ಇಸ್ಲಾಮಾಬಾದ್: ಟೂರ್ನಮೆಂಟ್‌ನಲ್ಲಿ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ತಂಡದ ಆಟಗಾರರು ಶಾರ್ಟ್ಸ್ ಧರಿಸಿರುವುದನ್ನು ಪ್ರಶ್ನಿಸಿದ ನಂತರ ಪಾಕಿಸ್ಥಾನಿ ವರದಿಗಾರ ವ್ಯಾಪಕ ಟೀಕೆಗೆ ಗುರಿಯಾಗಿದ್ದಾನೆ.
ಕಠ್ಮಂಡುವಿನಲ್ಲಿ ನಡೆಯುತ್ತಿರುವ ಎಸ್ ಎಎಫ್ ಎಫ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ಥಾನವು ಮಾಲ್ಡೀವ್ಸ್ ಅನ್ನು 7-0 ಗೋಲುಗಳಿಂದ ಸೋಲಿಸಿದ ಬೆನ್ನಲ್ಲೇ ವರದಿಗಾರ ಉಡುಪಿನ ಕುರಿತು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾನೆ.
ಸುದೀರ್ಘ ಅಂತರದ ನಂತರ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಎಂಟು ವರ್ಷಗಳಲ್ಲಿ ಚಾಂಪಿಯನ್‌ಶಿಪ್‌ನಲ್ಲಿ ಪಾಕ್ ತಂಡದ ಮೊದಲ ಗೆಲುವು ಇದಾಗಿದೆ, ಆದರೆ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದ ವರದಿಗಾರ, ಆಟಗಾರ್ತಿಯರ ಸಮವಸ್ತ್ರದತ್ತ ಗಮನ ಹರಿಸಲು ಆದ್ಯತೆ ನೀಡಿದ್ದಾನೆ.
” ಇಸ್ಲಾಮಿಕ್ ರಾಷ್ಟ್ರವಾಗಿರುವ ಪಾಕಿಸ್ಥಾನಕ್ಕೆ ಸೇರಿದವರು, ಈ ಹುಡುಗಿಯರು ಲೆಗ್ಗಿಂಗ್ ಅಲ್ಲ ಶಾರ್ಟ್ಸ್ ಏಕೆ ಧರಿಸುತ್ತಾರೆ ಎಂದು ನಾನು ಕೇಳಲು ಬಯಸುತ್ತೇನೆ,” ಎಂದು ವರದಿಗಾರ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ತಂಡದ ಮ್ಯಾನೇಜರ್ ಮತ್ತು ಇತರ ಅಧಿಕಾರಿಗಳನ್ನು ಕೇಳಿದ್ದಾನೆ.
ಏಳು ಗೋಲುಗಳಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ್ದಕ್ಕಾಗಿ ಬ್ರಿಟಿಷ್-ಪಾಕಿಸ್ಥಾನಿ ಫುಟ್ಬಾಲ್ ಆಟಗಾರ್ತಿ ನಾಡಿಯಾ ಖಾನ್ ಅವರನ್ನು ಶ್ಲಾಘಿಸುವ ವೇಳೆ , ಆಟಗಾರ್ತಿಯರ ಬಟ್ಟೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ಸಾಧನೆಗಳ ಮೇಲೆ ಕೇಂದ್ರೀಕರಿಸದಿದ್ದುದಕ್ಕಾಗಿ ಅನೇಕ ಜನರು ವರದಿಗಾರನ ಮೇಲೆ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.
ರಾಷ್ಟ್ರೀಯ ತಂಡದ ತರಬೇತುದಾರ ಅಡೀಲ್ ರಿಜ್ಕಿ, ಈ ಪ್ರಶ್ನೆಯಿಂದ ಆಶ್ಚರ್ಯಚಕಿತರಾಗಿ, ”ಕ್ರೀಡೆಯಲ್ಲಿ ಪ್ರಗತಿಪರರಾಗಿರಬೇಕು. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ನಾವು ಯಾರನ್ನೂ ತಡೆಯಲು ಪ್ರಯತ್ನಿಸಿಲ್ಲ, ಇದು ನಾವು ನಿಯಂತ್ರಿಸದ ವಿಷಯ” ಎಂದರು.
ವರದಿಗಾರರ ಪ್ರಶ್ನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಟಿವಿ ನಿರೂಪಕ ಮತ್ತು ಆರ್‌ಜೆ ಅನೌಶೆ ಅಶ್ರಫ್, ಸ್ಕ್ವಾಷ್ ಆಟಗಾರ್ತಿ, ನೂರೇನಾ ಶಾಮ್ಸ್ ಮತ್ತು ಇತರರು ಆಟಗಾರರ ಬೆಂಬಲಕ್ಕೆ ಬಂದರು ಮತ್ತು ವರದಿಗಾರನ ಮನಸ್ಥಿತಿಗಾಗಿ ಛೀಮಾರಿ ಹಾಕಿದ್ದಾರೆ.