ವಾಷಿಂಗ್ಟನ್ : ”ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಸಂಪಾದಕ ಎಂ ಜೆ ಅಕ್‌ಬರ್ ಅವರು ವರ್ಷಗಳ ಹಿಂದೆ ಏಶ್ಯನ್ ಏಜ್ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು” ಎಂದು ಆರೋಪಿಸಿ ಭಾರತೀಯ ಮೂಲದ ಅಮೆರಿಕನ್ ಪತ್ರಕರ್ತೆ, ವಾಷಿಂಗ್ಟನ್ ಪೋಸ್ಟ್ ನಲ್ಲಿ ಬರೆದಿರುವ ಬ್ಲಾಗ್‌ನಲ್ಲಿ ಆರೋಪಿಸಿದ್ದಾರೆ. ಅಕ್‌ಬರ್ ಅವರ ವಕೀಲ ಈ ಆರೋಪಗಳು ಸುಳ್ಳೆಂದು ತಿರಸ್ಕರಿಸಿರುವುದಾಗಿ ವರದಿಯಾಗಿದೆ.
”ಅಕ್‌ಬರ್ ವಿರುದ್ಧ ಈಚೆಗೆ ಬೇರೊಬ್ಬ ಮಹಿಳೆ ಮೀ ಟೂ ಅಭಿಯಾನದಡಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು; ಅದನ್ನು ಕೇಳಿ ನನ್ನ ಮನಸ್ಸು ಹಿಂದಕ್ಕೋಡಿತು. ನಾನು ಏಶ್ಯನ್ ಏಜ್ ಪತ್ರಿಕೆಯಲ್ಲಿ ದುಡಿಯುತ್ತಿದ್ದಾಗ ನಾನು 22 ವರ್ಷ ವಯಸ್ಸಿನವಳಾಗಿದ್ದೆ. ಆಗ ಅಲ್ಲಿ ಹೆಚ್ಚಿನ ನೌಕರರೆಲ್ಲ ಮಹಿಳೆಯರೇ ಆಗಿದ್ದರು” ಎಂದು ಆಕೆ ತನ್ನ ಬ್ಲಾಗ್ ನಲ್ಲಿ ಬರೆದಿದ್ದಾರೆ.
ಮುಂದುವರಿದು ಆಕೆ, “ಅಕ್‌ಬರ್ ಕೈಕೆಳಗೆ ಹೊಸದಿಲ್ಲಿಯಲ್ಲಿ ದುಡಿಯುವುದು ನಮಗೆಲ್ಲ ಭಾರೀ ಪ್ರತಿಷ್ಠೆಯ ಅವಕಾಶವಾಗಿತ್ತು. ಎರಡು ಅತ್ಯುತ್ತಮ ಪುಸ್ತಕಗಳ ಲೇಖಕನಾಗಿ, ಪ್ರಮುಖ ಸಂಪಾದಕನಾಗಿ ಅಕ್‌ಬರ್ ತುಂಬ ಖ್ಯಾತರಾಗಿದ್ದರು. ಆಗ ಅವರು 40ರ ಹರೆಯದವರಾಗಿದ್ದರು. ನಮ್ಮ ತಪ್ಪುಗಳನ್ನು ತಿದ್ದುತ್ತಾ ನಮ್ಮನ್ನು ಏರಿದ ಧ್ವನಿಯಲ್ಲಿ ಗದರಿಸುತ್ತಿದ್ದರು, ಬೈಯುತ್ತಿದ್ದರು; ನಾವು ಅವರ ನಿರೀಕ್ಷೆಯ ಮಟ್ಟದಲ್ಲಿ ಇಲ್ಲವೆಂದು ಹೀಯಾಳಿಸುತ್ತಿದ್ದರು….”
”…1994ರಲ್ಲಿ ನಾನು ಒಪ್-ಎಡ್ ಪುಟದ ಸಂಪಾದಕಿಯಾಗಿದ್ದಾಗ ಒಮ್ಮೆ ನಾನು ಸಿದ್ಧಪಡಿಸಿದ್ದ ಪುಟವನ್ನು ಅವರಿಗೆ ತೋರಿಸಲು ಅವರ ಕೋಣೆಗೆ ಹೋಗಿದ್ದೆ. ನನ್ನ ಕೆಲಸವನ್ನು ಮೆಚ್ಚಿಕೊಂಡ ಅವರು ಇದ್ದಕ್ಕಿದ್ದಂತೆಯೇ ನನ್ನ ಅಪ್ಪಿಕೊಂಡು ನನಗೆ ಬಲವಂತದ ಕಿಸ್ ನೀಡಿದರು. ಈ ಕ್ಷಣಾರ್ಧದ ಲೈಂಗಿಕ ದಾಳಿಯಿಂದ ತತ್ತರಿಸಿದ ನಾನು ಗೊಂದಲದ ಗೂಡಾಗಿ ಕೋಣೆಯಿಂದ ಹೊರಬಂದೆ; ಆಗ ನನಗೆ 23 ವರ್ಷ ವಯಸ್ಸಾಗಿತ್ತು….”
”…. ಅದಾಗಿ ಕೆಲವು ತಿಂಗಳ ಬಳಿಕ ತಾಜ್ ಹೊಟೇಲ್‌ನಲ್ಲಿ ಮತ್ತೆ ಇದೇ ರೀತಿಯ ದಾಳಿಯನ್ನು ಅಕ್‌ಬರ್ ನನ್ನ ಮೇಲೆ ನಡೆಸಲು ಮುಂದಾದರು; ನಾನು ವಸ್ತುತಃ ಹೋರಾಡಿ ಹೊರ ಬಂದೆ; ಆತ ನನ್ನ ಮುಖದ ಪರಚು ಗಾಯ ಮಾಡಿದರು. ಇದೇ ರೀತಿ ಪುನಃ ಪ್ರತಿರೋಧಿಸಿದರೆ ನನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಅಕ್‌ಬರ್ ನನಗೆ ಬೆದರಿಕೆ ಒಡ್ಡಿದರು” ಎಂದು ಮಹಿಳೆ ತನ್ನ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಆದರೆ ಈಕೆಯ ಆರೋಪಗಳನ್ನು ಅಕ್‌ಬರ್ ಅವರ ವಕೀಲರು ಸಾರಾಸಗಟು ಸುಳ್ಳೆಂದು ಹೇಳಿರುವುದಾಗಿ ವಾಷಿಂಗ್‌ಟನ್ ಪೋಸ್ಟ್ ವರದಿ ಮಾಡಿದೆ.