ಆಗ್ರಾ: ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಸೀಟು ಹಂಚಿಕೆ ಒಪ್ಪಂದವಾದ ಕೆಲವು ದಿನಗಳ ನಂತರ ಅಖಿಲೇಶ್ ಯಾದವ್ ಅವರು ಭಾನುವಾರ ಆಗ್ರಾದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಹಲವು ದಿನಗಳ ಹಿಂದೆ ಅಖಿಲೇಶ್ ಯಾದವ್ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದರು, ಕಾಂಗ್ರೆಸ್ ಜತೆ ಸೀಟು ಹಂಚಿಕೆ ಅಂತಿಮಗೊಂಡ ನಂತರ ಮಾತ್ರ ಭಾಗವಹಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಯಾದವ್ ಅವರನ್ನು ಯಾತ್ರೆಗೆ ಸ್ವಾಗತಿಸಿ”ಇಂದು ಬಹಳ ಸಂತೋಷದ ದಿನ” ಎಂದು ಹೇಳಿದರು. ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರು ಕೈಜೋಡಿಸಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಅಖಿಲೇಶ್ ಯಾದವ್ ಮಾತನಾಡಿ, ”ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಹಾಳಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವುದು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದೇ ದೊಡ್ಡ ಸವಾಲಾಗಿದೆ.ಇಂದು ಒಂದೇ ಒಂದು ಸಂದೇಶವಿದೆ. ‘ಬಿಜೆಪಿ ಹಾಟಾವೋ, ದೇಶ್ ಕೋ ಬಚಾವೋ’ (ಬಿಜೆಪಿಯನ್ನು ತೆಗೆದುಹಾಕಿ, ದೇಶವನ್ನು ಉಳಿಸಿ ಮತ್ತು ಬಿಕ್ಕಟ್ಟನ್ನು ಕೊನೆಗೊಳಿಸಿ)” ಎಂದರು.
ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಸೋಲಿಸಲು ಇಂಡಿಯಾ ಮೈತ್ರಿಕೂಟ ಮತ್ತು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರು(ಪಿಡಿಎ) ಕೆಲಸ ಮಾಡುತ್ತಾರೆ ಎಂದು ಭರವಸೆ ಹೊಂದಿದ್ದೇವೆ ಎಂದರು.