಕ್ಷಯವಾಗುತ್ತಾ ಹೋಗುತ್ತಾಳೆ ಅಮ್ಮ. ಹಾಗೆಯೇ ಅಮ್ಮನಂತಹುದೇ ಇನ್ನೊಂದು ತದ್ರೂಪಿ ಹೋಲಿಕೆ ಇರುವ ಇನ್ನೊಂದು ಜೀವವಿದೆ. ಅವಳು ಎರಡನೇ ತಾಯಿಯಾಗುತ್ತಾಳೆ, ಗೆಳತಿಯಾಗುತ್ತಾಳೆ, ಒಮ್ಮೊಮ್ಮೆ ವೈರಿಯೂ ಎನ್ನಿಸಿಬಿಡುತ್ತಾಳೆ, ಮುನಿಸಿಕೊಳ್ಳುತ್ತಾಳೆ, ಮಾತು ಬಿಡುತ್ತಾಳೆ, ಮುದ್ದು ಮಾಡುತ್ತಾಳೆ, ಬುದ್ಧಿವಾದ ಹೇಳುತ್ತಾಳೆ. ಹೌದು ಅವಳೇ ಅಕ್ಕ ಎನ್ನುವ ಇನ್ನೊರ್ವ ಮಾತೃ ಸ್ವರೂಪಿಣಿ.
ಅಕ್ಕ ಅನ್ನುವವಳು ಸ್ವಲ್ಪ ಹೆಚ್ಚು ಪ್ರೀತಿಸುವುದು ತಂಗಿಯರಿಗಿಂತ ತಮ್ಮಂದಿರನ್ನು. ಬಾಲ್ಯದಲ್ಲಿ ಅಕ್ಕ ಅಂದರೆ ತಮ್ಮಂದಿರಿಗೆ ಮೊದಲಿಗೆ ನೆನಪಿಗೆ ಬರುವುದು ಅಪ್ಪನ ರಿಮೋಟ್ ಕಂಟ್ರೋಲ್ ಅಂತ. ಯಾಕೆಂದರೆ ಅಪ್ಪನ ಮುದ್ದಿನ ಮಗಳು ಅಕ್ಕ ಆಗಿರುತ್ತಾಳೆ. ಅಪ್ಪನಿಂದ ಏನೇ ಕೆಲಸವಾಗಬೇಕು ಅಂದರೂ ಅಕ್ಕನ ಹತ್ತಿರ ಅರ್ಜಿ ಎಲ್ಲ ತಮ್ಮಂದಿರು ಹಾಕಿರುತ್ತಾರೆ. ಇನ್ನೂ ಕಾಳಜಿ ಮಾಡೋ ವಿಷಯದಲ್ಲಂತು ಅಮ್ಮನಿಗಿಂತಲೂ ಅಕ್ಕ ಒಂದು ಕೈ ಮೇಲೆ ಇರುತ್ತಾಳೆ. ಅಮ್ಮನಿಗೆ ಗೊತ್ತಾಗದ ರೀತಿಯಲ್ಲಿ ಮಾಡಿಕೊಡುವ ತಿಂಡಿ ತಿನಿಸುಗಳ ರುಚಿನೇ ಬೇರೆ. ಇನ್ನು ತಪ್ಪು ಮಾಡಿ ಸಿಕ್ಕಿಬಿದ್ದಾಗ ತಮ್ಮಂದಿರ ರಕ್ಷಣೆಗೆ ಮೊದಲಿಗೆ ನಿಲ್ಲುವವಳೇ ಅಕ್ಕ.
