ಬೆಂಗಳೂರು: ಮಾಜಿ ಸಚಿವ ತನ್ವೀರ್ ಸೇಠ್ ಪತ್ರದ ವಿರುದ್ಧ ಕಿಡಿ ಕಾರಿರುವ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ನಮ್ಮ ಮನೆಗೆ ಬೆಂಕಿ ಇಟ್ಟು ಜೈಲಿಗೆ ಹೋಗಿ ಬಂದವರನ್ನು ಬಿಡುಗಡೆ ಮಾಡಿಸುವ ಉದ್ದೇಶದಿಂದ ಈ ಪತ್ರ ಬರೆದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮನೆಗೆ ಬೆಂಕಿ ಇಟ್ಟು ಜೈಲಿಗೆ ಹೋಗಿ ಬಂದ ಮಾಜಿ ಮೇಯರ್ ಸಂಪತ್‌ರಾಜ್, ಜಾಕೀರ್ ಇನ್ನಿತರರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರ ಜತೆಗೆ ಇಂದಿಗೂ ಓಡಾಡಿಕೊಂಡಿದ್ದಾರೆ. ಇದರ ಅರ್ಥವೇನು ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಹಿಂದು-ಮುಸ್ಲಿಮರು ಒಗ್ಗಟ್ಟಾಗಿದ್ದೆವು. ಈ ಪ್ರಕರಣದಿಂದ ಬಿರುಕು ಮೂಡುವಂತೆ ಮಾಡಿದ್ದಾರೆ. ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂಬ ಕಾರಣದಿಂದಲೇ ಈ ಕೃತ್ಯ ಎಸಗಿದವರು ನನ್ನನ್ನು ಗುರಿ ಮಾಡಿ ಟಿಕೆಟ್ ಕೂಡ ತಪ್ಪಿಸಿದರು. ನನ್ನ ಮನೆಗೆ ಬೆಂಕಿ ಬಿದ್ದಾಗಲೇ ಅಮಾಯಕರನ್ನು ಬಿಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಾಗೂ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಮೈಸೂರಿನ ತನ್ವೀರ್ ಸೇಠ್ ಅವರಿಗೂ ಪುಲಕೇಶಿ ನಗರದ ಗಲಭೆಗೂ ಏನು ಸಂಬಂಧ? ಅವರ ಪತ್ರದ ಉದ್ದೇಶವೇನು? ಯಾರನ್ನು ಬಿಡಿಸಲು ಈ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆಗಳು ಮೂಡುವುದಿಲ್ಲವೇ ಎಂದರು.
ನಾನೊಬ್ಬ ದಲಿತ ಶಾಸಕ. ನನಗೆ ಅನ್ಯಾಯ ಆಗಿದೆ. ನನಗೆ ನ್ಯಾಯ ಕೊಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡುತ್ತೇನೆ. ವಕೀಲರ ಮೂಲಕ ನ್ಯಾಯಾಲಯಕ್ಕೂ ಕೋರಿಕೊಳ್ಳುತ್ತೇನೆ. ನಾನಂತೂ ನ್ಯಾಯಾಲಯದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.