ಯೌವನದ ಸಂದರ್ಭದಲ್ಲಿ ತಮ್ಮಂದಿರಿಗೆ ಜೀವನದ ಮೌಲ್ಯ, ಜೀವನದ ಪರಿಪಾಠ ಹೇಳಿಕೊಡುವ ಅಕ್ಕನಲ್ಲಿ ಒಂದು ಗುರುವಿನ ವರ್ಚಸ್ಸು ಎಷ್ಟೋ ಬಾರಿ ನೋಡುತ್ತೇವೆ. ಇವಾಗಿನ ಕಾಲಮಾನದ ಎಷ್ಟೋ ಯುವ ತಮ್ಮಂದಿರುಗಳ ಪ್ರೀತಿ-ಪ್ರೇಮ ವಿಷಯಗಳ ಬಗ್ಗೆ ಸಾಂತ್ವನ, ಉಪಯುಕ್ತ ಮಾರ್ಗದರ್ಶನ ನೀಡುವ ದೇವತೆ ಅಕ್ಕ ಆಗಿರುತ್ತಾಳೆ. ರಕ್ಷಾಬಂಧನ ಬಂದರೇ ಅಕ್ಕನ ಹತ್ತಿರ ರಾಖೀ ಕಟ್ಟಿಸಿಕೊಂಡು ಅಕ್ಕನ ಹತ್ತಿರನೇ ಉಡುಗೊರೆ ಪಡೆಯುವಾಗ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ಹೀಗೆಯೇ ಅಕ್ಕ ಗೆಳತಿಯಾಗಿ, ಅಮ್ಮನಾಗಿರುವಾಗಲೇ ಅಕ್ಕನ ಮದುವೆಯ ಮಾತುಗಳು ಶುರುವಾಗುತ್ತದೆ. ಮನೆಯಲ್ಲಿ ಮದುವೆ ಸಂಭ್ರಮವೇನೋ ನಿಜ. ಆದರೆ ಮಾತು ಮಾತಿಗೂ ಅಕ್ಕ ಅಕ್ಕ ಎಂದು ಕರೆಯುತ್ತಿರುವಾಗ ಇನ್ನು ಅವಳು ಇಲ್ಲಿರುವುದಿಲ್ಲ ಎನ್ನುವ ಬೇಸರ ಮನಸಲ್ಲಿ ಮೂಡಿ ಬಿಡುತ್ತದೆ. ತನ್ನೊಂದಿಗೆ ಮಾತು ಸ್ವಲ್ಪ ಕಡಿಮೆ ಮಾಡಿ ಮದುವೆಯಾಗುವವನ ಜತೆ ಜಾಸ್ತಿ ಸಲುಗೆಯಿಂದ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಬಾವನಾಗಿ ಬರುವವನ ಮೇಲೆ ಅಸೂಯೆ ಹಾಗೂ ತನ್ನ ಜಾಗವನ್ನು ಇಂಚಿಂಚಾಗಿ ಆಕ್ರಮಿಸಿಕೊಳ್ಳುವವರ ಬಗೆಗೆ ಈರ್ಶೆ.
ಇಷ್ಟಿದ್ದರೂ ಅಕ್ಕನ ಮದುವೆಯಲ್ಲಿ ಹೀರೊ ತರ ಮೆರೆದಾಟ. ಆಮೇಲೆ ತಬ್ಬಿ ಅತ್ತು ಕಳಿಸಿಕೊಡುವಾಗ ನೋವಾದರೂ ಹೊಸ ಮನೆಯಲ್ಲಿ ಸಂತೋಷವಾಗಿರುತ್ತಾಳಲ್ಲ ಎನ್ನುವ ಭರವಸೆ. ಮದುವೆಯಾದ ಅಕ್ಕ ಮನೆಗೆ ಬರುತ್ತಾಳೆಂದರೆ ಮನೆಯಲ್ಲಿ ಮತ್ತದೇ ಸಂಭ್ರಮ.
ಹೀಗೆ ಹುಟ್ಟಿದಾಗಿನಿಂದ ಕೊನೆಯ ತನಕ ಕೂಡ ತಮ್ಮನನ್ನು ಸ್ವಂತ ಮಗನಂತೆ ಕಾಳಜಿ ಮಾಡುವ ಅಕ್ಕ ಯಾವಾಗಲೂ ಮಾತೃ ಸ್ವರೂಪಿಣಿ.
ಕೊನೆಯಲ್ಲಿ ಅಕ್ಕನಿಗೆ ಒಂದೆರಡು ಸಾಲುಗಳು
ಅಕ್ಕ ಅಂದರೇ ಏನೋ ಹರುಷವೋ….
ನಮ್ಮ ಪಾಲಿಗೆ ಅವಳೇ ದೈವವೋ….
-ಪ್ರಸಾದ್ ಆಚಾರ್ಯ
ಕುಂದಾಪುರ